Thursday, March 26, 2009

ಹರೆಯದ ಅರಿಯದ ಮಜಲುಗಳು







"ಯವ್ವನ!!!"

ಯಾರಿಗೆ ತಾನೇ ಬೇಡ? ತನ್ನ ಮಗನಿಂದಲೇ ಯವ್ವನವನ್ನು ಧಾರೆ ಎರೆಸಿಕೊಂಡ ಯಯಾತಿಯ ಕಥೆ ಕೇಳಿದರೆ ಸಾಕು ಯವ್ವನ ಎಷ್ಟೊಂದು ಚಂಚಲ ಎಂದು ತಿಳಿಯುತ್ತೆ. ಅದು ಯಾರೂ ಕಾಣದ್ದಲ್ಲ, ಕೇಳದ್ದಲ್ಲ .....ಎಲ್ಲರೂ ಜೀವನದಲ್ಲಿ ಸಾಗಿ ಬಂದ ಘಟ್ಟ "ಯವ್ವನ". ಹಲವು ಮಜಲುಗಳ, ತುಮುಲಗಳ ಭಾವನೆಗಳ ಭೋರ್ಗೆರೆತದಲ್ಲಿ ತನ್ನ ತನವನ್ನೇ ಮರೆತು ಕಾಲ ಘಟ್ಟವನ್ನೇ ಮೀರಿ ನೆಡೆಯುವ ಸೆಳೆತದ ಮೈ ಮನ ಈ ಯವ್ವನ. ನಮ್ಮ ನಿಮ್ಮೆಲ್ಲರ ಬದುಕಲ್ಲೂ ಅದರ ಆಟ ಅದರದ್ದೇ.

" ಹುಚ್ಚು ಖೋಡಿ ಮನಸು
ಅದು ಹದಿನಾರರ ವಯಸು"

ಎಷ್ಟು ಅರ್ಥಗರ್ಭಿತ. ನನ್ನ ವಿಷಯದಲ್ಲಂತೂ ೧೦೦ ಪ್ರತಿಶತಃ ಸತ್ಯ. ಈಗಲೂ ನೆನಪಿದೆ, ಹರೆಯದ ಮೊದಲ ದಿನಗಳಲ್ಲಿ ಕಂಡದ್ದೆಲ್ಲಾ ನನ್ನದೇ, ಕಂಡವರೆಲ್ಲ ನನ್ನವರೆ... ಕಂಡ ಪ್ರತಿಯೊಂದನ್ನೂ ಕಣ್ಣಂಚಲ್ಲಿ ಸೆರೆ ಹಿಡಿವಾಸೆ. ಕಳೆದಂತೆ ಕಾಲ....ಏರಿದ ಉತ್ಸಾಹ...

ಒಂದು
ಎರಡು
ಮೂರು...

ಅನೂಹ್ಯ..!
ಅದಮ್ಯ...!!
ಅನಂತ...!!!

ಎಲ್ಲರಂತೆ ನಾನೂ ಪ್ರೀತಿಯ ಬಲೆಗೆ ಬಿದ್ದಿದ್ದೆ. ಅನು ದಿನವೂ ನನ್ನವನ ಒಡನಾಟಕ್ಕೆ ಬಳಲಿದ್ದೆ. ನನಗೋ ಜಗತ್ತರಿವ ತವಕ, ಸತ್ಯಾಸತ್ಯಕ್ಕೆ ವ್ಯತ್ಯಾಸ ಕಾಣದಷ್ಟು ಕವಿದ ಮೋಹ. ಕಂಡ ಎಲ್ಲವನ್ನೂ ನನ್ನದಾಗುವ ಮೊದಲೇ ನನ್ನದೆಂಬಂತೆ ಆಸ್ವಾದಿಸಿ, ಅನುಭವಿಸಿ ತೀರ್ಮಾನಿಸಿಯೂ ಬಿಟ್ಟೆ. ಆದರೆ ಕಣ್ಣು ತೆರೆದು ಸತ್ಯವನ್ನು ಅರಿತಾಗ ನಾನು ಎಂದಿನಂತೆ ಗುಂಪಿನಲ್ಲಿ ಒಬ್ಬಂಟಿ.


" ಒಳ್ಳೆ ಕ್ಷಣಗಳ ಕೂಡಿಡಬೇಕು
ಬದುಕಿನ ನೆನಪಿಗೆ, ಋತುಗಳ ಜೂಟಾಟಕೆ...."

ನನ್ನಲ್ಲಿ ಉಳಿದಿರುವುದು ಕೇವಲ ನೆನಪುಗಳೇ. ಎರಡು ವರ್ಷದ ಹಿಂದಿನ ಇದೇ ಡಿಸೆಂಬರ್ ನ ೧೯ರ ಇಳಿ ಸಂಜೆ ನನ್ನ ಬದುಕನ್ನು ಪ್ರವೇಶಿಸಿ ಅದರ ದಿಕ್ಕು, ಮಜಲುಗಳನ್ನೇ ಬದಲಿಸಿದವರ ನೆನಪು ಈ ಅಂಕಣ ಓದಿದಾಗ ಉಂಟಾಯಿತು. ಯಾಕೋ ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು. ದಯವಿಟ್ಟು ಓದಿ. ಹಿಂದೆ ನೀವಿದ್ದ ಪರಿಸ್ಥಿತಿ ಇದಿದ್ದರೆ ಒಂದು ಆರೋಗ್ಯಕರ ಏಕಾಂತದಲ್ಲಿ ಆ ಕ್ಷಣಗಳನ್ನು ಸವಿಯಿರಿ. ಇಂದು ಅದೇ ಪರಿಸ್ಥಿತಿಯಲ್ಲಿ ನೀವಿದ್ದರೆ ಸಾದ್ಯವಾದಸ್ತು ಹೊರ ಬರಲು ಪ್ರಯತ್ನಿಸಿ. ಏಕೆಂದರೆ

" ಭೋಗದ ರೀತಿ ವ್ಯಸನವೂ ಒಂದು ಚಟ"

ಯಾಕೋ ಹಳೆಯದ್ದೆಲ್ಲಾ ನೆನಪಾಯಿತು. ಹೊರ ಬರಲಾರದ ಮಾನಸಿಕ ತೊಳಲಾಟದಲ್ಲಿ ನಾನಾಗಿ ಉಳಿಯದ ನನ್ನ ತನವನ್ನು ಮತ್ತೊಬ್ಬರಲ್ಲಿ ಕಾಣದಂತಾದರೆ ನನ್ನ ಈ ಪ್ರಯತ್ನ ಸಾರ್ಥಕ.


ನಿಮ್ಮವನು

ಅವೀನ್.

ಹಾಗೆ ಸುಮ್ಮನೆ.. ಮರೆತ ಮಾತು


ನನ್ನ ಬಾಲ್ಯದಲ್ಲಿ ನಾನು, ನನ್ನ ಅಕ್ಕ ಜಿದ್ದಿಗೆ ಬಿದ್ದವರಂತೆ ಈ ಹಾಡನ್ನು ಅದೆಷ್ಟು ಬಾರಿ ಹಾಡಿದ್ದೆವೋ ಲೆಕ್ಕ ಇಟ್ಟವರಾರು? ಎಲ್ಲ ಕಾಲಕ್ಕೂ, ಎಲ್ಲ ದೇಶಕ್ಕೂ, ಎಲ್ಲ ಜನತೆಗೂ ಸಲ್ಲುವ, ಹಿಂದೆ, ಇಂದು, ಮುಂದೆಂದೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಪುಣ್ಯಕೋಟಿಯ ಕಥೆ ವರ್ಣನಾತೀತ. ಪುಸ್ಸಿ ಕ್ಯಾಟ್ & ಜಾಕ್ ಅಂಡ್ ಜಿಲ್ ನಂತಹ ರೂಪಾಂತರ ಜೊಳ್ಳು ಹಾಡುಗಳ ರಭಸದಲ್ಲಿ ಕೆಸರಿನಲ್ಲಿನ ಕಮಲದಂತೆ (ವಜ್ರದಂತೆ) ಮಸುಕಾಗಿರುವ ಕನ್ನಡದ ಸೊಗಡನ್ನು ಬೀರುವ ಇಂಥ ಹತ್ತು ಹಲವು ಪದ್ಯಗಳಿವೆ. ಹುಡುಕಿ ಕೇಳುವ ತಾಳ್ಮೆ, ಅಸ್ಥೆ ನಮಗೆ ಇರಬೇಕು ಅಸ್ಟೇ. ನನ್ನ ಅಕ್ಕ ಪುಣ್ಯಕೋಟಿ, ನಾನು ಕ್ರೂರ ಹುಲಿ ಪಾತ್ರ. ನನ್ನ ಮುಂದೆ ವಿನಮ್ರತೆಯಿಂದ ಅದೆಷ್ಟು ಬಾರಿ ನನ್ನಕ್ಕ ತಲೆ ತಗ್ಗಿಸಿ "ಸತ್ಯವೇ ನಮ್ಮ ತಾಯಿ ತಂದೆ..." ಹೇಳಿದ್ದಾಲೋ ..!!! ಅದೆಷ್ಟು ಬಾರಿ ಅವಳ ಕರುಳು ಹಿಂಡುವ ಬಿನ್ನಹ ಕೇಳಿ ನಾನೂ ಕೂಡ ಬೆಟ್ಟದಿಂದ ಬೀಳುವ ಹುಲಿಯಂತೆ ಕುರ್ಚಿ ಮೇಲಿನಿಂದ ಹಾರಿದ್ದೇನೋ...!! ಸಾವಿನ ಸನ್ನಿವೇಶದಲ್ಲಿ ಬದುಕನ್ನು ಬಿಂಬಿಸುವ ಕಥೆ, ಬದುಕಿನ ಅರ್ಥವೇ ತಿಳಿಯದ ಮುಗ್ದ ಮನಸುಗಳ ಮೇಲೆ ಬೀರಿದ ಪರಿಣಾಮ ಅಮೋಘವಾದದ್ದು. ಐ ಟಿ- ಬೀ ಟಿಯ ಈ ೨೧ನೆ ಶತಮಾನದಲ್ಲಿ ೨೦ನೇ ಶತಮಾನದ ಈ ಪದ್ಯ ನಿಮ್ಮಗಳ ನೆನಪಿನಿಂದ ಮರೆಯಾಗಿರಲಿಕ್ಕೂ ಸಾಕು. ಈ ಹಾಡನ್ನು ಕೇಳಿದ ನಂತರ ನಿಮ್ಮಗಳ ನೆನಪಿನಂಗಳದಲ್ಲಿ ನಿಮ್ಮ ಬಾಲ್ಯದ ನೆನಪಿನ ತುಣುಕೊಂದು ಇಣುಕಿದರೆ ನನ್ನ ಈ ಪ್ರಯತ್ನ ಸಾರ್ಥಕವಾದಂತೆ.

ದೃಶ್ಯ : http://in.youtube.com/watch?v=Ok1xhvPIRdk
ಧ್ವನಿ : http://www.kannadaaudio.com/Songs/Children/GovinaHaadu/DharaniMandala.ram

ನಿಮ್ಮವನು
ಅವೀನ್