Wednesday, September 9, 2009

ಕಾರ್ನಾಡರ ಯಯಾತಿ..ಹಾಗೆ ಒಂದು ಮೆಲುಕು...


*********************************************
ಒಮ್ಮೊಮ್ಮೆ ದಾರಿಗುಂಟ ಹೋಗುವಾಗ, ನಮ್ಮ ದಾರಿ
ಒಡೆದು ಎರಡಾಗುವುದಿಲ್ಲವೇ? ನಾವು ಒಂದನ್ನು ಮಾತ್ರ ಆರಿಸಬಹುದು. ಅದರೊಡನೆ ತತ್ಪೂರ್ತ ನಮ್ಮ
ದಾರಿಯೂ ಗೊತ್ತಾಗುತ್ತದೆ.ಆದರೆ ನಮ್ಮ ಹಿಂದೆ ಕಿವಿಗಳ ಸನಿಹದಲ್ಲಿ, ಕೇಳದ ದನಿಯೊಂದು
ಪ್ರಶ್ನಿಸುತ್ತಿರುತ್ತದೆ;ಆ ಇನ್ನೊದು ದಾರಿಯಲ್ಲಿ ಹೋಗಿದ್ದರೆ ಏನಾಗುತ್ತಿತ್ತು ? ಏನೇನೋ
ಆಗಬಹುದಾಗಿತ್ತು! ಆದರೆ.....ಆ ದಾರಿಯ ಗುಟ್ಟು ಅದರೊಡನೆ ಗುಟ್ಟಾಗಿಯೇ ಉಳಿಯಬೇಕು.ನಮ್ಮ
ನೇಗಿಲನ್ನು ನಾವು ಹೊತ್ತು ಮುನ್ನಡೆಯಬೇಕು.ನಾವು ಕಟ್ಟಿದ ಅಜ್ಜಿಯ ಕಥೆಯಲ್ಲಿ ನಾವೇ ಬಾಳಬೇಕು. ಇದೇ
ಜೀವನದ ದುರಂತ ಪ್ರಯೋಗ.ಇದೇ ಆಶಾವಾದದ ಮೂಲ..

**************************************************

ನಾವೆಲ್ಲಾ ಹಾಗೆಯೇ, ದಡದ ಮೇಲೆ ಕೂತು ನದಿಯ ಹಸಿರು ತಳದ ವಿಚಿತ್ರ ವಿಶ್ವವನ್ನು ನಿರೀಕ್ಷಿಸುವ ಸ್ವಪ್ನಜೀವಿಯಂತೆ.ನದಿಯ ಪ್ರವಾಹದಲ್ಲಿ ಹಾಗುವ ವಕ್ರೀಭವನ ಪರಾವರ್ತನೆಗಳೆಲ್ಲ ನಮ್ಮ ದೃಷ್ಟಿಯ ಫಲ.ಅದನ್ನೆಲ್ಲಾ ಸತ್ಯವೆಂದು ಸ್ವೀಕರಿಸುವುದರಲ್ಲೇ ನಮ್ಮ ಆನಂದವಿದೆ,ರಸಿಕತೆಯಿದೆ.ಅಲ್ಲದೆ ನದಿಯ ತಳವನ್ನು ಸರಿಯಾಗಿ ಕಾಣಬೇಕೆಂದರೆ ನಮ್ಮ ಪ್ರತಿಬಿಂಬವನ್ನು ಅದರಲ್ಲಿ ಚೆಲ್ಲಬೇಕು.ಸತ್ಯ ನಮ್ಮ ಕಾಣ್ಕೆಯ ಬದುಕು.ಜೀವನದ ನದಿಯೆಡೆಗೆ ನಾವು ನೋಡುವಾಗ ಅದರಲ್ಲಿ ಕಾಣುವ ನಮ್ಮ ಪ್ರತಿಬಿಂಬವನ್ನು ಅದರದೇ ಭಾಗವೆಂದು ಸ್ವೀಕರಿಸುವುದೂ ನಮ್ಮ ಹೊಣೆ. ಆ ಹೊಣೆ ರಸಿಕನಿಗೂ ತಪ್ಪಿದ್ದಲ್ಲ,ವಿದ್ವಾಂಸನಿಗೂ ತಪ್ಪಿದ್ದಲ್ಲ. ಇಂಥ ಹೊಣೆಯಲ್ಲೇ ನಮ್ಮ ಜೀವನದ ಮೋಜು ಇದೆ.ಆ ಹೊಣೆಗಾರಿಕೆಯ ಶಿಲುಬೆಯನ್ನೇ ನಾವು ಹೊರಬೇಕು,ಕೊನೆಗೆ ಅದರ ಮೇಲೆಯೇ ನಾವು ತೂಗಾಡಬೇಕು.ಶಿಲುಬೆ ಹೊತ್ತು ಸಾಗುವ ನಮ್ಮ ಎದುರಿಗೆ ನಕಾಶೆಯಿಲ್ಲ,ಕವಲುದಾರಿಗಳ ಜೇಡರ ಬಲೆಯಿದೆ. ....................

****************************************************


ಇನ್ನೂ ಇದೆ ......

Sunday, August 9, 2009

ದೇವರು ಎಡವಿದ್ದಾದರೂ ಎಲ್ಲಿ?





ಮನಸ್ಸು ನಿಜಕ್ಕೂ ಕದಡಿದ ರಾಡಿಯಾಗಿದೆ.

ಬೆಂಗಳೂರಿನ Busy Lifeನಲ್ಲಿ ಬ್ಲಾಗ್ ಸಹವಾಸವೇ ಬೇಡವೆಂದಿದ್ದ ನನಗೆ ಈ ಎರಡು Photoಗಳು ಕತ್ತಿನ ಪಟ್ಟಿ ಹಿಡಿದು, ಕೆನ್ನೆಗೆರಡು ಬಿಗಿದು ಬರೆಯಲು ಕೂರಿಸಿವೆ. ನನ್ನ ಬರವಣಿಗೆಯಲ್ಲಾದರೂ ಅವುಗಳಿಗೆ ನ್ಯಾಯ ದೊರೆಯಬಹುದೆಂಬ ಭರವಸೆಯೊಂದಿಗೆ..!! ನಾನಾದರೋ ದಿಕ್ಕುಗೆಟ್ಟ ದಿಕ್ಪಾಲಕನಾಗಿದ್ದೇನೆ.

ಮರ ಇಳಿದು ಜೊತೆ ಹಿಡಿದು ಕೂಡಿ ಬಾಳಲು ಕಲಿತ ಮಾನವ ಪ್ರಕೃತಿಯನ್ನು ಬೆರಗುಗಣ್ಣಿನಿಂದ ನೋಡಿದ್ದಷ್ಟೇ ಅಲ್ಲದೆ ಅದಕ್ಕೆ ದೈವತ್ವವನ್ನೂ ಕರುಣಿಸಿದ. ನೋಡಿದ ಸೃಷ್ಟಿಯೇ ಬೆರಗಾಗುವಂತೆ ಸೃಷ್ಟಿಕ್ರಿಯೆಯಲ್ಲೂ ಪ್ರಾಮುಖ್ಯತೆ ಮೆರೆದ.

"ಋತುಮಾನ ಸಂಪುಟಕೆ ಹೊಸ ಕಾವ್ಯ ಬರೆದವಳೇ
ಮಾನವ ಕುಲವ ಕಾಯುವ ತಾಯಿ"

ನಂತರ, ಪ್ರಕೃತಿ ಅವನ ದೇವರಾಯಿತು, ಬದುಕಾಯಿತು, ಬಾಳಲ್ಲಿ ಹಾಸು ಹೊಕ್ಕಯಿತು. ಅವನು ಬೆಳೆಯುವ ಪ್ರತಿ ಹಂತದಲ್ಲೂ ಅವನ ಜೊತೆಗೂಡುವ ಅರಿಷಡ್ವರ್ಗಗಳಿಗೆ ಅಪವಾದದಂತಿರುವ ಮಕ್ಕಳಲ್ಲೂ ದೇವರನ್ನು ಹುಡುಕುವ ಪ್ರಯತ್ನ ಮಾಡಿದ. ಏಕೆಂದರೆ ದೇವರೂ ಮಕ್ಕಳಷ್ಟೇ ಮೃದುವಂತೆ, ನಿಷ್ಕಲ್ಮಶವಂತೆ ಹಾಗೇ ನಿಸ್ವಾರ್ತಿಯಂತೆ ಕೂಡ..!! ಮಧ್ಯಮ ವರ್ಗದಲ್ಲಿ ಜನಿಸಿದ ನಾನು ದೇವರ ಕುರಿತು ಎಷ್ಟೋ ಕೇಳಿದ್ದೇನೆ, ಓದಿದ್ದೇನೆ.."ದೇವರು ಸರ್ವ ಶಕ್ತ, ಕರುಣಾ ಮಾಯಿ, ಅನಾಥರಕ್ಷಕ, ದೀನ ಬಂಧು.. Blaa.. Blaa.. Bli... Bli... ಅಳಿಯ ಅಲ್ಲ ಮಗಳ ಗಂಡ ಎಂಬಂತೆ ಹಲವು ಧರ್ಮಗಳಲ್ಲಿ ಅವನ ಹೆಸರು ಬೇರೆಯಾದರೂ ಅವನ ಶಕ್ತಿ ಸ್ವರೂಪ ಒಂದೇ.

" God never plays with dice"
"ವ್ಯಥೆಗಳ ಕಳೆಯುವ ಕಥೆಗಾರ ನಿನ್ನೀ ಕಲೆಗೆ ಯಾವುದು ಭಾರ"
"ಕರುಣಾಳು ಬಾ ಬೆಳಕೆ ಮುಸುಕಿಹುದು ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು"

ದಾಳದೊಡನೆ ಆಡದ ದೇವರ ಸೃಷ್ಟಿ ಅಚ್ಚು ತೆಗೆದಷ್ಟೇ ಸ್ಪಷ್ಟ. ಅವನೊಬ್ಬ ಅದ್ಭುತ ಕಲೆಗಾರ..ಪಥದಿಂದ ಸರಿಯದ ಗ್ರಹ ನಕ್ಷತ್ರಗಳನ್ನು ಸೃಷ್ಟಿಸುವುದು ಗೊತ್ತು, ಹರಿವ ನೀರಿಗೆ ದಿಕ್ಕು ತೋರಿಸುವವನೂ ಅವನೇ!! ಭೂಮಿಯ ಒಡಲಲ್ಲಿ ಲಾವಾಗ್ನಿಯನ್ನು ತುಂಬಿ, ಅದನ್ನು ಕವಚದಿಂದ ಬಿಗಿದು ಅದ ತಂಪಾಗಿಸಲು ಸಮುದ್ರಗಳನ್ನು ಸೃಷ್ಟಿಸಬೇಕೆನ್ನುವ Extraordinary Ideaಗಳೂ ಅವನಿಗೆ ಆಗಾಗ್ಗೆ ಬರುತ್ತವೆ.
ಅವನ ಕೌಶಲ್ಯವೆಷ್ಟು ಗೊತ್ತಾ?

"ನೆಲ್ಲಿಕಾಯಿ ಮರದೊಳಿತ್ತನೋ ನಮ್ಮ ಶಿವ ಕುಂಬಳಕಾಯಿ ಬಳ್ಳಿಲಿಟ್ಟನೋ
ಹೆಣ್ಣಿನಲ್ಲಿ ಅಂದವಿಟ್ಟನೋ ನಮ್ಮ ಶಿವ ಗಂಡಿನಲ್ಲಿ ಆಸೆ ಇತ್ತನೋ
ಹೆಣ್ಣು ಗಂಡು ಸೇರಿಕೊಂಡು ಯುದ್ದವನ್ನು ಮಾಡುವಾಗ ಕಾಣದಂತೆ ಮಾಯವಾದನೋ
ನಮ್ಮ ಶಿವ ಕೈಲಾಸ ಸೇರಿಕೊಂಡನೋ"

Ooops... ಎಲ್ಲದರಲ್ಲೂ Perfection ಮೆರೆದ ದೇವರು ಕೊನೆಯ ಹಂತದಲ್ಲೇ ಕೈ ಕೊಟ್ಟು ಓಡುವಷ್ಟು Idiotic ಕೆಲಸ ಮಾಡಿದ್ದೇಕೆ? ನನಗಿನ್ನೂ ಅರ್ಥವಾಗುತ್ತಿಲ್ಲ.

ಮೇಲಿನ ಎರಡು ಚಿತ್ರಗಳನ್ನು ಕ್ಷಣ ಹೊತ್ತು ದಿಟ್ಟಿಸಿ ನೋಡಿ.. ಹೇಳಿ ಕೊಂಚವಾದರೂ ವ್ಯತ್ಯಾಸ ಕಾಣುತ್ತಿದೆಯೇ? ಸ್ನಿಗ್ದ ಮಂದಹಾಸ, ಹಾಲುಗಲ್ಲ, ಏನೋ ಹೇಳ ಬಯಸುವ ಕಣ್ಣುಗಳು, ಜಗತ್ತನ್ನೇ ತನ್ನಲ್ಲಡಗಿಸಲೆಂದೇ ಮೂಡಿರುವ ಮುಗ್ದತೆ ಎಲ್ಲ... ಎಲ್ಲಾ Similar. ಅಂತಹುದರಲ್ಲಿ ದೇವರು "ಧರ್ಮ-ಕರ್ಮ"ದ ಹೆಸರಿನಲ್ಲಿ "ಮೇಲು-ಕೀಳೆನ್ನುವ" ಆಟ ಈ ಮಕ್ಕಳೊಂದಿಗೂ ಆಡುವಷ್ಟು Saddist ಯಾಕಾದ?

ಸಾಕಂತೆ ಹತ್ತು ಪದಗಳ ಬದಲು ಒಂದು ಚಿತ್ರ.ಆದರೆ ಚಿತ್ರವೂ ತನ್ನ ಒಳಾರ್ಥವನ್ನು ಬಿಂಬಿಸುವುದರಲ್ಲಿ ಸೋಲುತ್ತದೆ ಎಂಬುದು ಎಷ್ಟು ಜನಕ್ಕೆ ಗೊತ್ತು?
ಈ ಹಂತದಲ್ಲಿ ಒಂದಾಗಿ ಕಾಣುವ ಈ ಮುಗ್ದ ಕಂದಮ್ಮಗಳ ಭವಿಷ್ಯವೂ ಒಂದೇ ಆಗಿರುತ್ತದೆಂಬ ವಿಶ್ವಾಸವೇನು? ಅದನ್ನು ನೆನೆದೆ ಮನಸ್ಸು ಕಳವಳಕ್ಕೀಡಾಗುತ್ತಿದೆ.ನಮ್ಮನ್ನು ಸೃಷ್ಟಿಸಿದ ದೇವರು ಒಂದೇ ಆದರೆ ನಾಮ ಹಲವು ಎಂದು ಜಗತ್ತಿಗೆ ಮನವರಿಕೆಯಾಗುತ್ತಿರುವ ಈ ಯುಗದಲ್ಲಿ ನಮ್ಮನ್ನು ಸೃಷ್ಟಿಸಿದ ದೇವರಿಗೇ ತಾನು ಸೃಷ್ಟಿಸುವ ಕಂದಮ್ಮಗಳಿಗೆ ಒಂದು ಉಜ್ವಲ ಭವಿಷ್ಯ ನೀಡಲಾಗದ್ದು ಅಪಹಾಸ್ಯದ ಪರಮಾವಧಿಯೇ ಸರಿ!!

ಹೇಳಿ, ಸರ್ವಶಕ್ತನೆಂಬ ದೇವರನ್ನು ಸೃಷ್ಟಿಸಿದ ಮಾನವನಿಗೆ ಅವನಲ್ಲಿ "Common Sense" ಇಡಲಾಗದಷ್ಟು ದೇವರು ಕಗ್ಗಂಟಾದನೇಕೆ?

ಕಾಣದ ದೇವರೊಡನೆ ಈ ಮಕ್ಕಳೂ ಅದೇ ಪ್ರಶ್ನೆ ಕೇಳುತ್ತಿರಬಹುದೇ?

ಯಾಕೋ ಕಣ್ಣು ತುಂಬಿಬರುತ್ತಿವೆ..ಬರವಣಿಗೆಯಲ್ಲಿ ಆ ಚಿತ್ರಗಳಿಗೆ ನ್ಯಾಯ ಒದಗಿಸುವಷ್ಟು ಶಕ್ತಿ ನನ್ನಲ್ಲಿಲ್ಲ..

ಕೊಸರು:
ದಿಗಂತದೆಡೆಗಿನ ಕಿರುನೋಟ ಅನ್ವೇಷಣೆಯೋ! ವಿಶ್ಲೇಷಣೆಯೋ !!
ಹಾಲ್ಗಂಗಳಲಿ ಬಾಳ ಪ್ರತಿಬಿಂಬ, ಕಪ್ಪೋ ಬಿಳುಪೋ
ಇರಲಿ ಬಣ್ಣದ ಕನಸು, ಚಿನ್ನದ ಬದುಕು

Thursday, April 16, 2009

ಪರಿವರ್ತನ




ಪರಿವರ್ತನೆಯ ಸೊಬಗಿನ ಪರಿವೆ ಇಲ್ಲದೆ
ನಿಂತ ನೀರಂತೆ ತಾನೇ ತಾನಾಗಿಹುದು ಪರಿವರ್ತನ
ಎಲ್ಲೆಲೂ, ಎಲ್ಲಾನೂ, ಹೇಗ್ಹೇಗೋ ಪರಿವರ್ತನ
ಹಿಂದೆಂದೂ, ಮುನ್ನೆಂದೂ, ಇನ್ನೆಂದೂ
ತಾನೇ ತಾನಾಗಿಹುದು ಪರಿವರ್ತನ..

ವನದಲ್ಲಿ, ಮನದಲ್ಲಿ, ಮನೆಯಲ್ಲಿ, ಜನರಲ್ಲಿ
ಪರಿವರ್ತನ ಹಪಹಪಿಸೋ ಪರಿವರ್ತನ
ಪರಿವರ್ತನ ಜಗದೆಲ್ಲೆಡೆ ಪರಿವರ್ತನ
ನೀ ಒಲ್ಲೆನೆಂದರೂ ಮಾಡಬೇಕದರೊಡನೆ ಸಹನರ್ತನ
ಪರಿವರ್ತನ ಜಗದ ನಿಯಮ ಕಣಾ.

ಹಿಂದಿದ್ದ, ಇಂದಿರುವ, ಮುಂದಿದ್ದ, ಮುಂದಿರುವ ಜನರಲ್ಲಿ
ಸಂಚಲನ ಮಾಡಿಟ್ಟು, ಸಹಚರ್ಯೆಯಾಗಿತ್ತು, ಪರಿ ಪರಿ ಕಾಡಿತ್ತು
ಆಳಾಗಿ ಬಿದ್ದಿತ್ತು, ಅರಸಾಗಿ ಎದ್ದಿತ್ತು , ಭಾರ್ಯೆಯಾಗಿತ್ತು
ವೇಶ್ಯೇಯಾಗಿತ್ತು, ತಲೆ ತಿರುಗಿ ಬಿದ್ದಿತ್ತು, ತಲೆ ಹಿಡಿದು ಎದ್ದಿತ್ತು
ಪರಿವರ್ತನ ಹುಚ್ಚು ಪರಿವರ್ತನ

ಬಾಯ್ಬಿರಿದ ಜನಕೆ ಮೊಲೆ ಉಣಿಸ ಬಂದಿತ್ತು
ಬರ ಹಿಡಿದ ಭುವಿಗೆ ಮಧುಸಿಂಚನವಿರಿಸಿತ್ತು
ಚಗವೆರ, ಡಯಾನ, ವಿವೇಕಾನಂದ, ಫುಕೋಕ ಪರಿವರ್ತನದಲ್ಲಾದರು ಪರಿವರ್ತನ
ಪೂರ್ವಜರ ರಕ್ತದೋಕುಳಿ ಕೆಂಪಲ್ಲಿ ನಮ್ಮ ಸುಖದಂತೆ
ನಮ್ಮದರಲ್ಲಿ ನಮ್ಮವರದಾಗದನ್ಥೆ ತಡೆಯಲಿರುವುದೊಂದೇ


ಪರಿವರ್ತನ


@copy right "Aveen"

ಪ್ರೀತಿಯ "ಅಪ್ಪು"ಗೆ




ಅಪ್ಪುಗೆ ಕಾಳಗದಿ ಚಿತ್ತಾಗಿ ಮಲಗಿಹ ನನ್ನೊಲವಿನ "ಅಪ್ಪುಗೆ"

ಕದಡಿದ ಭಾವನೆಗಳ ತುಡಿತದ ಜೋಗುಳದಲ್ಲಿ
ಬಳಲಿ ಒಂಟಿ, ಅರಸಿ ಜಂಟಿ, ತವಕ ಮೇಳೈಸಿ
ಕೂಡಿ ಕಡೆವ ಅದಮ್ಯತೆ, ಒಳಗೊಳಗೇ ತಣಿವ ಧನ್ಯತೆ,
ಕಂಡಿರಾ ಅರ್ಪಣೆಯಲ್ಲೂ ಸಾರ್ಥಕತೆ, ಶೋಧನೆಯಲ್ಲೂ ಸೋತ ಗೆಲುವು?

ಮೊದಲ ಕ್ಷಣ ಮೌನ,ನೀರವತೆಯೇ ಹೆಪ್ಪಾಗಿಟ್ಟಂತೆ
ಕೊಂಚ ಗೊಂದಲ, ತುಸುವೇ ಲಜ್ಜೆ, ಪಿಸು ಮಾತು, ಏದುಸಿರು, ಚುಂಬನ, ಆಲಿಂಗನ
ಕಾರಿರುಳ ಪರದೆಯಡಿ ಮಿಂದ ನಗ್ನ ಏಕಾಂತ,
ಅರಿವ ಹರಿವ ಬಯಕೆಯಲಿ ತಾಮಸ ಯಜ್ಞಕ್ಕೆ ಅರಿವೇ ಕುರಿ ಹರಕೆ
ಬೆಸೆವ ತನು-ಮನಗಳ ಭಾವೈಕ್ಯತೆಗೊಂದೇ ಸೂರು - "ಅಪ್ಪುಗೆ"

ಮೈ ಬಿಲ್ಲಾಗಿ,ಅಧರಗಳು ಒಂದಾಗಿ, ತನು ಕಲ್ಲಾಗಿ
ಹರೆಯದ ಬಿಸಿ ಅಪ್ಪುಗೆ ಮನವ ಹದ ಮಾಡಿ ತಣಿಯುತಿರಲು ಹಸಿವು
ಸುಳಿಯ ಸೆಳೆತ,ಅಲೆಯ ರಭಸ,ಮದ್ದಾನೆ ಕಾದಾಟ,ಗುಡುಗು ಆರ್ಭಟ,
ಸೂರೆಗೊಂಡ ಸುಖದ ಕಣ್ಣಂಚಿನ ಕಂಬನಿಯಲ್ಲಿ ಚೀತ್ಕಾರದ ಪ್ರತಿಬಿಂಬ
ಅಣು ಅಣುವಿನಲ್ಲೂ ಸಾರ್ಥಕತೆಯ ಪ್ರತಿಧ್ವನಿ...!!

ಮುಂದೆ..?

ಎಲ್ಲವೂ ಶಾಂತ ಪ್ರಶಾಂತ,ತೂಫಾನಲ್ಲಿ ಮಿಂದ ಸಾಗರದ ಏಕಾಂತ
ಕಾಲ ಗರ್ಭದೊಳು ಭವಿತವ್ಯದ ಒಡನಾಟ,ಕಳೆದಂತೆ ಕಾಲ
ಭೋರ್ಗರೆವ ಲಜ್ಜೆ,ಅರಿವೆಯ ಅರಿವಲ್ಲಿ ವರ್ತಮಾನದ ಹುಡುಕಾಟ
ತಣಿದ ದಾಹ,ಮುಗಿಯದ ಆಟ,ಏರುವ ಅಂಕ

ಒಂದು!
ಎರಡು!?
ಮೂರು!!?
ಅನೂಹ್ಯ
ಅದಮ್ಯ
ಅನಂತ

@copy right "Aveen"

Thursday, March 26, 2009

ಹರೆಯದ ಅರಿಯದ ಮಜಲುಗಳು







"ಯವ್ವನ!!!"

ಯಾರಿಗೆ ತಾನೇ ಬೇಡ? ತನ್ನ ಮಗನಿಂದಲೇ ಯವ್ವನವನ್ನು ಧಾರೆ ಎರೆಸಿಕೊಂಡ ಯಯಾತಿಯ ಕಥೆ ಕೇಳಿದರೆ ಸಾಕು ಯವ್ವನ ಎಷ್ಟೊಂದು ಚಂಚಲ ಎಂದು ತಿಳಿಯುತ್ತೆ. ಅದು ಯಾರೂ ಕಾಣದ್ದಲ್ಲ, ಕೇಳದ್ದಲ್ಲ .....ಎಲ್ಲರೂ ಜೀವನದಲ್ಲಿ ಸಾಗಿ ಬಂದ ಘಟ್ಟ "ಯವ್ವನ". ಹಲವು ಮಜಲುಗಳ, ತುಮುಲಗಳ ಭಾವನೆಗಳ ಭೋರ್ಗೆರೆತದಲ್ಲಿ ತನ್ನ ತನವನ್ನೇ ಮರೆತು ಕಾಲ ಘಟ್ಟವನ್ನೇ ಮೀರಿ ನೆಡೆಯುವ ಸೆಳೆತದ ಮೈ ಮನ ಈ ಯವ್ವನ. ನಮ್ಮ ನಿಮ್ಮೆಲ್ಲರ ಬದುಕಲ್ಲೂ ಅದರ ಆಟ ಅದರದ್ದೇ.

" ಹುಚ್ಚು ಖೋಡಿ ಮನಸು
ಅದು ಹದಿನಾರರ ವಯಸು"

ಎಷ್ಟು ಅರ್ಥಗರ್ಭಿತ. ನನ್ನ ವಿಷಯದಲ್ಲಂತೂ ೧೦೦ ಪ್ರತಿಶತಃ ಸತ್ಯ. ಈಗಲೂ ನೆನಪಿದೆ, ಹರೆಯದ ಮೊದಲ ದಿನಗಳಲ್ಲಿ ಕಂಡದ್ದೆಲ್ಲಾ ನನ್ನದೇ, ಕಂಡವರೆಲ್ಲ ನನ್ನವರೆ... ಕಂಡ ಪ್ರತಿಯೊಂದನ್ನೂ ಕಣ್ಣಂಚಲ್ಲಿ ಸೆರೆ ಹಿಡಿವಾಸೆ. ಕಳೆದಂತೆ ಕಾಲ....ಏರಿದ ಉತ್ಸಾಹ...

ಒಂದು
ಎರಡು
ಮೂರು...

ಅನೂಹ್ಯ..!
ಅದಮ್ಯ...!!
ಅನಂತ...!!!

ಎಲ್ಲರಂತೆ ನಾನೂ ಪ್ರೀತಿಯ ಬಲೆಗೆ ಬಿದ್ದಿದ್ದೆ. ಅನು ದಿನವೂ ನನ್ನವನ ಒಡನಾಟಕ್ಕೆ ಬಳಲಿದ್ದೆ. ನನಗೋ ಜಗತ್ತರಿವ ತವಕ, ಸತ್ಯಾಸತ್ಯಕ್ಕೆ ವ್ಯತ್ಯಾಸ ಕಾಣದಷ್ಟು ಕವಿದ ಮೋಹ. ಕಂಡ ಎಲ್ಲವನ್ನೂ ನನ್ನದಾಗುವ ಮೊದಲೇ ನನ್ನದೆಂಬಂತೆ ಆಸ್ವಾದಿಸಿ, ಅನುಭವಿಸಿ ತೀರ್ಮಾನಿಸಿಯೂ ಬಿಟ್ಟೆ. ಆದರೆ ಕಣ್ಣು ತೆರೆದು ಸತ್ಯವನ್ನು ಅರಿತಾಗ ನಾನು ಎಂದಿನಂತೆ ಗುಂಪಿನಲ್ಲಿ ಒಬ್ಬಂಟಿ.


" ಒಳ್ಳೆ ಕ್ಷಣಗಳ ಕೂಡಿಡಬೇಕು
ಬದುಕಿನ ನೆನಪಿಗೆ, ಋತುಗಳ ಜೂಟಾಟಕೆ...."

ನನ್ನಲ್ಲಿ ಉಳಿದಿರುವುದು ಕೇವಲ ನೆನಪುಗಳೇ. ಎರಡು ವರ್ಷದ ಹಿಂದಿನ ಇದೇ ಡಿಸೆಂಬರ್ ನ ೧೯ರ ಇಳಿ ಸಂಜೆ ನನ್ನ ಬದುಕನ್ನು ಪ್ರವೇಶಿಸಿ ಅದರ ದಿಕ್ಕು, ಮಜಲುಗಳನ್ನೇ ಬದಲಿಸಿದವರ ನೆನಪು ಈ ಅಂಕಣ ಓದಿದಾಗ ಉಂಟಾಯಿತು. ಯಾಕೋ ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು. ದಯವಿಟ್ಟು ಓದಿ. ಹಿಂದೆ ನೀವಿದ್ದ ಪರಿಸ್ಥಿತಿ ಇದಿದ್ದರೆ ಒಂದು ಆರೋಗ್ಯಕರ ಏಕಾಂತದಲ್ಲಿ ಆ ಕ್ಷಣಗಳನ್ನು ಸವಿಯಿರಿ. ಇಂದು ಅದೇ ಪರಿಸ್ಥಿತಿಯಲ್ಲಿ ನೀವಿದ್ದರೆ ಸಾದ್ಯವಾದಸ್ತು ಹೊರ ಬರಲು ಪ್ರಯತ್ನಿಸಿ. ಏಕೆಂದರೆ

" ಭೋಗದ ರೀತಿ ವ್ಯಸನವೂ ಒಂದು ಚಟ"

ಯಾಕೋ ಹಳೆಯದ್ದೆಲ್ಲಾ ನೆನಪಾಯಿತು. ಹೊರ ಬರಲಾರದ ಮಾನಸಿಕ ತೊಳಲಾಟದಲ್ಲಿ ನಾನಾಗಿ ಉಳಿಯದ ನನ್ನ ತನವನ್ನು ಮತ್ತೊಬ್ಬರಲ್ಲಿ ಕಾಣದಂತಾದರೆ ನನ್ನ ಈ ಪ್ರಯತ್ನ ಸಾರ್ಥಕ.


ನಿಮ್ಮವನು

ಅವೀನ್.

ಹಾಗೆ ಸುಮ್ಮನೆ.. ಮರೆತ ಮಾತು


ನನ್ನ ಬಾಲ್ಯದಲ್ಲಿ ನಾನು, ನನ್ನ ಅಕ್ಕ ಜಿದ್ದಿಗೆ ಬಿದ್ದವರಂತೆ ಈ ಹಾಡನ್ನು ಅದೆಷ್ಟು ಬಾರಿ ಹಾಡಿದ್ದೆವೋ ಲೆಕ್ಕ ಇಟ್ಟವರಾರು? ಎಲ್ಲ ಕಾಲಕ್ಕೂ, ಎಲ್ಲ ದೇಶಕ್ಕೂ, ಎಲ್ಲ ಜನತೆಗೂ ಸಲ್ಲುವ, ಹಿಂದೆ, ಇಂದು, ಮುಂದೆಂದೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಪುಣ್ಯಕೋಟಿಯ ಕಥೆ ವರ್ಣನಾತೀತ. ಪುಸ್ಸಿ ಕ್ಯಾಟ್ & ಜಾಕ್ ಅಂಡ್ ಜಿಲ್ ನಂತಹ ರೂಪಾಂತರ ಜೊಳ್ಳು ಹಾಡುಗಳ ರಭಸದಲ್ಲಿ ಕೆಸರಿನಲ್ಲಿನ ಕಮಲದಂತೆ (ವಜ್ರದಂತೆ) ಮಸುಕಾಗಿರುವ ಕನ್ನಡದ ಸೊಗಡನ್ನು ಬೀರುವ ಇಂಥ ಹತ್ತು ಹಲವು ಪದ್ಯಗಳಿವೆ. ಹುಡುಕಿ ಕೇಳುವ ತಾಳ್ಮೆ, ಅಸ್ಥೆ ನಮಗೆ ಇರಬೇಕು ಅಸ್ಟೇ. ನನ್ನ ಅಕ್ಕ ಪುಣ್ಯಕೋಟಿ, ನಾನು ಕ್ರೂರ ಹುಲಿ ಪಾತ್ರ. ನನ್ನ ಮುಂದೆ ವಿನಮ್ರತೆಯಿಂದ ಅದೆಷ್ಟು ಬಾರಿ ನನ್ನಕ್ಕ ತಲೆ ತಗ್ಗಿಸಿ "ಸತ್ಯವೇ ನಮ್ಮ ತಾಯಿ ತಂದೆ..." ಹೇಳಿದ್ದಾಲೋ ..!!! ಅದೆಷ್ಟು ಬಾರಿ ಅವಳ ಕರುಳು ಹಿಂಡುವ ಬಿನ್ನಹ ಕೇಳಿ ನಾನೂ ಕೂಡ ಬೆಟ್ಟದಿಂದ ಬೀಳುವ ಹುಲಿಯಂತೆ ಕುರ್ಚಿ ಮೇಲಿನಿಂದ ಹಾರಿದ್ದೇನೋ...!! ಸಾವಿನ ಸನ್ನಿವೇಶದಲ್ಲಿ ಬದುಕನ್ನು ಬಿಂಬಿಸುವ ಕಥೆ, ಬದುಕಿನ ಅರ್ಥವೇ ತಿಳಿಯದ ಮುಗ್ದ ಮನಸುಗಳ ಮೇಲೆ ಬೀರಿದ ಪರಿಣಾಮ ಅಮೋಘವಾದದ್ದು. ಐ ಟಿ- ಬೀ ಟಿಯ ಈ ೨೧ನೆ ಶತಮಾನದಲ್ಲಿ ೨೦ನೇ ಶತಮಾನದ ಈ ಪದ್ಯ ನಿಮ್ಮಗಳ ನೆನಪಿನಿಂದ ಮರೆಯಾಗಿರಲಿಕ್ಕೂ ಸಾಕು. ಈ ಹಾಡನ್ನು ಕೇಳಿದ ನಂತರ ನಿಮ್ಮಗಳ ನೆನಪಿನಂಗಳದಲ್ಲಿ ನಿಮ್ಮ ಬಾಲ್ಯದ ನೆನಪಿನ ತುಣುಕೊಂದು ಇಣುಕಿದರೆ ನನ್ನ ಈ ಪ್ರಯತ್ನ ಸಾರ್ಥಕವಾದಂತೆ.

ದೃಶ್ಯ : http://in.youtube.com/watch?v=Ok1xhvPIRdk
ಧ್ವನಿ : http://www.kannadaaudio.com/Songs/Children/GovinaHaadu/DharaniMandala.ram

ನಿಮ್ಮವನು
ಅವೀನ್