ಸವಿದ, ಸಹಿಸಿದ, ವರ್ಜಿಸಿದ ಹಳೆಯ ನೆನಪಿನ ಬುತ್ತಿಗೆ ಅರ್ಘ್ಯ ನೀಡಿ ಭೂತಕ್ಕೆ ತಳ್ಳಿ, ಹೊಸ ಬದುಕಿನ ಭರವಸೆಯ ಹೊಸತಿಲಲ್ಲಿ...
ಬರುವುದಾ ಇನ್ನಾದರೂ ಹೊಸತನ?
ಬದುಕಿನ ಮಗ್ಗುಲಲ್ಲಿ ಧುತ್ತೆಂದು ನಿಂತ ಅಗಾಧ ಅಡೆತಡೆಗಳು ಅಂದುಕೊಂಡಿದ್ದಕ್ಕಿಂತ ಸಲೀಸೇ ಅನ್ನುವಷ್ಟು ಹಗುರುತನದಲ್ಲಿ ಪಕ್ಕ ಸರಿದಾಗ ಮೂಡಿದ ಹರುಷ, ಆ ಹಗುರಿನ ಜೊತೆಜೊತೆಗೆ ಜೀವನಪೂರ ಜೊತೆವುಳಿದ ಮಗ್ಗಲಿನ ಸಿಗುರು. ಒಟ್ಟಿನಲ್ಲಿ ಅಶ್ವಥಾಮನ ಚಿರಂಜೀವಿತನ.. ಜೊತೆಗೆ ಮಾಗದ, ಆರದ ಮಸ್ತಕದ ಗಾಯ.
ಇರಲಿ..
ವರ್ಷ ಸವಿಸಿದ್ದು ಸಾಕು..ಇನ್ನಾದರೂ ವರ್ಷವನ್ನ ಹರ್ಷದಲ್ಲಿ ಬದುಕುವ ಹಂಬಲ.
"ಇನ್‌ದಿನೋ ದಿಲ್‌ಮೆರಾ
ಮುಜ್ಸೆ ಏ ಕೆಹ್ ರಹಾ
ತೂ ಖ್ವಾಬ್ ಸಜಾ
ತೂ ಜೀಲೇ ಜ಼ರಾ
ಹೈ ತುಜೆ ಭಿ ಇಜ಼ಾಜತ್
ಕರ್ಲೆ ಖುದ್ ಸೆ ಮೊಹಬ್ಬತ್
ಅಷ್ಬಕ್ಕೂ ಬದಲಾದದ್ದೇನು?
ತುಂಬಾ!!! ಮಾಗದ ವೃಣದಂತಿದ್ದ ಹಲವು ಸಂಬಂಧಗಳ ಮಹಾಪ್ರಸ್ಥಾನ( ವ್ಯವಕಲನ), ಕಷ್ಟದ ಹಾದಿಯಲ್ಲಿ ಗ್ರೀಷ್ಮೃಋತುವಿನ ಮಲಯ ಮಾರುತದಂತೆ ತಂಪೆರೆದ ಹಲವು ಹೆಸರೇ ಬೇಡದ ಸಂಬಂಧಗಳು (ಸಂಕಲನ). ಕಳೆದುಕೊಂಡಿದ್ದಕ್ಕೆ ಹೋಲಿಸಿದರೆ ಪಡೆದಿದ್ದೇ ಅಧಿಕ.
ಹಿಂದಿರಲಿಲ್ಲವಾ!! ಇಂದಿನದರಲ್ಲೇನು ಅಂಥಾ ವಿಶೇಷ. ಇಲ್ಲ! ಎಳ್ಳಷ್ಟೂ ಇಲ್ಲ. ಅರ್ಜುನನ ಬತ್ತಳಿಕೆಗೆ ಸರ್ಪಾಸ್ತ್ರದ ಜೊತೆಗೆ ಪಾಶುಪತಾಸ್ತ್ರ. ಅವುಗಳ ನೆಲೆಯಲ್ಲಿ ಅವಕ್ಕೇ ಅವೇ ಸಾಟಿ. ಇನ್ನಾದರೂ ಹೂಡಲೇ 18 ಪರ್ವದಿನದ ಕುರುಕ್ಷೇತ್ರ.
ಯಾರೊಂದಿಗೆ!? ಗತಿಸಿದ ಭೂತದೊಂದಿಗೆ?
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ!!
ಅದು ಅನವಶ್ಯಕ!!
ಮತ್ತಾರೊಂದಿಗೆ!? ಮಸುಕಾದ ಭವಿಷ್ಯತ್ತಿನೊಡನೆ? ಗಾಳಿಯೊಡನೆ ಗುದ್ದಾಟದ ವ್ಯರ್ಥ ಯತ್ನ.
ಇನ್ನಾರೊಂದಿಗೆ!? ಹ್ಮ್ಮ್ಮ್ !!! ಹೊಳೆಯಿತು. ಹಾದಿ ಬಿಟ್ಟ ವರ್ತಮಾನದೊಂದಿಗೆ? ಹೌದು, ಅತ್ಯವಶ್ಯಕ.
ಕೃಷ್ಣ ? ಇದ್ದ, ಇದ್ದಾನೆ, ಇರುತ್ತಾನೆ (ಇದಲ್ಲವೇ ಪೃಷ್ಠ ಗಾಂಚಲಿ ಅಂದರೆ 😹). ಬದುಕಿನ ಗಾಢಾಂಧಕಾರದಲ್ಲಿ ಭರವಸೆಯ ಕಿರಣ ಬೀರಲು, ಕಾಲ ಕಾಲಕ್ಕೆ ಕಿಲುಬೆಣ್ಣೆ ಸುರಿದು ಹಾದಿಗೆ ತರಲು.
ಸಂಗಡ? ಅಮೀನುಲ್ಲನ ಅದೃಷ್ಟ ಅಷ್ಟು ಕೆಟ್ಡಿಲ್ಲ. ಪಂಚ ಪಾಂಡವರಿಲ್ಲದಿದ್ದರೂ ಇರುವ ಮೂರು ಮತ್ತೊಬ್ಬ ಮನಸ್ಸಲ್ಲಿ ಮೂಡಿಸಿರುವ ಭರವಸೆ ಕಮ್ಮಿಯೇ!!? ಉಳಿದೆಲ್ಲೆಡೆ ಕೈಕೊಟ್ಟ ಕಾಣದ ದೇವರು ಈ ಒಂದು ವಿಷಯದಲ್ಲಿ ಕೈ ಹಿಡಿದಿದ್ದಾನೆ. ಜೊಳ್ಳೆಲ್ಲಾ ತೂರಿ ಕಾಳಷ್ಟೇ ಉಳಿದ ಈ ಘಳಿಗೆಯಲ್ಲಿ ಅನಿಸಹತ್ತಿರುವುದು
"ಸಗ್ಗದ ಸಿರಿ ಬಂತೊ ನನ್ನ ಬದುಕಲಿ
ಸುಗ್ಗಿಯ ಸೊಬಗಿಂದ"
ಇರಬಹುದೇ ಇದು? ಅದೇ ಕಾದು ಕುಳಿತ ಅಮೃತಘಳಿಗೆ. ಅದೇ ಭರವಸೆಯಲ್ಲಿ ಬದುಕುವ ಹಂಬಲ ತಾನೇ ತಾನಾಗಿದೆ.
ಹಳೆ ಬೇರು, ಹೊಸ ಚಿಗುರು ಸೇರಿದರೆ ಮರ ಸೊಗಸು. ಕಲಿತ ಪಾಠ(ಕಲಿತಿದ್ದೇ ಆದರೆ), ಅಳವಡಿಸಿಕೊಂಡ ಅನುಭವ ( ತಿಳಿದಿದ್ದೇ ಆದರೆ) ಹಿಂದನದನ್ನು ಪುನರಾವರ್ತಿಸುವುದಿಲ್ಲವೆಂಬ ನೆಮ್ಮದಿ. ಆ ಒಂದು ಧೈರ್ಯದಿ ಹೊಸತನದೆಡೆಗೆ ಮುನ್ನಡಿಯಿಡುವ ಅದಮ್ಯ ಬಯಕೆ.
"ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ,
ಹರಿತsದ ಭಾವ, ಬೆರಿತsದ ಜೀವ ಅದರೊಳಗೆ ಒಳಗೆ ಒಳಗೆ.
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್‌ನಿಮ್ಮ ಆತ್ಮಗಳಿಗೆ.
ಅಂಬಿಗನು ಬಂದ, ನಂಬಿಗನು ಬಂದ ಬಂದsದ ದಿವ್ಯಗಳಿಗೆ"
ಅಂಬಿಗ, ನಂಬಿಗ, ಸಮಯ ಎಲ್ಲಾ ಕಕ್ಷೆಯಲ್ಲಿ ಸಮನಾಂತರದಲ್ಲಿ ಉಪಸ್ಥಿತರಿರುವ ಈ ಹೊತ್ತಲ್ಲಿ, ಕೋಲನೂರಿ ಅವಸಾನದಂಚಿಗೆ ತೆವಳುತ್ತಿರುವ 2021, ಅಂಬೆಗಾಲನಿಟ್ಟು ಬಟ್ಟಲ ಕಣ್ಣಲ್ಲಿ ಜಗತ್ತು ಕಾಣುವ ತವಕದಲ್ಲಿರುವ 2022 , ಇವರಿಬ್ಬರ ನಡುವಿನ ನಾನು ನಾನಾಗಿ ಬದಲಾವಣೆಯ ಪರ್ವಕ್ಕೆ ಮುನ್ನಡಿಯಿಡುವ ಈ ಸಂದರ್ಭದಲ್ಲಿ ಕಾಯ, ವಾಚ, ಮನಸ ಪಡೆದಿರುವುದೆಲ್ಲವನ್ನ ಅಂತೇ ಕಾಪಿಡುವ ಮನಸ್ಥೈರ್ಯದೊಡನೆ ದೇವರಲ್ಲಿ ನನ್ನ ಅರಿಕೆ ಇಷ್ಟೇ!!
"ಕೊಡು ನಮಗೆ ಇನ್ನಾದರೂ, ಸವೆಸುವ ಮಾಸಗಳನ್ನಲ್ಲ, ಸವಿಯುವ ಕ್ಷಣಗಳನ್ನ ".
ಆ ಎಲ್ಲಾ ಸವಿಯುವ ಕ್ಷಣಗಳಲ್ಲಿ ನಿಮ್ಮ ಉಪಸ್ಥಿತಿ ಅತ್ಯವಶ್ಯಕ!! (ನಿಮಗದು ಇಷ್ಟವೋ,ಗೊಳೋ😝)
ಹೊಸತನ ಗೋಡೆಗೆ ನೇತು ಹಾಕಿದ ಕ್ಯಾಲಂಡರ್ ಅಲ್ಲಷ್ಟೇ ಅಲ್ಲ.. ನಮ್ಮನಿಮ್ಮೆಲ್ಲರ ಬದುಕಲ್ಲೂ ಬಯಸಿದ ಬದಲಾವಣೆಯ ಪರ್ವ ತರಲೆಂಬ ಹಾರೈಕೆಯೊಂದಿಗೆ,
ಹೊಸ ವರ್ಷದ ಹಾರ್ದಿಕ ಶುಭಾಶಯಗಳು!!