Sunday, January 13, 2013

ಸಂಕ್ರಮಣದ ಸಂಕ್ರಾಂತಿಯ ಶುಭಾಶಯಗಳೊಂದಿಗೆ...!!!

ಹಗಲಿನ ಹಬ್ಬದ ಜಾತ್ರೆಯು ಮುಗಿಯಿತು
ರವಿ ಸಂದನು ಪಡುವಣ ಗುಡಿಗೆ
ಕತ್ತಲ ಕಣಿವೆಯೊಳುರುಳುತ ನರಳುವ
ಬೆಳಕಿನ ತೊರೆಯೊಲು ಸಂಜೆಯಿರೆ
ಭೀತಿಯ ಭೂತವು ಜಡೆಯ ಬಿಚ್ಚಿದೊಲು
ಹಿರಿಯಾಲದ ಮರ ನಿಂತಿರಲು
ಕೊಂಬೆ ಕೊಂಬೆಯಲಿ ದುರ್ಮಂತ್ರದವೊಲು
ಎನಿತೋ ಬಾವಲಿ ಜೋತಿರಲು
ಮನ ಬೆದರಿತು ಆ ನೋಟವ ನೋಡಿ
ಜಗವನೆ ಮುಸುಕಿರೆ ಕತ್ತಲ ಮೋಡಿ !
 
 
ಚಣ ಯುಗವಾಯಿತು, ಮನ ಹಾರೈಸಿತು
ಬೆಳಕಿನ ಕುಡಿಯೊಂದನು ಬಯಸಿ
ನಿರಾಶೆಯಾಗಸದಾಸೆಯ ಕಿಡಿಗಳೊ
ಎಂಬೊಲು ತಾರೆಗೆ ಕಣ್ ಸುಳಿಸಿ
ಮಿನುಗಲು, ಕತ್ತಲ ಕೊಳದಿಂದರಳಿತೊ
ಬೆಳಕಿನ ಹೂವೊಂದೆಂಬವೊಲು,
ತಿಂಗಳು ಮೂಡಿತು ಬೆಳಕನು ಸುರಿಸಿತು
ಜಗವೇ ಅಚ್ಚರಿಗೊಂಬವೊಲು
ಕತ್ತಲು ಕರಗಿತು ಬೆಳಕಿನೊಳಿಳಿದು
ಬೆಳಕೊಂದೇ ಹಬ್ಬಿತು ಬೆಳೆ ಬೆಳೆದು.
 
ಬೆಳಕಿನ ಹೂವಿನ ಬಂಡನು ಆಶಿಸಿ
ಹೊರಟವೊ ಕತ್ತಲ ದುಂಬಿಗಳು
ತೇಲುವ ಅಮೃತದ ಕುಂಭದ ಬಯಕೆಗೆ
ದಾನವರೆಸೆದಾ ಬಾಣಗಳೊ
ಎಂಬೊಲು, ಒಂದೊಂದೇ ಬಾವಲಿಗಳು
ಮರದಿಂದಾ ಚಂದ್ರನ ಕಡೆಗೆ
ಹಾರುತ ಹಾರುತ ಕಡೆಗೊಂದಾದುವು
ತಿಂಗಳ ಬೆಳಕಿನ ಕೃಪೆಯೊಳಗೆ
ಬೆರಗಾದುದು ಮನ ದೃಶ್ಯದ ಪರಿಗೆ
ಅನಿರೀಕ್ಷಿತ ಸಂಕ್ರಾಂತಿಯ ಕೃಪೆಗೆ !
 
                                    ಲೇಖಕರು:

Tuesday, January 1, 2013

ಭರವಸೆಯ ಉಷೆ!!!


ಕಳೆದ ವರುಷದ ನೆನಪುಗಳ ಜರಡಿಯಲ್ಲಿ ನನ್ನದೂಂತ ದಕ್ಕಿದ್ದು ಕೇವಲ, "ಭರವಸೆಯ ನಾಳೆಗಳು".
ರಾಜಕೀಯ ಚದುರಂಗದಲ್ಲಿ ಹೂಂಕರಿಸಿ ಮಲಗಿದ ಯುವಜನತೆ, ಸೋತು ಗೆದ್ದ ಪ್ರಪಂಚದ ಜನಜನಾರ್ಧನ(ಜರಾಸಂಧ)ರು, ಎಂದಿನಂತೆ ಮುನಿದ ಪ್ರಕೃತಿ, ಇರುವ ನೀರು ಮಜ್ಜಿಗೆ ಭೂಮಿಗಾಗಿ ನಾನು-ತಾನು  ಎಂದು ರಚ್ಚೆ ಹಿಡಿದ ಭವಿಷ್ಯದ ನಾಯಕರು, ವಾಸ್ತವತೆಗೆ ಕವಿದ, ಢೋಂಗಿ ಬಾಬಾಗಳ ಜೋಳಿಗೆ ತುಂಬಿಸಿದ "ಪ್ರಳಯ..ಪ್ರಳಯ.... ಪ್ರಳಯ....".

ಅರ್ಥವ್ಯರ್ಥಗಳ ಜಿಜ್ಞಾಸೆ  "ದಿ ಪರ್ಫೆಕ್ಟ್ ಸೃಷ್ಟಿಕರ್ತನಿಗಿರಲಿ". ಇನ್ನಾದರೂ ಹೃದಯದ ಬಾಗಿಲಿಗೆ ಜಡಿದ ಬೀಗದ ಮೇಲಿನ ಸಲ್ಲದ ಜಗಳದಲ್ಲಿ ನಾಕವನ್ನು ನರಕಮಾಡುವ ಹುಚ್ಚು ಪ್ರತಿಷ್ಠೆಗಿಂತ, ಹೃದಯಗಳ ನಡುವಿನ ಗಡಿರೇಖೆಗೊಂದು ಟಾಂಗು ಕೊಟ್ಟು ಕಳೆದ ಬೀಗದ ಕೀಲಿ ಹುಡುಕುವಲ್ಲಿ ಮಗ್ನರಾಗೋಣ....

ಪೂರ್ವಜರ ರಕ್ತದೋಕುಳಿ ಕೆಂಪಲ್ಲಿ ನಮ್ಮ ಸುಖದಂತೆ
ನಮ್ಮದರಲ್ಲಿ ನಮ್ಮವರದಾಗದಂತೆ ತಡೆಯುವ ಸಾಮೂಹಿಕ ಹೊಣೆಯ ಶಿಲುಬೆ ಇನ್ನಾದರೂ ಹೊರೋಣ...

"ಬದಲಾವಣೆಯ ಭರವಸೆಯಲ್ಲಿ..... ಹೊಸವರುಷದ ಶುಭಾಶಯಗಳು.