Thursday, April 16, 2009

ಪರಿವರ್ತನ
ಪರಿವರ್ತನೆಯ ಸೊಬಗಿನ ಪರಿವೆ ಇಲ್ಲದೆ
ನಿಂತ ನೀರಂತೆ ತಾನೇ ತಾನಾಗಿಹುದು ಪರಿವರ್ತನ
ಎಲ್ಲೆಲೂ, ಎಲ್ಲಾನೂ, ಹೇಗ್ಹೇಗೋ ಪರಿವರ್ತನ
ಹಿಂದೆಂದೂ, ಮುನ್ನೆಂದೂ, ಇನ್ನೆಂದೂ
ತಾನೇ ತಾನಾಗಿಹುದು ಪರಿವರ್ತನ..

ವನದಲ್ಲಿ, ಮನದಲ್ಲಿ, ಮನೆಯಲ್ಲಿ, ಜನರಲ್ಲಿ
ಪರಿವರ್ತನ ಹಪಹಪಿಸೋ ಪರಿವರ್ತನ
ಪರಿವರ್ತನ ಜಗದೆಲ್ಲೆಡೆ ಪರಿವರ್ತನ
ನೀ ಒಲ್ಲೆನೆಂದರೂ ಮಾಡಬೇಕದರೊಡನೆ ಸಹನರ್ತನ
ಪರಿವರ್ತನ ಜಗದ ನಿಯಮ ಕಣಾ.

ಹಿಂದಿದ್ದ, ಇಂದಿರುವ, ಮುಂದಿದ್ದ, ಮುಂದಿರುವ ಜನರಲ್ಲಿ
ಸಂಚಲನ ಮಾಡಿಟ್ಟು, ಸಹಚರ್ಯೆಯಾಗಿತ್ತು, ಪರಿ ಪರಿ ಕಾಡಿತ್ತು
ಆಳಾಗಿ ಬಿದ್ದಿತ್ತು, ಅರಸಾಗಿ ಎದ್ದಿತ್ತು , ಭಾರ್ಯೆಯಾಗಿತ್ತು
ವೇಶ್ಯೇಯಾಗಿತ್ತು, ತಲೆ ತಿರುಗಿ ಬಿದ್ದಿತ್ತು, ತಲೆ ಹಿಡಿದು ಎದ್ದಿತ್ತು
ಪರಿವರ್ತನ ಹುಚ್ಚು ಪರಿವರ್ತನ

ಬಾಯ್ಬಿರಿದ ಜನಕೆ ಮೊಲೆ ಉಣಿಸ ಬಂದಿತ್ತು
ಬರ ಹಿಡಿದ ಭುವಿಗೆ ಮಧುಸಿಂಚನವಿರಿಸಿತ್ತು
ಚಗವೆರ, ಡಯಾನ, ವಿವೇಕಾನಂದ, ಫುಕೋಕ ಪರಿವರ್ತನದಲ್ಲಾದರು ಪರಿವರ್ತನ
ಪೂರ್ವಜರ ರಕ್ತದೋಕುಳಿ ಕೆಂಪಲ್ಲಿ ನಮ್ಮ ಸುಖದಂತೆ
ನಮ್ಮದರಲ್ಲಿ ನಮ್ಮವರದಾಗದನ್ಥೆ ತಡೆಯಲಿರುವುದೊಂದೇ


ಪರಿವರ್ತನ


@copy right "Aveen"

ಪ್ರೀತಿಯ "ಅಪ್ಪು"ಗೆ
ಅಪ್ಪುಗೆ ಕಾಳಗದಿ ಚಿತ್ತಾಗಿ ಮಲಗಿಹ ನನ್ನೊಲವಿನ "ಅಪ್ಪುಗೆ"

ಕದಡಿದ ಭಾವನೆಗಳ ತುಡಿತದ ಜೋಗುಳದಲ್ಲಿ
ಬಳಲಿ ಒಂಟಿ, ಅರಸಿ ಜಂಟಿ, ತವಕ ಮೇಳೈಸಿ
ಕೂಡಿ ಕಡೆವ ಅದಮ್ಯತೆ, ಒಳಗೊಳಗೇ ತಣಿವ ಧನ್ಯತೆ,
ಕಂಡಿರಾ ಅರ್ಪಣೆಯಲ್ಲೂ ಸಾರ್ಥಕತೆ, ಶೋಧನೆಯಲ್ಲೂ ಸೋತ ಗೆಲುವು?

ಮೊದಲ ಕ್ಷಣ ಮೌನ,ನೀರವತೆಯೇ ಹೆಪ್ಪಾಗಿಟ್ಟಂತೆ
ಕೊಂಚ ಗೊಂದಲ, ತುಸುವೇ ಲಜ್ಜೆ, ಪಿಸು ಮಾತು, ಏದುಸಿರು, ಚುಂಬನ, ಆಲಿಂಗನ
ಕಾರಿರುಳ ಪರದೆಯಡಿ ಮಿಂದ ನಗ್ನ ಏಕಾಂತ,
ಅರಿವ ಹರಿವ ಬಯಕೆಯಲಿ ತಾಮಸ ಯಜ್ಞಕ್ಕೆ ಅರಿವೇ ಕುರಿ ಹರಕೆ
ಬೆಸೆವ ತನು-ಮನಗಳ ಭಾವೈಕ್ಯತೆಗೊಂದೇ ಸೂರು - "ಅಪ್ಪುಗೆ"

ಮೈ ಬಿಲ್ಲಾಗಿ,ಅಧರಗಳು ಒಂದಾಗಿ, ತನು ಕಲ್ಲಾಗಿ
ಹರೆಯದ ಬಿಸಿ ಅಪ್ಪುಗೆ ಮನವ ಹದ ಮಾಡಿ ತಣಿಯುತಿರಲು ಹಸಿವು
ಸುಳಿಯ ಸೆಳೆತ,ಅಲೆಯ ರಭಸ,ಮದ್ದಾನೆ ಕಾದಾಟ,ಗುಡುಗು ಆರ್ಭಟ,
ಸೂರೆಗೊಂಡ ಸುಖದ ಕಣ್ಣಂಚಿನ ಕಂಬನಿಯಲ್ಲಿ ಚೀತ್ಕಾರದ ಪ್ರತಿಬಿಂಬ
ಅಣು ಅಣುವಿನಲ್ಲೂ ಸಾರ್ಥಕತೆಯ ಪ್ರತಿಧ್ವನಿ...!!

ಮುಂದೆ..?

ಎಲ್ಲವೂ ಶಾಂತ ಪ್ರಶಾಂತ,ತೂಫಾನಲ್ಲಿ ಮಿಂದ ಸಾಗರದ ಏಕಾಂತ
ಕಾಲ ಗರ್ಭದೊಳು ಭವಿತವ್ಯದ ಒಡನಾಟ,ಕಳೆದಂತೆ ಕಾಲ
ಭೋರ್ಗರೆವ ಲಜ್ಜೆ,ಅರಿವೆಯ ಅರಿವಲ್ಲಿ ವರ್ತಮಾನದ ಹುಡುಕಾಟ
ತಣಿದ ದಾಹ,ಮುಗಿಯದ ಆಟ,ಏರುವ ಅಂಕ

ಒಂದು!
ಎರಡು!?
ಮೂರು!!?
ಅನೂಹ್ಯ
ಅದಮ್ಯ
ಅನಂತ

@copy right "Aveen"

Tuesday, April 7, 2009

ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ..


ಕೇಳಲೋ ಬೇಡವೋ ಎಂಬಂತೆ ಮತ್ತೆ ಅದೇ ಭರವಸೆಯುಕ್ತ ದನಿ...

"ಅವಿ, ನಾವ್ ಯಾವಾಗಲೋ ಮನೆ ಕಟ್ಟೊದು?"

ಅನ್ನ ಕಲೆಸುತ್ತಿದ್ದ ಕೈಗಳು ಅನ್ನದಲ್ಲೇನೋ ಕಳೆದು ಕೊಂಡಂತೆ ಅನ್ನವನ್ನು ಶೋದಿಸಲು ಶುರುಮಾಡಿದವು. ಹಾಗೆ ತಲೆ ಎತ್ತಿ ಒಮ್ಮೆ ನಿರುಕಿಸಿದೆ.. ಅದೇ ನಿಸ್ಸಹಾಯಕ ಆದರೆ ಉತ್ಸಾಹಕತೆ ಅಳಿಯದ ಕಣ್ಣುಗಳಲ್ಲಿ ಅಮ್ಮ ನನ್ನನ್ನೇ ನಿಟ್ಟಿಸುತ್ತಿದ್ದಳು. ಅವಳ ಮುಖ ನೋಡುವ ಧೈರ್ಯ ಸಾಲದೇ ಕಳೆದುಕೊಂಡ ವೈಭವದ ಗತಕಾಲವನ್ನ ಅನ್ನದ ಅಗುಳುಗಳ ನಡುವೆ ಹುಡುಕುವ ವ್ಯರ್ಥ ಪ್ರಯತ್ನ ಮುಂದುವರಿಸಿದೆ.... ಉತ್ತರ ತಿಳಿಯಿತೋ ಇಲ್ಲ ಮತ್ತೊಮ್ಮೆ ನನ್ನ ನೊಂದ ಮುಖ ನೋಡುವ ಇಂಗಿತವಿಲ್ಲದೆಯೋ ಏನೋ ಅಮ್ಮ ಅಡುಗೆ ಮನೆ ಸೇರಿದಳು..... ನಂತರ ಅವಳ ದುಃಖ ತುಂಬಿದ ನಿಟ್ಟುಸಿರು.
ಅಸಹ್ಯ, ನಿಸ್ಸಹಾಯಕತೆಯಲ್ಲಿ ನಾನು ಮತ್ತೊಮ್ಮೆ ಸತ್ತು ಹುಟ್ಟಿದ್ದೆ.

ಎಡವಿದ್ದಾದರೂ ಎಲ್ಲಿ? ಹುದುಕಬಾರದಮ್ತೆ ನದಿ ಮೂಲ, ಋಷಿ ಮೂಲ, ದೇವ ಮೂಲ... ಎಲ್ಲರೂ ಹೇಳೋದು ಅದನ್ನೇ... ಹುದುಕೊದಾದ್ರೆ ತಪ್ಪಿನ ಮೂಲ ಹುಡಕು, ಆ ಕ್ಷಣವೆ ಮುಕ್ಕಾಲು ಪಾಲು ತಪ್ಪು ಮನ್ನಾ ಅಂತ. ತಿಳ್ದಿದ್ದವ್ರ್ ಯಾರು?

ಎಲ್ಲ ಸರಿಯಿತ್ತು. ಕಷ್ಟಗಳಿಗೆ ಬರವಿಲ್ಲದಿದ್ರೂ ಸುಖಕ್ಕೆನೂ ಮೋಸ ಇರ್ಲಿಲ್ಲ. ಅಪ್ಪನ ಕುಡಿತ , ಬಂಧುಗಳ ಜಾಣ ಮರೆತ, ಓರಗೆಯವರ ತಿರಸ್ಕಾರದ ಇರಿತದೆಲ್ಲದರ ನಡುವೆ ನಮ್ಮಗಳ ಜೀವಸೆಲೆಯಾಗಿ ಉಳಿದಿದ್ದು ಸುಕ್ಕೋ ಚದುರದ ನನ್ನಮ್ಮನ "ಹೂ ನಗೆ". ಬಾಲ್ಯದ ದಿನಗಳು ಎಲ್ಲರಿಗೂ ಹೂವಾದರೆ ನಿಜಕ್ಕೋ ನನಗೆ ಕಹಿ ನೆನಪು. ಇನ್ನೊ ಚೆನಾಗಿ ನೆನಪಿದೆ, ಅಪ್ಪನಾಗಿದ್ದರೂ ಅಪ್ಪನಂತಿರದ ಬೆರ್ಚಪ್ಪ ಕುಡಿತದಲ್ಲಿ ಕಳೆದು ಹೋದಾಗ ನನ್ನಮ್ಮ ಅಳದ ದಿನವೇ ಇಲ್ಲ. ೨೦ ವರ್ಷಗಳ ಹಿಂದಿನ ಮಾತು, ಸಂಕ್ರಾಂತಿ ಹಬ್ಬದ ಬೆಳಿಗ್ಗೆ ರಾತ್ರಿಯ ಅನ್ನ -ಮುದ್ದೆಗೆ ಮಜ್ಜಿಗೆ ಬೆರಸಿ ಹೊಸ ರುಚಿಯೇನೋ ಎಂಬಂತೆ ಕೈತುತ್ತು ಇಟ್ಟು [ ನಮಗೆ ತಟ್ಟೆಗೆ ಬಡಿಸದೆ] ನಾನು,ಅಕ್ಕ ತಿಂದು ಹೋ....!! ಎಂದು ಆಡಲು ಹೊರಗೆ ಹೋಗುವಾಗ ಕಂಡ ಸಂತೃಪ್ತ ನಗುವಿನ ಅಮ್ಮ, ಆಟದ ಮದ್ಯೆ ಹಿಂತಿರುಗಿದಾಗ ಕಂಡ ತಡೆದಿದ್ದರ್ರೂ ಅವಳ ಕೊರಳುಬ್ಬಿ ಬರುತ್ತಿರುವ ಕಣ್ನೀರಲ್ಲೇ ಕಾಣದ ದೇವರಿಗೆ ಅಭಿಷೇಕ ಮಾಡುತ್ತಿದ್ದ ಅಮ್ಮನ ರೂಪು ಅದುವರೆಗೂ ನಾನು ಕಂಡಿದ್ದ ಅಮ್ಮಗಳ ಚಿತ್ರತೆಯನ್ನೇ ಬದಲಿಸಿತ್ತು.

ಆಕೆಯದು ನಿರ್ದಿಷ್ಟ ಪ್ರಪಂಚ. ಉಡಲಿಲ್ಲ, ತಿನ್ನಲಿಲ್ಲ.... ಮೂರು ಹೊತ್ತು ಸರೀಕರೆದುರಿಗೆ ಛಲವನ್ತರಾಗಿ ಬದುಕಬೇಕು, ನಮ್ಮ ತುಳಿದವರ ಎದೆ ಮೆಟ್ಟಿ ನಿಲ್ಲುವಂತೆ ತನ್ನ ಮಕ್ಕಳು ಬೆಳಿಯಬೇಕು. ಅಷ್ಟೇ!! ಅದೇ ಕನವರಿಕೆ. ಅದಕ್ಕಾಗಿ ಆಕೆ ಮಾಡದಿದ್ದೇನು? ದೇವರು ಎಂಬುವನು ಇದ್ದಿದ್ದೇ ಆದರೆ ಅವಳ ಸ್ಥಿತಿಗೆ ತಾನೇ ಮರುಗಿ ಪ್ರತ್ಯಕ್ಷನಾಗುತ್ತಿದ್ದನೋ ಏನೋ?!?!? ಕುಡುಕ ಅಪ್ಪ ಸಂಸಾರದ ಹೊರೆಯನ್ನು ಜೀವನದ ಅರ್ಧ ದಾರಿಯಲ್ಲೇ ಬಿಸುಟ್ಟು ನಾ ಒಲ್ಲೆ ಎಂದು ರಚ್ಚೆ ಹಿಡಿದು ನಿಂತಾಗ ಅವನನ್ನೂ ಸೇರಿದಂತೆ ನಮ್ಮಗಳ ಪೊರೆದವಳು ನನ್ನಮ್ಮ.

ನಾನು ಎಸ್ ಎಸ್ ಎಲ್ ಸಿ ಪರೀಕ್ಷೆಯ ರಿಸಲ್ಟ್ ನೋಡಲು ಹೋಗುವಾಗ ಚೂರು ಜೀವ ಕೈಲಿಡಿದು ನನಗೆ ಪಿಸುಗುಟ್ಟಿದ ಮಾತು ಇನ್ನೂ ನೆನಪಿದೆ "fail ಆದ್ರೆ ಚಿಂತೆ ಇಲ್ಲ... ವಾಪಸ್ ಮನೆಗೆ ಬಾರೋ. ಅಲ್ಲಿ ಇಲ್ಲಿ ಓಡಿ ಹೋಗಬೇಡ". ಅಂತೇನೂ ಆಗಲಿಲ್ಲ. First ಕ್ಲಾಸ್ನಲ್ಲೆ ಪಾಸು ಆಗಿದ್ದೆ. ನಂತರ ಪಿ ಯು... ಆಮೇಲೆ ಇಂಜಿನಿಯರಿಂಗ್ ಸೇರಿದಾಗ ಅವಳ ಸ್ವಾಭಿಮಾನ ತುಂಬಿದ ಕಣ್ಣುಗಳಲ್ಲಿ ಬದುಕಿನ ಗಮ್ಯ ಮುಟ್ಟಿದ ಸಂತೃಪ್ತ ಭಾವ.

ಅಗಸ ಹೊಸ ಬಟ್ಟೆಯನ್ನ ಎತ್ತಿ ಎತ್ತಿ ಒಗೆಯೋ ಹಾಗೆ ನಾನೂ ಮೊದಲೆರಡು ವರ್ಷ college ಗೆ Topper ಬಂದೆ. ನಂತರದ್ದೆ ಶೋಕ ಪರ್ವ.. ಎಲ್ಲ ಕೆಟ್ಟು ಪಟ್ಟಣ ಸೇರಿದ್ರೆ ನಾನು ಪಟ್ಟಣ ಸೇರಿ ಕೆಟ್ಟೆ. ಬದುಕಿನ ಗಮ್ಯ ಮುಟ್ಟುವುದಕ್ಕೆ ೩ ಹೆಜ್ಜೆ ಇರುವಾಗ ಬದುಕಿನಿಂದ ವಿಮುಖನಾಗಿ ಅರಿಷಡ್ವರ್ಗಗಳ ದಾಸನಾಗಿ ನನ್ನ ಇರುವಿಕೆಯನ್ನೇ ಮರೆತೇ. "ಕಾಮಾತುರಾನಂ ನ ಭಯಂ ನ ಲಜ್ಜಾ". ಇದ್ದ ವೈಭವವೆಲ್ಲಾ ಇಂದು ಒಂದು ಕನಸು ಅಷ್ಟೇ . ಎಲ್ಲೋ ಕೇಳಿದ್ದೆ .." ಕಣ್ಣು ತೆರೆದು ಕಾಣುವ ಕನಸೇ ಜೀವನ".. ಎಷ್ಟು ಅರ್ಥಗರ್ಭಿತ? ನನ್ನದೆನ್ನುವುದನ್ನೆಲ್ಲಾ ಕಳೆದುಕೊಂಡು ಮೀನಿನಂತೆ ಕಣ್ಣೇ ಮುಚ್ಚದೆ ಆಗದ ಬದುಕಿಗೆ ಬಾರದ ಚಿಲುಮೆಯಂತೆ ಜಿನುಗುತ್ತಿದ್ದೇನೆ. ಆದರೆ ಅಮ್ಮ? ಅವಳ ನಿಡುಸುಯ್ಯುವ ನಿಟ್ಟುಸಿರು ನನ್ನ ಅಣು ಕ್ಷಣವೂ ದಹಿಸುತ್ತಿದೆ. ನನ್ನಮ್ಮನ ಆಶಯಕ್ಕೆ, ಸ್ವಾಭಿಮಾನಕ್ಕೆ, ಕನಸಿಗೆ ನಾನಿಟ್ಟ ಕೊಳ್ಳಿಯನ್ನ ಆರಿಸೋ ಬಗೆ ಹೇಗೆ? ಅಷ್ಟಾದರೂ ಅಮ್ಮ ನನ್ನ ಒಂದು ಮಾತು ಬಯ್ಯಲಿಲ್ಲ... ಏನೋ ಭರವಸೆ ಅವಳಿಗೆ "ನನ್ನ ಮಕ್ಕಳು ನನಗೆ ಮೋಸ ಮಾಡೋಲ್ಲ" ಅಂತ.

ಕುಡುಕ ಗಂಡ ಸತ್ತಾಗ , ಮನೆಗೆ ಬಂದ ಸೊಸೆ ಮನೆ ನೆಮ್ಮದಿ, ಮರ್ಯಾದೆಯನ್ನು ಮೋರು ಪಾಲು ಮಾಡಿದಾಗ, ಕುಡುಕ ಅಳಿಯನಿಂದ ಮಗಳು ತನ್ನ ಗತ ಬಾಳನ್ನೇ ಪುನರಾವರ್ತಿಸಿದಾಗ ಧೃತಿಗೆಡದ ನನ್ನಮ್ಮ ನನ್ನ ಜೀವನದಲ್ಲಿ ನನ್ನ ಕೈಯ್ಯಾರೆ ಹಾಳು ಮಾಡಿಕೊಂಡ ನನ್ನ ಭವಿಷ್ಯದ ಕುರಿತು ಚಿಂತಿಸಿ ಬುಡ ಕಡಿದ ಮರದಂತಾಗಿದ್ದಾಳೆ.

"ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು...
ಮಿಡುಕಾಡುತಿರುವೆ ನಾನು"

ಒಂದಂತೂ ಸತ್ಯ... ನನ್ನಮ್ಮನ ಪ್ರೀತಿ, ಕಾಳಜಿ ಯಾವ ಕಾರಣಕ್ಕೂ ಚೂರೂ ಏರು ಪೇರಾಗುವುದಿಲ್ಲ. ಆದರೆ ಅಮ್ಮ ಇತ್ತೀಚೆಗೆ ನಗುವುದನ್ನೇ ಮರೆತಿದ್ದಾಳೆ. ನನಗಂತೂ ವಿವರಿಸಲಾಗದ ತಳಮಳ.ಎಲ್ಲ ಕಳೆದು ಕೊಂಡು ಬರಿಗೈ ಫಕೀರನಂತೆ ನಿಂತ ಈ ಕ್ಷಣದಲ್ಲಿ ಅಮ್ಮನ ನಿಸ್ಸಹಾಯಕ ಕಂಗಳಲ್ಲಿ ಬಾಡಿದ ಭರವಸೆಯನ್ನು ನೋಡಿ ಮತ್ತೆ ಸಾಯುವ ವೇದನೆಯಲ್ಲಿ....

ಪ್ರಯೋಜನಕ್ಕೆ ಬಾರದ
ಅಮ್ಮನ ಮಗ...