Monday, October 4, 2010

ನ್ಯಾಯದ ಬಾಗಿಲಲ್ಲಿ ಹಿಂದೂಸ್ಥಾನದ ಹಿಂದೂಗಳು .. "ಸತ್ಯಮೇವ ಜಯತೇ”


ಕೊಂಚ ಹೆಚ್ಚೇ ನಿರಾಳನಾಗಿದ್ದೀನಿ ಅನ್ನಿಸ್ತಾ ಇದೆ. ಹಿಂದಿನ ದಿನದ ರೋಹಿತನೊಡನೆ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆವಂಥಾ ಜಂಜಾಟ, ಇಂದು ಬೆಳಿಗ್ಗೆಯಿಂದ ತಲ್ಲಣ, ಚಡಪಡಿಕೆ, ನ್ಯಾಯಾಲದಲ್ಲಿನ ಶ್ರುತಿ ಬದಲಿಸಬಹುದೆಂಬ ಆತಂಕ [ಸ್ವಾತಂತ್ರ್ಯ ಭಾರತ..ಏನು ಬೇಕಾದರೂ ಆಗಬಹುದು] ಎಲ್ಲದಕ್ಕೂ ಒಂದು ಅಂತ್ಯ ಹಾಡಿದ್ದು ಅಲಹಾಬಾದ್ ಹೈಕೋರ್ಟಿನ ಆದೇಶದಲ್ಲಿನ ಸತ್ಯದ ಪ್ರತಿಫಲನ..ಕೊಡಮಾಡಿದ ಸತ್ಯದಲ್ಲೂ ಎಲ್ಲರಿಗೂ ಸಮಪಾಲು [ವಾಸ್ತವವಾಗಿ ವಿಷಮವಾದರೂ]. ನನಗಿಂತ ಹೆಚ್ಚಾಗಿ ದೇಶದ ಜನತೆಯೂ ಅಷ್ಟೇ ನಿರಾಳರಾಗಿರಬೇಕೆನೋ? ಅಂದಂತೆ ಅಂದವರೆಲ್ಲಾರೂ [ನೀವು-ನಾವು ಟೀ ವಿಯಲ್ಲಿ ನೋಡಿದ ಎಲ್ಲಾ ವ್ಯಕ್ತಿತ್ವದ ವ್ಯಕ್ತಿಗಳು, ಅವರ ಬಿನ್ನಹ, ಕೋರಿಕೆ ಬ್ಲ..ಬ್ಲಾ] ನಡೆದಿದ್ದೇ ಆದರೆ ಇಂದಿನ ದಿನ ಭಾರತದ ಹೀನಾಸುಳಿಯ ಇತಿಹಾಸಕ್ಕೊಂದು ಸುವರ್ಣ ಮೈಲಿಗಲ್ಲು.

ಇದ್ದ ಅಸ್ತಿತ್ವ ಇತ್ತು ಎಂದು ಒಪ್ಪಲು ನಮಗೆ ಹಿಡಿದಿದ್ದು ಬರೋಬ್ಬರಿ 60 ವರ್ಷ. ಇದ್ದ ನಮ್ಮಲ್ಲಿನ ಭಂಡತನ ಇರದಿದ್ದ ಹತ್ತು ಹಲವು ಜಂಜಾಟಗಳನ್ನು ಮೈಮೇಲೆಳೆದು ಬಡಿದಾಡುವಂತೆ ಮಾಡಿದ್ದು ಇನ್ನಾದರೂ ಇತಿಹಾಸವಾಗಲಿ. ಅಂಗೈ ಗೆರೆಯಷ್ಟೇ ಪಾರದರ್ಶಕವಾಗಿದ್ದ ಸತ್ಯಕ್ಕೆ ರಾಜಕಾರಣಿಗಳ, ಮತಾಂಧರ ರಂಗಪ್ರವೇಶ ಆಲೋಚನೆಯ ದಿಕ್ಕನ್ನೇ ಬದಲಿಸಿದ್ದು ಸುಳ್ಳಲ್ಲ.

ದಿಟವಾಗಿ ಆದದ್ದಾದರೂ ಏನು? ಮಹಾಭಾರತದ ಪರ್ವದಲ್ಲೂ ರಾಮಾಯಣದ ಅಂಜನೆಯನ ಪ್ರಸ್ತಾಪದಲ್ಲೇ ರಾಮ ದ್ವಾಪರ ಯುಗದಲ್ಲೇ ಇತಿಹಾಸ ಪುರುಷನಾಗಿದ್ದುದು ಸತ್ಯವಾಗುತ್ತದೆ. ಅಂಥಾ ದ್ವಾಪರಕ್ಕೆ ಸಮಯದ ಘಂಟೆ ಕಟ್ಟಿದ ಇತಿಹಾಸಕಾರರಿಂದ ವೈಜ್ಞಾನಿಕವಾಗಿ ಕೃಷ್ಣನ ಕಾಲಮಾನ ಕ್ರಿ.ಪೂ.1500-2500 ವರ್ಷಗಳಿರಬಹುದೆಂಬ ಅಂದಾಜು [ವೇದಗಳ ಕಾಲಮಾನ ಅಂದಿನ ಪ್ರಮುಖ ನದಿ [ಕ್ರಿ.ಪೂ 4000-5000 ಅವಧಿಯಲ್ಲಿ] ಸರಸ್ವತಿ ರಾಜಸ್ತಾನದ ಮರಳಲ್ಲಿ ಮಾಯವಾಗುವವರಗೆ..]. ಅರ್ಥ 3500 ವರ್ಷಗಳಿಂದಲೂ ಜನಮಾನಸ, ಕಾವ್ಯ-ಕಬ್ಬಗಳಲ್ಲಿ ಅಯೋಧ್ಯೆ ರಾಮನ ಆವಾಸಸ್ಥಾನ. ಭಾರತೀಯರ ಆರು ಪವಿತ್ರ ನಗರಿಗಳಲ್ಲಿ ಅಯೋಧ್ಯೆಯೂ ಒಂದು. ಅಂತಿಪ್ಪ ರಾಮ ಭಾರತದ ಭಕ್ತಿಪಂಥಕ್ಕೆ ನೀಡಿದ ಸ್ಪೂರ್ತಿ ಅಪಾರ.. ಗಾಂಧಾರದಿಂದ ಮಲಬಾರವರೆಗೂ, ಕಾಮರೂಪದಿಂದ ಸೌರಾಷ್ಟ್ರದವರೆಗೂ ಪ್ರಾಚೀನ ಭಾರತದ ಸಾರ್ಥವಾಹಕರು ತಮ್ಮೊಡನೋಯ್ಯುತ್ತಿದ್ದ ಜನ, ಸಂಸ್ಕೃತಿಗಳಿಂದ ಹೊರ ದೇಶಗಳಾದ ಸಿಲೋನ್,ಇಂಡೋನೇಷಿಯಾ,ಜಪಾನ್, ತೈವಾನ್, ಚೀನಾ, ಸಿಂಗಾಪುರನಲ್ಲಿ ಹರಡಿರುವ ದೇಸೀ ಸೊಗಡಿನ ಭಾರತದ ರಾಮಾಯಣಕ್ಕೂ ಮರ್ಯಾದ ಪುರುಷ ರಾಮನೆ ಕಥಾನಾಯಕ... ಸಾವಿರ ವರುಷಗಳಿಂದಾಲೂ ಪ್ರಕೃತಿಯ ಹತ್ತು ಹಲವು ಮಜಲಿನಲ್ಲೇ ತಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ದೈವೀಕತೆಯನ್ನು ಕಂಡುಕೊಂಡಿರುವ ಭಾರತೀಯ ಸಾಂಸ್ಕೃತಿಕ ರಂಗಕ್ಕೆ ಅದು ಊಹಿಸಲೂ ಆಗದಂತಹ ಸಿದ್ದಾಂತಗಳೊಡನೆ ಪೈಶಾಚಿಕ ಪ್ರವೇಶ ಮಾಡಿದ್ದು ಇಸ್ಲಾಂ. ಆರಂಭದ ಐಶ್ವರ್ಯ ದೋಚುವಿಕೆ ಒಂದು ಹಂತಕ್ಕೆ ಬಂದಾಗ ಮರೆತಿದ್ದ ಧರ್ಮವನ್ನು ನೆನಪಿಸಿಕೊಂಡ ಇಸ್ಲಾಂ ದೊರೆಗಳು ತಮ್ಮ ಧರ್ಮದ ತೆವಲನ್ನು ಭಾರತದಲ್ಲಿನ ಮೂಲನಿವಾಸಿಗಳ ಮೇಲೆ ಹೇರಲು ಶುರುಮಾಡಿದರು.ನಂತರದ್ದೇ ಒಂದು ಕರಾಳ ಇತಿಹಾಸ...

ಆರಂಭದಲ್ಲಿ ಮೂಲ ಜನರನ್ನು ಧರ್ಮಾಂತರಿಸಿದ ಇಸ್ಲಾಂ ದೊರೆಗಳು ನಂತರದಲ್ಲಿ ಭಾರತದ ಪಟ್ಟಣಗಳ ಮೂಲ ಹೆಸರುಗಳನ್ನೂ ಅಪಭ್ರಂಶ ಮಾಡತೊಡಗಿದರು..ಪ್ರಾಯಾಗವನ್ನು ಅಲ್ಲಾಹಬಾದ್, ಆಗ್ರಾವನ್ನು ಅಕ್ಬರಾಬಾದ್, ಮಥುರಾವನ್ನು ಇಸ್ಲಾಮಾಬಾದ್,ಕಾಶಿ ಮೊಹಮದಾಬಾದ್,ಬೀದರ್ ಜಫಾರಾಬಾದ್,ಕೋಲ್ ಪಟ್ಟಣವನ್ನು ಅಲಿಘಡ್ ಹೀಗೆಹತ್ತು ಹಲವು ಮಾರ್ಪಾಡಿನ ನಂತರದಲ್ಲೇ ಹುಟ್ಟಿದ್ದು ಹಿಂದೂ ಧರ್ಮೇಯರ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಮಾಡುವ ಹೊಲಸು ಮನಸ್ಥಿತಿ. ಅದರ ಪರಿಣಾಮವೇ ಮಂದಿರಗಳನ್ನು ನಿರ್ಮೂಲನೆ ಮಾಡುವ, ಅಲ್ಲಿನ ಅಮೂಲ್ಯ ಶಿಲ್ಪಕೃತಿಗಳನ್ನ ನಿರ್ನಾಮಮಾಡಿ ಮಂದಿರದ ಜಾಗದಲ್ಲೇ ಅದೇ ಕಲ್ಲು, ಕಂಬ, ತೊಲೆ, ಬೋಧಿಗೆಗಳಿಂದ ಮಸೀದಿಗಳನ್ನು ಕಟ್ಟಿಸುವ ಹುಚ್ಚು ಚಟಕ್ಕೆ ಬಿದ್ದ ಇಸ್ಲಾಂ ದೊರೆಗಳು ಮಾಡದ ಪಾಪದ ಕೆಲಸವಿಲ್ಲ.ಘಜನಿ ದೊರೆಗಳಿಂದ ಗುಲಾಮೀ ದೊರೆಗಳವರೆಗೂ, ಬಾಬರನಿಂದ ಔರಂಗಾಜೇಬನವರಗೂ ಈ ಪದ್ದತಿ ಅನೂಚಾಗಿ ನಡೆದು ಬಂತು. 11ನೇ ಶತಮಾನದ ಆದಿಯಲ್ಲಿ ಸೋಮನಾಥ ದೇವಾಲಯವನ್ನು ಒಡೆದ ಘಜ್ನಿ ಈ ಪರಂಪರೆಗೆ ಶಂಕುಸ್ಥಾಪನೆ ಮಾಡಿದ,ಕುತುಬುದಿನನು ಮಿಹಿರ ಹವೇಲಿ[ಮೇಹ್ರೊಲಿ]ಯಲ್ಲಿ ಕಟ್ಟಿದ ಕುತುಬ್ ಮಿನಾರ್, ಅಜೇಯಮೇರು[ಅಜ್ಮೀರ್]ನ ಶಿವ ಮಂದಿರವನ್ನು ಒಡೆದು ಕಟ್ಟಿದ ವಿಶಾಲ ಮಸೀದಿ, 1528ರಲ್ಲಿ ಹಿಂದೂ ದೇಗುಲವನ್ನು ಒಡೆದು ಕಟ್ಟಿದ ಬಾಬರನ ಮಸೀದಿ, ಮೂಲ ವಿಶ್ವನಾಥ ಮಂದಿರವನ್ನು ಒಡೆಸಿ ಅದೇ ಜಾಗದಲ್ಲಿ 1669ರಲ್ಲಿ ಔರಂಗಾಜೇಬನು ಕಟ್ಟಿಸಿದ ಕಾಶಿಯ ಗ್ಯಾನವಾಪಿ ಮಸೀದಿ, 1670ರಲ್ಲಿ ಮಥುರ ಕೇಶವರಾಯನ ದೇವಸ್ಥಾನದ ಆಸ್ತಿಗಳಿಂದ ಕಟ್ಟಿಸಿದ ಮಸೀದಿ [ಮೂಲ: ಔರಂಗಜೆಬನ ಆಸ್ಥಾನದ ಮಾಸಿರ್-ಇ-ಆಲಂಗಿರಿ ಪುಸ್ತಕ] ಅಂತೆಯೇ ಬುಖಾರ, ಸಮಾರಾಖಂಡ, ಖೋಟನ್, ಪುರುಷಪುರ್, ಶ್ರೀನಗರ, ಒಡಂತಾಪುರಿ,ಅಮರಾವತಿ, ಕಾಂಚಿ, ದ್ವಾರಸಮುದ್ರ, ಅಜೇಯಮೇರು[ಅಜ್ಮೀರ್], ಗ್ವಾಲಿಯರ್,ದೇವಾಗಿರಿ, ಚಂಪ, ವಾರಣಾಸಿ,ಸರನಾಥ್, ನಾಲಂದ , ವೈಶಾಲಿ, ವಿಕ್ರಮಶೀಲ, ಶರಾವಸ್ತಿ, ಕನೌಜ್ ಹೀಗೆ ಹತ್ತು ಹಲವು ದೇವ ಮಂದಿರಗಳನ್ನು,ಜ್ಞಾನದ ಆಗರಗಳನ್ನು ನಾಶಪಡಿಸಿ ತಮ್ಮ ಕುರುಹುಗಳನ್ನು ಮೆಟ್ಟಿದ್ದು ಇದೇ ನಮ್ಮ ಪರ ಧರ್ಮ ಸಹಿಷ್ಣು ಇಸ್ಲಾಂ ದೊರೆಗಳು. [ಓದಿ: ಸೀತಾರಾಂ ಗೋಯಲ್ಲರ “HINDU TEMPLES: WHAT HAPPENED TO THEM?”

ಇರಲಿ... ತನ್ನ ಹಿರೀಕರು ಮಾಡಿದ ಘನಕಾರ್ಯವನ್ನೂ ಬಾಬರನು ಮಾಡಿದ್ದು. ಮಂದಿರವನ್ನು ಛಿನ್ನ-ಭಿನ್ನ ಮಾಡಿ ಮಸೀದಿಯನ್ನು ಕಟ್ಟಿದ ಬಾಬರ್ ನಂತರದಲ್ಲಿ ಕಾಲನ ಹೊಡೆತಕ್ಕೆ ಸಿಕ್ಕಿ ಚಿರ ನಿದ್ರೆಗೆ ಜಾರಿದ... ಇಸ್ಲಾಂ ದೊರೆಗಳ ಆಡಳಿತದಲ್ಲಿ ತಮ್ಮ ಪುಂಸತ್ವವನ್ನೇ ಕಳೆದುಕೊಂಡಿದ್ದ ಹಿಂದುಗಳು ಆ ಕುರಿತು ಆಳುವ ದೊರೆಗೆ ಏನಾದರೂ ಕೇಳುವ ಹಕ್ಕನ್ನೇ ಕಳೆದುಕೊಂಡು ನಾಯಿಗಿಂತ ಕಡೆಯಾದ ಎರಡನೇ ದರ್ಜೆ ಜೀವನ ನಡೆಸುತ್ತಿದ್ದರು. ನಂತರದ ಅಕ್ಬರ್, ಶಹಜಹಾನ್, ಔರಂಗಜೇಬ್ ಎಲ್ಲರೂ ಮಂದಿರ ಒಡೆದು ಮಸೀದಿ ಕಟ್ಟಿ ತಮ್ಮ ಇಸ್ಲಾಂ ಪುಣ್ಯದ ಬಿಂದಿಗೆಯನ್ನು ತುಂಬಿಸಿ ಕೊಂಡವರೇ.
ನಂತರದ ಬೆಳವಣಿಗೆಗಳು ಎಲ್ಲರಿಗೂ ತಿಳಿದಿರುವಂಥದ್ದೇ. ತಕ್ಕಡಿ ಹಿಡಿದು ವ್ಯಾಪಾರಕ್ಕೆಬಂದು ದೇಶದ ಭವಿಷ್ಯವನ್ನೇ ತಕ್ಕಡಿಯಲ್ಲಿ ತೂಗಿ ತಮ್ಮ ದಾಹ ನೀಗಿಸಿಕೊಳ್ಳುತ್ತಿದ್ದ ಬ್ರಿಟಿಷರ ಒಡೆದು ಆಳುವ ನೀತಿ,ದೇಶ ವಿಭಜನೆ, ಬಹಳ ಬೇಜವಾಬ್ದಾರಿತನದಿಂದ ತಡವಾಗಿ ನಮ್ಮ ದೇಶದ ಗಾಡಿಯನ್ನು ಎಳೆಯುವ ಹಂತದಲ್ಲೇ ಸಮಸ್ಯೆಗಳ ಸರಮಾಲೆ, 1960ರ ದಶಕದ ಆರೋಪ-ಪ್ರತ್ಯಾರೋಪ, 90ರ ದಶಕದ ಮಸೀದಿ ದ್ವಂಸ, ಕೋಮುಗಲಭೆ, ಈ ದಶಕದ ಗೋಧ್ರಾ ಹತ್ಯಾಕಾಂಡ, ನಂತರದ ಮಾರಣಹೋಮ.. ಎಲ್ಲದಕ್ಕೋ ಮೂಲ ಕಾರಣ ತಮ್ಮ ಇಸ್ಲಾಂ ಪುಣ್ಯದ ಬಿಂದಿಗೆಯನ್ನು ತುಂಬಿಸಿಕೊಂಡ ನಮ್ಮ ಇತಿಹಾಸದ ಆದರ್ಶ ಪುರುಷರೇ.

ಮುಖ್ಯವಾಗಿ ನಾನು ಹುಟ್ಟಿದಾಗಿನಿಂದ ಕೇಳಿ ಬರುತ್ತಿರುವ ಪ್ರಶ್ನೆ ಎಂದರೆ “ದೇವರು ನಮ್ಮಲ್ಲಿರಬೇಕು.. ನಾವು ಕಲ್ಲು ಮಣ್ಣುಗಳಿಂದ ಕಟ್ಟುವ ದೇವರಿಂದ ನಮ್ಮ ನೆಮ್ಮದಿ ಹಾಳಾಗುವಂತದ್ದಾದರೆ ಅಂಥಾ ದೇವಸ್ಥಾನ ನಮಗ್ಯಾಕೆ ಅಂತ?” ಒಪ್ಪುವ ಮಾತೇ.. ರಾಮನೂ ಮಂದಿರ ಕೇಳಲಿಲ್ಲ, ಅಲ್ಲಾಹ ಕೂಡ ಮಸೀದಿ ಬೇಡಲಿಲ್ಲ.. ಬೇಕಿರುವುದು ಅವನನ್ನು ಹುಡುಕುವ ನಮಗೆ. ವಿಗ್ರಹಾರಾಧನೆಯ ಬಗ್ಗೆ ವಿವೇಕಾನಂದರು ಸಾಮಾನ್ಯನಿಗೂ ತಿಳಿಯುವ ಹಾಗೆ ವಿವರಿಸಿದ್ದಾರೆ. ಭಗವಂತನನ್ನು ಯಾವ ವಿಗ್ರಹದಿಂದಲೂ, ಆಕಾರದಿಂದಲೂ ಮಿತಗೊಳಿಸುವುದು ಸಾಧ್ಯವಿಲ್ಲ.ಅವನು ಅನಂತ, ನಿರಾಕಾರ, ನಿರ್ಗುಣ;ರೂಪ, ಕಾಲ,ದೇಶಗಳಿಗೆ ಆತ ಅತೀತ.ಆದರೆ ಜ್ಞಾನ ಮಾರ್ಗದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಚಿಂತಿಸುವವನು ಮಾತ್ರ ಆ ಮಾತನ್ನ ಹೇಳಬೇಕು.ಆಧ್ಯಾತ್ಮಿಕ ಜೀವನದ ಆರಂಭದಲ್ಲೇ ಇಂಥ ಗಹನವಾದ, ಅಮೋಘವಾದ ಕಲ್ಪನೆಯು ಯಾರಿಗೂ ಬರುವುದಿಲ್ಲ. ಭಗವಂತನನ್ನು ನಿರಾಕಾರ, ನಿರ್ಗುಣ ಎನ್ನುವುದು ಬಹಳ ಸುಲಭ. ಆದರೆ ಹಾಗೆ ಭಾವಿಸಿ ಆರಾಧಿಸುವುದು ಸಾಮಾನ್ಯನಿಗೆ ಮೀರಿದ ವಿಷಯ. ಸಾಮಾನ್ಯ ಮನುಷ್ಯನ ಚಿತ್ತವನ್ನು ಕೇಂದ್ರೀಕರಿಸಲು ವಿಗ್ರಹವು ಒಂದು ಮಹತ್ತರ ಸಾಧನ.ಸಾಧಕನ ಊರ್ಧ್ವಮುಖಮಾರ್ಗದಲ್ಲಿ ಇರುವ ಸಹಾಯಕ ಏಣಿ ವಿಗ್ರಹ.ಹಾಗೆ ನೋಡಿದರೆ ನಿರಾಕಾರದ ತತ್ವವನ್ನು ಪರಮಾವಧಿಗೆ ಹಿಂದೂಗಳಷ್ಟು ಒಯ್ದವರೇ ಇಲ್ಲ. ಹಾಗಿದ್ದೂ ನಾವು ಸಕಾರಕ್ಕೆ ಪ್ರಾಶಸ್ತ್ಯ ಕೊಟ್ಟಿದ್ದೇವೆ. ಹಿಂದೂ ಧರ್ಮದ ವೈಶಾಲ್ಯ ಇರುವುದೇ ಅಲ್ಲಿ. ಆಧ್ಯಾತ್ಮದ ಹಾದಿಯಲ್ಲಿ ಒಂದು ಮಟ್ಟದವರಗೆ ಸಾಗಿರುವವನ ಅಭಿಪ್ರಾಯವನ್ನೇ ಉಳಿದ ಎಲ್ಲರ ಮೇಲೂ ಬಲವಂತವಾಗಿ ಹೇರುವುದು ಧಾರ್ಮಿಕ ಅಸಹಿಷ್ಣುತೆಯಾಗುತ್ತದೆ. ನಿರಾಕಾರ ತತ್ವವನ್ನೇ ಎತ್ತಿ ಹಿಡಿದ ಶಂಕರಾಚಾರ್ಯರು ಶಾರದಾದೇವಿಯ ವಿಗ್ರಹವನ್ನು ಯಾಕೆ ಸ್ಥಾಪಿಸಿದರು? ಸಾಮಾನ್ಯ ಜನರಾದ ನಮಗಾಗಿ. ನಾವುಗಳೂ ಶಂಕರಾಚಾರ್ಯರಂತಾದ ಮೇಲೆ ನಮಗೆ ಆ ವಿಗ್ರಹ ಬೇಕಿಲ್ಲ. ಅಷ್ಟೇ ಇದರ ಮೂಲ ತತ್ವ. ಅಲ್ಲಾಹ್ ನಿಗೆ ರೂಪ ಇಡದ ಮುಸಲ್ಮಾನರೂ ತಮ್ಮ ಚಿತ್ತ ಕೇಂದ್ರೀಕರಿಸಲು ಬಳಸುವುದು ಕಾಬಾದ ಚಚ್ಚೌಕ ಮಂದಿರವನ್ನೇ, ಇಸ್ಲಾಂ ನಿಷೇದಿಸಿದ ಸಮಾಧಿಪೂಜೆ, ಹರಕೆ, ಸೇವೆ ಎಲ್ಲಾ ಇಸ್ಲಾಮಿಯರು ಬಳಸುವ ಏಕಾಗ್ರತೆಯ ಸಾಧನೆಗಳೆ.(!!!). ವಿಗ್ರಹಾರಾಧನೆಯನ್ನು ಒಪ್ಪದ ಕ್ರಿಶ್ಚಿಯನ್ನರೂ ಹಲವು ಬಗೆಯಲ್ಲಿ ವಿಗ್ರಹಾರಾಧಕರಾಗಿದ್ದಾರೆ.ಮೈಕಲ್ ಎಂಜಲೋ ಮೊದಲಾದವರು ಕ್ರೈಸ್ತ ಮತದ ಕತೆ ಪೌರಾಣಗಳನ್ನು ತಮ್ಮ ಕುಂಚದಲ್ಲಿ ಚಿತ್ರಿಸಿದ್ದಾರೆ. ಶಿಲುಬೆಗೇರಿದ ಕ್ರಿಸ್ತನ ಪಟವೆ ಎಲ್ಲೆಲ್ಲೂ ಇದೆ. “ಪರಲೋಕದಲ್ಲಿರುವ ನಮ್ಮ ತಂದೆಯೇ...” ಅಂತ ಅವರು ಪ್ರಾರ್ಥನೆ ಮಾಡುವಾಗ ಅವರ ಮನಸ್ಸಿನಲ್ಲಿ ಯಾವುದಾದರೂ ಒಂದು ಆಕಾರ ಮೂದೇ ಮೂಡುತ್ತದೆ.ಚಿತ್ರಕ್ಕೆ ನಮ್ಮಂತೆ ಹೂವು ಗಂಧಗಳಿಂದ ಪೂಜೆ ಮಾಡದೆ ಇರಬಹುದು. ಆದರೆ ಅವರು ಮೇಣದ ಬತ್ತಿ ಹೊತ್ತಿಸಿ ಪ್ರಾರ್ಥಿಸುವುದೂ ಸಗುಣ ಸ್ವರೂಪವಾದ ಚಿತ್ರಕ್ಕೇ. ಅದಕ್ಕೆ ಹೇಳುವುದು... ವಿಗ್ರಹಾರಾಧನೆ ಪ್ರವೃತ್ತಿಯನ್ನು ಸಂಪೂರ್ಣವಾಗಿ ನಾಶಗೊಳಿಸಲು ಯಾರಿಗೂ ಸಾಧ್ಯವಿಲ್ಲ. ಅದಕ್ಕೇ ತಕ್ಕ ಸ್ಥಾನ ಕೊಟ್ಟು ಅದನ್ನೇ ಮುಕ್ತಿಮಾರ್ಗದಲ್ಲಿ ಭಾವರೂಪಕವಾಗಿ ನಾವುಗಳು ಏಕೆ ಉಪಯೋಗಿಸಬಾರದು?

ಮಂದಿರ, ಪ್ರಾರ್ಥನಾ ಸ್ತಳಗಳನ್ನು ದ್ವಂಸಮಾಡುವುದನ್ನು ಜೈನರು, ಬೌದ್ಧರೂ, ಶೈವರು, ವೈಷ್ಣವರು,ಕ್ರಿಸ್ತರು ಸೇರಿದಂತೆ ಯಾರ್ಯಾರ ಧರ್ಮಗ್ರಂಥಗಳೂ ಒಪ್ಪುವುದಿಲ್ಲ.. ಒಡೆಯುವಂತೆ ಹೇಳಿಲ್ಲ. ಅಪರೂಪಕ್ಕೆ ಯಾವನಾದರೂ ಪುಂಡ ಆ ಕೆಲಸ ಮಾಡಿದರೆ ಅವನನ್ನು ತಮ್ಮ ಪಂಥದ ಮಾದರಿ ಅಂತ ಪರಿಗಣಿಸುವುದೂ ಇಲ್ಲ. ಆದರೆ ಪರಧರ್ಮೀಯರ ಪೂಜಾಸ್ಥಳಗಳನ್ನು ಒಡೆಯುವುದು, ಕತ್ತಿ ಹಿಡಿದು ಧರ್ಮಾಂತರಿಸುವುದು, ಸೋತವರನ್ನು ಸಾವಿರ ಸಾವಿರಗಟ್ಟಲೆ ಗುಲಾಮರಾಗಿ ಒಯ್ಯುವುದು ಇವೆಲ್ಲಾ ಇಸ್ಲಾಂ ಧರ್ಮಸ್ಥಾಪಕರೆ ಮಾಡಿ ಮಾದರಿ ಹಾಕಿಕೊಟ್ಟಿರುವ ಮೂಲ ನಂಬಿಕೆಗಳು. ಹಿಂದೂ ಧರ್ಮದಲ್ಲೂ ಇಂಥ ಹತ್ತು ಹಲವು ಒಪ್ಪಲಾಗದ ನಂಬಿಕೆಗಳಿವೆ.. ನಮ್ಮ ಹಿಂದಿನವರ ಹಲವು ತಪ್ಪುಗಳನ್ನು ನಾವು ಒಪ್ಪಿ ಹೊಣೆಗಾರಿಕೆಯಿಂದ ಮನು ಮೊದಲಾದ ಧರ್ಮಶಾಸ್ತ್ರಕಾರಾರ ಶ್ರೇಣಿಕರಣದ ಅಂಶಗಳನ್ನು ತಿರಸ್ಕರಿಸಿ ಸರ್ವರೂ ಸಮಾನರೆಂಬ ತತ್ವದ ಆಧಾರದ ಮೇಲೆ ನಾವು ನಮ್ಮ ಸಂವಿಧಾನ ರಚನೆ ಮಾಡಿಕೊಂಡಿದ್ದೇವೆ.. ದಳಿತರಿಗೆ ಹಿಂದುಳಿದವರಿಗೆ ರಕ್ಷಣೆ ಒದಗಿಸಿ , ಅವರನ್ನು ಆಗೌರವದಿಂದ ಕಾಣುವವರನ್ನು ಶಿಕ್ಷಿಸಿ, ಕೆಲವು ದೇವಸ್ಥಾನಗಳಲ್ಲಿ ಅವರನ್ನೇ ಪೂಜಾರಿಗಳನ್ನಾಗಿಸಿ ಮನುವು ಮಾಡಿದ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಅಂತಹ ಒಂದು ಹೊಣೆಗಾರಿಕೆ ಮುಸ್ಲಿಮರಲ್ಲೂ ಕಂಡುಬಂದ ಕ್ಷಣವೇ ದೇಶದ 50% ಸಮಸ್ಯೆಗಳು ಪರಿಹಾರವಾಗುತ್ತದೆ. ಆದರೆ ಅಂತಹ ಒಂದು ತಿದ್ದಿಕೊಳ್ಳುವ ಅವಕಾಶವನ್ನು ನಾವು ಮುಸ್ಲಿಂ ಸಮುದಾಯಕ್ಕೂ ಕೊಡಮಾಡಬೇಕು.ತಿದ್ದಿಕೊಳ್ಳುವ ಮೊದಲು ತಪ್ಪಿನ ಅರಿವಾಗಬೇಕು. ಹಿಂದಿನ ಇಸ್ಲಾಂ ರಾಜರು, ಮುಸಲ್ಮಾನರು ಮಾಡಿದ ತಪ್ಪುಗಳನ್ನು ಪ್ರಾಂಜಲವಾಗಿ ಅರಿತು ಒಪ್ಪಿಕೊಳ್ಳುವ ಹೊಣೆಗಾರಿಕೆ ಇಂದಿನ ಮುಸಲ್ಮಾನರಿಗೆ ಬರಬೇಕು. ಹೊಣೆಗಾರಿಕೆ ಬೇಡವೆಂದರೆ ತಮ್ಮ ಹಿರಿಯರ ತಪ್ಪುಗಳನ್ನು ತಾವು ಸಮರ್ಥಿಸುತ್ತೀವಿ ಅಂತಲೇ ಅರ್ಥ. ತಪ್ಪುಗಳನ್ನು ಅರಿಯದೆ ಆ ತಪ್ಪುಗಳನ್ನು ತಿದ್ದಿಕೊಳ್ಳುವುದೆಂತು? ತಪ್ಪುಗಳನ್ನು ಪ್ರಾಮಾಣಿಕವಾಗಿ ಒಪ್ಪಿದ್ದೇ ಆದಲ್ಲಿ ನಾವು ಯಾವುದನ್ನ ಮಾಡಬಾರದು, ಮಾಡುವುದಿಲ್ಲ ಎನ್ನುವ ಹೊಣೆಗಾರಿಕೆ ತಂತಾನೇ ಬರುತ್ತದೆ. . ಹಿಂದಿದ್ದ ಜನ-ಮನ ಮಾಡಿದ ತಪ್ಪು-ಒಪ್ಪುಗಳಿಗೆ ಇಂದಿನವರು ಹೊರುವ ಹೊಣೆಗಾರಿಕೆಯಲ್ಲೇ ನಮ್ಮ ಮುಂದಿನವರ ಭವಿಷ್ಯವಿದೆ. ನಮ್ಮ ಪೂರ್ವಿಕರ ಯಾವ ಕೃತ್ಯಗಳನ್ನು ಪುರಸ್ಕರಿಸಬೇಕು, ತಿರಸ್ಕರಿಸಬೇಕು ಅನ್ನುವ ಸಾಮಾನ್ಯ ಪ್ರಜ್ಞೆಯೂ ನಮ್ಮಲ್ಲಿಲ್ಲದಿದ್ದರೆ ನಮ್ಮ ಮುಂದಿನ ತಲೆಮಾರಿನ ಸಂತಸವನ್ನು ನಾವೇ ಕೈಯ್ಯರೆ ಹಾಳುಮಾಡಿದಂತೆ. ಯಾಕೆಂದರೆ ನಮ್ಮ ಹಿರಿಯರು ಮಾಡಿದ್ದು ಅದನ್ನೇ ತಾನೇ :-)

ಪರ ಪೂಜಾ ಸ್ತಳಗಳನ್ನು ಒಡೆದ ಇತಿಹಾಸದ ಕ್ಷಣಗಳನ್ನು ತಿರಸ್ಕರಿಸುವುದು, ಧರ್ಮಕ್ಕಿಂತ ದೇಶ ದೊಡ್ಡದು, ನಿಷ್ಠೆ ದೇಶಕ್ಕೇ ಹೊರತು ಧರ್ಮಕ್ಕಲ್ಲ , ಪ್ರತಿಯೊಬ್ಬರ ಧಾರ್ಮಿಕ ಮನೋಭಾವನೆಗಳನ್ನ ಗೌರವಿಸುವುದು, ಇರುವ ನಾಡಲ್ಲಿ ಅಲ್ಲಿಯವರಂತೆ ಮುಕ್ತ ಮನಸ್ಸಿನಿಂದ ಬೆರೆಯುವುದು,ದೇಶದ ಆಪತ್ಕಾಲದಲ್ಲಿ ನಮ್ಮ ನಿಷ್ಠೆ ಇರಬೇಕಿದ್ದು ನಮ್ಮ ಮಾತೃಭೂಮಿಗೇ. ಧರ್ಮದ ಆಧಾರದಲ್ಲಿ ನನ್ನ ನಿಷ್ಠೆ ಮೆಕ್ಕಾಗೆ, ನನ್ನ ನಿಷ್ಠೆ ಬೆತ್ಲಹೆಂಗೆ, ದೇಶದ ಮನೆ ಹಾಳಾಗಿಹೋಗಲಿ ಅನ್ನುವ ತಾಯ್ಗಂಡತನ ಬೇಡ ಎಂಬಂಥಾ ಸೂಕ್ಷ್ಮ ವಿಷಯಗಳನ್ನು ಎಲ್ಲರಿಗೂ ಹೇಳಿಕೊಡುವ ಅವಶ್ಯಕತೆ ಇಲ್ಲ.. ತಮ್ಮ ಹಿಂದಿನಿಂದ ಬಂದ ಆಚಾರಗಳಲ್ಲಿನ ಮಂಕನ್ನು ಕೊಂಚ ಕೊಡವಿದರೆ ಎಲ್ಲಾ ತಂತಾನೇ ಬರುತ್ತದೆ. ಕೊಡವುವಷ್ಟು ಪ್ರಜ್ಞಾವಂತಿಕೆ, ತಿಳುವಳಿಕೆ ಹಿಂದೂಗಳ ಸಹ ಬಾಂಧವರಿಗೆ ಬೇಕಷ್ಟೆ.

ಒಟ್ಟಿನಲ್ಲಿ ಸರ್ವರಿಗೂ ಸಮಾನವಾದ ತೀರ್ಪು ಬಂದಿದೆ. ಮಂದಿರವಿದ್ದ ಸ್ಥಳ ಮತ್ತೆ ಹಿಂದುಗಳಿಗೆ ಸಿಕ್ಕಿದೆ. ಅಷ್ಟು ಸಂತೋಷ ನಮಗೆ ಸಾಕು. ಮುಸ್ಲಿಮರಿಗೂ ತಮ್ಮದೇ ಆದ ಪಾಲು ಸಿಕ್ಕಿದೆ. ಇನ್ನಾದರೂ ಹೊಣೆಗಾರಿಕೆಯಿಂದ ವರ್ತಿಸುವುದನ್ನು ಕಲಿಯೋಣ. ಭೂತದಲ್ಲಿ ಬದುಕುವ ಹುಚ್ಚು ಸಾಹಸ ಬೇಡ... ವರ್ತಮಾನದ ತೀರ್ಪು ಭೂತಕ್ಕೆ ಬೀಗ ಜಡಿದಿದೆ, ಮುಂದಿನದೇನಿದ್ದರೂ ಭವಿಷ್ಯದ್ದು. ನಮ್ಮ ಜೊತೆ ಜೊತೆಯಲ್ಲೇ ಬದುಕುವ ಮುಸ್ಲಿಂ ಬಾಂಧವರೊಡನೆ ನಮ್ಮ ಸಹಬಾಳ್ವೆ ಸಾಗಲೇಬೇಕಿದೆ. ಮಂದಿರ-ಮಸೀದಿ ಪಕ್ಕದಲ್ಲಿದ್ದರೂ ಅದು ಮುಂದೊಂದು ದಿನ ಇತಿಹಾಸದ ಕ್ಷಣಗಳನ್ನು ಮತ್ತೆ ಸೃಷ್ಟಿಸದೆಂಬ ನಂಬಿಕೆ ನನ್ನದು. ನಮ್ಮ ದೇಶದ ಮೇಲೆ ಬಾಂಬನ್ನಿಕ್ಕುವ ಪಾಕಿಸ್ತಾನವನ್ನೇ ನಾವು ನಂಬಿ ಮಾತುಕತೆಗೆ ಕೂರುತ್ತೇವಂತೆ … ಅಂತಹುದರಲ್ಲಿ ನಮ್ಮಲ್ಲೇ ಒಂದಾಗಿರುವ ನಮ್ಮ ಮುಸ್ಲಿಂ ಬಾಂಧವರನ್ನು ನಂಬದೆ ಇನ್ಯಾರನ್ನು ನಂಬುವುದು?

ರಾಮ ರಾಜ್ಯದ ಭರವಸೆಯಲ್ಲಿ

ನಿಮ್ಮ
ಆವೀನ್

ಓದಿ:
1. ಸೀತಾರಾಂ ಗೋಯಲ್ಲರ “ದ ಹಿಂದೂ ಟೆಂಪಲ್ಸ್: ವಾಟ್ ಹ್ಯಾಪ್ಪಂಡ್ ಟು ದೆಮ್”.

2. ಸೀವೆಲ್ಲನ “ದ ಫರ್ಗಟ್ಟನ್ ಎಂಪರರ್”
3. ಜದುನಾಥ ಸರ್ಕಾರರಿಂದ ಅನುವಾದಿತ “ಮಾಸಿರ್-ಈ-ಆಲಂಗೀರ್”

3 comments:

ಜಲನಯನ said...

ಅವೀನರ ತರ್ಕ ಭೂತದ ವಿವರಣೆ ಎಲ್ಲ ಒಪ್ಪುವಂಥದೇ...ಹೌದು ಅತಿರೇಕಗಳು ಆಗಿವೆ ಎಲ್ಲರಿಗೂ ಅವರವರ ಅನ್ನ ಮುಖ್ಯ ಹಾಗೆಂದು ಪಕ್ಕದವನ ಅನ್ನ ಕದಿಯುವುದು ತಪ್ಪು. ನಿಜ ನಿಮ್ಮ ಮಾತು ಭೂತವನ್ನು ಹೂತು ವರ್ತಮಾನಕ್ಕೆ ಬೆಲೆಕೊಟ್ಟು ಭವಿತವನ್ನು ನಂಬೋಣ..ವಿಷಾದವೆಂದರೆ ಯುವ ಸಮಾನ್ಯನ ಸ್ಥಿತ ಪ್ರಜ್ಞೆ ಮತ್ತು ಸಹಬಾಳ್ವೆ ಮನಸು ನಮ್ಮ ನಾಯಕರು ಮತ್ತು ಧರ್ಮದ ಹೆಸರಲ್ಲಿ ಹಚ್ಚುವವರಲ್ಲಿಲ್ಲ..ಇನ್ನೂ ವಿಡಂಬನೆಯೆಂದರೆ ಅವರಿಗೆ ಎಲ್ಲಿಲ್ಲದ ಸನ್ಮಾನ ಮಾಡುವುದೂ ನಾವೇ..... ನ್ಯಾಯಾಲಯದ ತೀರ್ಪು ಬಹು ಬುದ್ಧಿವಂತ ಮತ್ತು ದೂರದರ್ಶಿಯಾಗಿದೆ ಇದನ್ನು ಒಪ್ಪೋಣ ಜೊತೆ ಜೊತೆ ನಡೆಯೋಣ ನಮ್ಮ ಧ್ಯೇಯ ಮಾತೃಭೂಮಿಯ ಅಭಿವೃದ್ಧಿಯಾಗಲಿ...

sunaath said...

ಆವೀನ,
ಇತಿಹಾಸದ ಪುನರಾವರ್ತನೆಯಾಗುವದು ಬೇಡ. ನೀವು ಹೇಳುವದು ಸರಿ. ಇನ್ನಾದರೂ ನಾವೆಲ್ಲರೂ ಭಾರತೀಯರಾಗಿ ಬದುಕಬೇಕು.

ಅನಿಕೇತನ ಸುನಿಲ್ said...

ಪ್ರೀತಿಯ ಅವೀನ್,

ಲೇಖನ ಅರ್ಥಪೂರ್ಣ ಹಾಗು ಸಕಾಲಿಕ.

ವಿಗ್ರಹರಾಧನೆಯ ಬಗ್ಗೆ ಹೇಳುವಾಗ ತುಂಬಾ ಪ್ರೌಢವಾಗಿ ಬಂದಿದೆ ಬರಹ.....ಅಂತ್ಯವೂ ಸ್ಥಿತಿಪ್ರಜ್ನತೆಯಿಂದ ಕೂಡಿದೆ.
ಉಳಿದಂತೆ ಹೊಸತೇನೂ ಕಾಣಿಸಲಿಲ್ಲ.


ಉತ್ತಮ ಬರಹಕ್ಕೆ, ಚಿಂತನೆಗೆ ಹಚ್ಚಿದ್ದಕ್ಕೆ ಧನ್ಯವಾದಗಳು.
ಸುನಿಲ್.