Monday, April 2, 2012

ಗೌತಮನಂತಹ ಗೌತಮಿ...!!


ಈಕೆ ನಮ್ಮ-ನಿಮ್ಮೆಲ್ಲರ ಗೌತಮಿ. ಸಾವಿಲ್ಲದ ಮನೆ ಸಾಸಿವೆಯಲ್ಲ, ಗುಟುಕು ಜೀವ ಹಿಡಿದು ಬದುಕಿರುವ ಬರ್ಮಾ ಎಂಬ ನತದೃಷ್ಟ ದೇಶಕ್ಕೆ ಸಂಜೀವಿನಿಯಾಗಲು ಕರ್ಪೂರದಂತೆ ಕರಗುತ್ತಿರುವ ಗೌತಮಿ. ಸಾಯುತ್ತಿರುವ ಪ್ರಜಾಪ್ರಭುತ್ವದ ಉಳಿವಿಗಾಗಿ ಊಳಿದಡೆ
           "ಗೆದ್ದೇ ಗೆಲ್ಲುವೆ ಎಲ್ಲಾ ಹೂನಗೆಯಲ್ಲೇ,
               ಲೋಕವೇ ಅಡಗುವುದಿಲ್ಲವೇ ಇಬ್ಬನಿಯಲ್ಲೇ,
                        ಉದುರಿ ಹೋದರೂ ತರಗೆಲೆ
                                   ನಾಳೆ ಬರದೇ ಚಿಗುರೆಲೆ..." 
ಎಂಬ ಆಶಾವಾದದಲ್ಲೇ ಬದುಕಿದ್ದ ತನ್ನವರೆಲ್ಲಾ ಸಾವಿನ ಕದ ಬಡಿದರೂ, ಮೂಡಿದ ಕಂಬನಿ ಆರದ ಅನುಘಳಿಗೆಯೂ ತನ್ನ ಸಿದ್ದಾಂತದ ಉಳಿವಿಗಾಗಿ ಕಮ್ಯುನಿಸ್ಟ್ ಯಮನ ಬೆನ್ನು ಹತ್ತಿದ ಸಾವಿತ್ರಿ.

"ಒಂದು ಮನೆ, ಹೆಸರಿಗೆ. ಕರೆಂಟ್ ಇದೆ, ಟಿ ವಿ ಇಲ್ಲ, ರೇಡಿಯೊ ಇಲ್ಲ, ಮೊಬೈಲ್ &ಇಂಟರ್ನೆಟ್ ಇಲ್ಲವೇ ಇಲ್ಲ. ಪುಸ್ತಕ ಇದೆ, ಅಭಿರುಚಿಗೂ ನಿಲುಕದ ಸಿದ್ದಾಂತಕ್ಕೆ ಕಟ್ಟು ಬಿದ್ದಂತಹವು, ಬಾಗಿಲಿನಿಂದ ಒಳಗಿನ/ಹೊರಗಿನ ಕಾಲುಗಳು ಅಡ್ಡಾಡುವಂತಿಲ್ಲ. ಆಲೋಚನೆಗಳು ದಂಡಿಯಿವೆ, ಹಂಚಲು ಜೊತೆಗಾರರೆಂದು ಕರೆಯಬಹುದಾದ ಒಂದು ನರ ಪಿಳ್ಳೆಯೂ ಇಲ್ಲ. ಕೆಲಸದಾಳುಗಳು ಇದ್ದಾರೆ, ಮಾಡುವ ಕೆಲಸ ನಿಮ್ಮದಾದರೂ ನಿಷ್ಠೆ ಅವರ ಧಣಿಗೆ"
ಹೇಳಿ, ಇಂತಹ ವಾತಾವರಣದಲ್ಲಿ ನೀವು ಎಷ್ಟು ದಿನ [ಕ್ಷಮಿಸಿ, ಘಂಟೆ] ಇರಬಲ್ಲಿರಿ? ಅಬ್ಬಬ್ಬಾ ಅಂದರೆ 5 ಘಂಟೆ? ಇದ್ಯಾವುದೋ ಬಿಗ್ ಬಾಸ್ ಅಥವಾ ಬಿಗ್ ಸ್ಲೇವ್ ಸೆಟ್ ಅಲ್ಲ, ಸೂಕಿ ಕಳೆದ 15 ವರುಷದಿಂದ ಬದುಕಿದ ಕ್ಷಣಗಳು ಹಾಗಿದ್ದವು.
5 ದಿನದ ಕಾಟಾಚಾರದ ಕೆಲಸದ ನೆಪಮಾಡಿ ವಾರಾಂತ್ಯದ ಹೆಸರಿನಲ್ಲಿ ಮೋಜು ಮಾಡುವ ಸಂಸ್ಕೃತಿಗೆ ಬಿದ್ದಿರುವ ನಮಗೆ 15 ವರುಷಗಳ ಕಾಲ ಟಿ ವಿ, ಇಂಟರ್ನೆಟ್ ಇಲ್ಲದೆ ಕೇವಲ ಪುಸ್ತಕ, ಸಿದ್ದಾಂತಗಳ ನಡುವೆ ಮನೆಯೆಂಬ ಸೆರೆಮನೆಯಲ್ಲಿ ಜಗತ್ತಿಗೆ ತಿಳಿಯದಂತೆ ಕಳೆದುಹೋಗುವ ಸೂಕಿಯ ಕಿಚ್ಕಿದೆಯಲ್ಲಾ ಅದನ್ನು ಊಹಿಸಲಸಾಧ್ಯ.

ಅಪ್ಪ ಬರ್ಮಾದ ಪಿತಾಮಹ, ಅಮ್ಮ ರಾಜಕೀಯ ಮುತ್ಸದ್ದಿ. ಕೂಡಿ-ಬೆಳೆಯಲು ಅಣ್ಣಂದಿರು. ಎಲ್ಲ "perfect family frame" ತರಹವೇ ಇತ್ತು. ದೇಶಕ್ಕೆ ಸ್ವತಂತ್ರ ಸಿಕ್ಕ ಖುಷಿಯಲ್ಲೇ ತನ್ನವರಿಂದಲೇ ಹತ್ಯೆಗೀಡಾದ ಅಪ್ಪ, ನಂತರ ರಾಜಕೀಯವಾಗಿ ಸಕ್ರಿಯವಾದ ಅಮ್ಮನೊಡನೆ ಭಾರತಕ್ಕೆ ಬಂದು ಇಲ್ಲೇ ವಿದ್ಯಾಭ್ಯಾಸ ಪೂರೈಸಿ, ಟಿಬೆಟ್ ಕುರಿತಂತೆ ಸಕ್ರಿಯ ಸಿದ್ದಾಂತವಾದಿಯಾಗಿದ್ದ ಮೈಕಲ್ ನೊಡನೆ ಪ್ರೇಮ-ವಿವಾಹ, ನ್ಯೂಯಾರ್ಕ್ ನಗರದಲ್ಲಿ ವಿಶ್ವ ಸಂಸ್ಥೆ ಕಚೇರಿಯಲ್ಲಿ ಕೆಲಸ, ಮುದ್ದಾದ 2 ಮಕ್ಕಳು... ಇನ್ನೇನು ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚಲು?

ಅಷ್ಟರಲ್ಲೇ ಕಮ್ಮುನಿಸ್ಟ್ ಕಿಚ್ಚು ದೇಶದೆಲ್ಲಡೆ ಹರಡಲಾರಂಭಿಸಿತ್ತು. ಮಿಲಿಟರಿ ಆಡಳಿತದ ಛಾಯೆ ರಂಗೂನ್ ಆಗಸದಲ್ಲಿ ಕವಿದಿತ್ತು. ಅಂತಹ ಅನಿಶ್ಚಿತ 88ರ ಒಂದು ಮುಂಜಾನೆ ಮರಣಶಯ್ಯೆಯಲ್ಲಿದ್ದ ತಾಯಿಯ ನೋಡಲು ಬರ್ಮಾಗೆ ಬಂದಿಳಿದ ಸೂಕಿಗೆ ಗೊತ್ತೇ ಆಗದ ವಿಷಯವೆಂದರೆ ಆಕೆ ಮತ್ತೆಂದೂ ಆ ನೆಲ ಬಿಟ್ಟು ಕಡಲುವಂತಿಲ್ಲ.... ಅದೂ 2 ದಶಕಗಳ ಕಾಲ.

ಅಮ್ಮನ ಆರೋಗ್ಯದ ಜೊತೆದೇಶದ ಪ್ರಜಾಪ್ರಭುತ್ವಕ್ಕೂಕಮ್ಮುನಿಸ್ಟ್ ಸೋಂಕು ಹರಡುವುದನ್ನು ಮನಗಂಡ ಸೂಕಿ 90ರ ಸಾರ್ವತ್ರಿಕ ಚುನಾವಣೆಯಲ್ಲಿ ಪಾಲ್ಗೊಂಡು ಬಹುಮತವನ್ನೂ ಪಡೆದರು. ದೇಶದ ಚುಕ್ಕಾಣಿ ಬಿಟ್ಟು ಕೊಡಲು ಭಂಡ ಜಿಂಟಾಹು ಸಿದ್ದನಿರಲಿಲ್ಲ. ದೇಶದ ಆಂತರಿಕ ಕ್ಷೋಬೆಯ ಹೆಸರಿನಲ್ಲಿ ಸೂಕಿಗೆ ಮನೆ ದಿಗ್ಬಂಧನ ವಿಧಿಸಲಾಯಿತು.  ನ್ಯೂಯಾರ್ಕ್ ನಗರದಲ್ಲಿದ್ದ ಸೂಕಿಯ ಪತಿ ಕಳವಳಗೊಂಡು ಬರ್ಮಾಗೆ ಬರಲು ವೀಸಾ ಕೇಳಿದರೆ ಕಮ್ಯುನಿಸ್ಟ್ ಸರಕಾರ ಸಮ್ಮತಿಸಲಿಲ್ಲ... ಬೇಕಿದ್ದಲ್ಲಿ ಸೂಕಿಯೇ  ನ್ಯೂಯಾರ್ಕ್ ನಗರಕ್ಕೆ ಹೋಗಲಿ ಎಂದಿತು. ಸೂಕಿ ಒಪ್ಪಲಿಲ್ಲ... ಆಕೆಗೆ ಭಂಡ ಕಮ್ಮ್ಯೂನಿಸ್ಟ್ ಸರಕಾರದ ಹುನ್ನಾರ ತಿಳಿದು ಹೋಗಿತ್ತು. ಒಮ್ಮೆ ದೇಶದಿಂದ ಹೊರಗೆ ಕಾಲಿಟ್ಟಲಿ ಮತ್ತೆ ಮರಳಲು ಅನುಮತಿ ದೊರೆಯದೆಂದು. ನಂತರದಲ್ಲಿ ಮೈಕಲ್ ಕ್ಯಾನ್ಸರ್ ಪೀಡಿತನಾಗಿ ಮರಣ ಶಯ್ಯೆಯಲ್ಲಿದ್ದಾಗಲೂ ಸೂಕಿ ಅವನನ್ನು ನೋಡಲು ದೇಶ ಬಿಟ್ಟು ಹೊರಡಲಿಲ್ಲ... ದೇಶದ ಭವಿಷ್ಯದ ಮುಂದೆ ಆಕೆಯ ಸ್ವಂತ ಸುಖ-ದುಖ ಮರೆತುಹೋಗಿತ್ತು. ಹೆಂಡತಿಯನ್ನು ನೋಡದೇ 99ರಲ್ಲಿ ಕ್ಯಾನ್ಸರ್ ಪೀಡಿತನಾಗಿ ಮರಣಹೊಂದಿದಾಗ ಸೂಕಿ ಒಳಗೊಳಗೆ ಮುರಿದುಹೋಗಿದ್ದಳು. 89ರಿಂದ-99ರ ಅವಧಿಯಲ್ಲಿ ಕೇವಲ 5 ಬಾರಿಯಷ್ಟೆ ಭೆಟ್ಟಿ ಮಾಡಿದ್ದ ಮೈಕಲ್ ಮರಣದೊಂದಿಗೆ ಸೂಕಿ ಮಕ್ಕಳೂ ಕೂಡ ಲಂಡನ್ ನಗರದಲ್ಲಿ ಆಶ್ರಿತರಾಗಿ ಬೆಳೆಯಬೇಕಾಯಿತು.  ಕೈ ಹಿಡಿತ ಪತಿ ಅನಾಥನಂತೆ ಸತ್ತಾಗಲೂ, ಸ್ವಂತ ಮಕ್ಕಳು ಪರದೇಶದಲ್ಲಿ ಕಂಡವರ ನೆರಳಿನಲ್ಲಿ ಬದುಕಬೇಕಾದಾಗಲೂ ಸೂಕಿ ಕದಲಲಿಲ್ಲ... ಅಕ್ಷರಶಃ ಸೂಕಿ ಗೌತಮ ಬುದ್ದನಷ್ಟೆ ಪ್ರಬುದ್ದಳಾಗಿದ್ದಳು. ಹೆಂಡತಿ ಮಕ್ಕಳನ್ನು ನಡುನೀರಿನಲ್ಲಿ ಬಿಟ್ಟು ಮೋಕ್ಷ ಹುಡುಕಲು ಮಧ್ಯರಾತ್ರಿ ಮರೆಯಾದ ಬುದ್ದನಿಗಿಂತ ಪ್ರಭುತ್ವ ಮೆರೆದು ಪತಿ-ಪುತ್ರರಿಗೆ ತಿಳಿಸಿಯೇ ತನ್ನ ಹಾದಿ ಹಿಡಿದಿದ್ದಳು. ಆಕೆಗೆ ತಿಳಿದಿತ್ತು, ಹಿಡಿಯುವ  ಹಾದಿಯಲ್ಲಿ ಹಿಂತುರುಗುವುದು ಸಾಧ್ಯವಿಲ್ಲ, ತನ್ನವರೆನ್ನುವ ಯಾರೂ ನನ್ನವರಾಗಿರುವುದಿಲ್ಲ... ಒಂಟಿತನದ ಸುದೀರ್ಘ ಯಶಸ್ಸು ಅನಿಶ್ಚಿತವಿರುವ ಪ್ರಯಾಣ. ದೇಶದ ಹಿತ ಕಾಯುವ ಕೆಲಸ ಬದುಕಿನ ಅಮೂಲ್ಯ ಕ್ಷಣಗಳನ್ನು ಬೇಡುತ್ತಿತ್ತು.... ಕೊಡಲು ಸೂಕಿ ಸಿದ್ದಳಿದ್ದೇ ಇದ್ದಳು. ಆ ತ್ಯಾಗ ಆಕೆಯಿಂದ ಕಸಿದಿದ್ದು ಆಕೆಯ ಬದುಕಿನ ಅಮೂಲ್ಯ 21 ವರುಷಗಳನ್ನ.... ತ್ಯಾಗಗೂ ಎಲ್ಲೆ ಇದೆಯೇ?

ಕಷ್ಟಗಳಿಗೆಲ್ಲಾ ಕಲಶವಿಟ್ಟಂತೆ 2008ರ ಮೇನಲ್ಲಿ ಬೀಸಿದ ನರ್ಗೀಸ್ ಚಂಡಮಾರುತದಲ್ಲಿ ಸೂಕಿ ಮನೆಯಿರುವ ಪ್ರದೇಶದಲ್ಲಿ ವಿದ್ಯುತ್ ಕಡಿತ ಉಂಟಾಯಿತು. ಭಂಡ ಕಮ್ಯುನಿಸ್ಟ್ ಸರಕಾರ ಈ ತೊಂದರೆಯನ್ನು ಸರಿಪಡಿಸುವ ಗೋಜಿಗೆ ಹೋಗಲಿಲ್ಲ. 2009ರ ಆಗಸ್ಟ್ ತಿಂಗಳಿನವರೆಗೂ... ಅಂದರೆ ಭರ್ತಿ  1.5 ವರ್ಷ ಸೂಕಿ  ಮೇಣದ ಬತ್ತಿ ಹಚ್ಚಿಕೊಂಡು ರಾತ್ರಿಗಳನ್ನ ಕಳೆದಿದ್ದಾಳೆ ಅಂದರೆ ಸರ್ಕಾರ ಆಕೆಯನ್ನು ಇಟ್ಟಿದ್ದ ಪರಿಸ್ಥಿತಿ, ಆಕೆಯ ಮನೋಸ್ತೈರ್ಯವನ್ನ  ಊಹಿಸಿಕೊಳ್ಳಿ. ಇಷ್ಟಾದರೂ ಆಕೆ ಪರಿಸ್ಥಿತಿಯೊಡನೆ ರಾಜಿಯಾಗಲಿಲ್ಲ.  
ಬುರ್ಮದಲ್ಲಿ ಹೀಗಾಗುತ್ತಿರುವಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಕಿಯ ಪರವಾಗಿ ಪ್ರತಿಭಟನೆಗಳಾದವು. ಅಮೆರಿಕ, ಯೂರೋಪ್, ಆಸ್ಟ್ರೇಲಿಯಾ ಎಲ್ಲೆಡೆ ಸೂಕಿಯ ಬಿಡುಗದೆಗಾಗಿ ಧ್ವನಿ ಮೊಳಗಿದವು. ಅಂತರ ರಾಷ್ಟ್ರೀಯ ಮಟ್ಟದ ನಾಯಕರು ಸೂಕಿಗೆ ಮನೋಸ್ತೈರ್ಯ ನೀಡಿ ಆಕೆಗೆ ಬೆಂಬಲಿಸಿದರು. ನೋಬೆಲ್ ಶಾಂತಿ ಪುರಸ್ಕಾರ ಸೂಕಿಯನ್ನಿ ಹುಡುಕಿಕೊಂಡು ಬರ್ಮಗೇ ಬಂತು. ಇಷ್ಟಾದರೂ ಲಜ್ಜೆಗೇಡಿ ಕಮ್ಮ್ಯೂನಿಸ್ಟ್ ಸರಕಾರ ಮಣಿಯಲಿಲ್ಲ. 

ಹಲವು ಏಳು-ಬೀಳುಗಳ ನಂತರ ಸೂಕಿಯ ಶಾಂತಿಯ ಕಿಚ್ಚಿಗೆ ಮಣಿದು ಬರ್ಮಾ ಸರಕಾರ 2010ರಲ್ಲಿ ಆಕೆಯನ್ನು ದಿಗ್ಬಂಧನದಿಂದ ಬಿಡುಗಡೆಗೊಳಿಸಿತು. ಅಂದಿನಿಂದಲೂ ಹತಾಶರಾಗಿದ್ದ ಜನತೆಯಲ್ಲಿ ಆತ್ಮವಿಶ್ವಾಸವನ್ನು ತುಂಬಿ, ದೇಶದ ಭವಿಷ್ಯದ ದಿನಗಳಲ್ಲಿ ಬರುವ ಸುವರ್ಣಯುಗದ ದಿನಗಳಲ್ಲಿ ಅವರ ಪಾಲನ್ನು ಅವರಿಗೇ ನೀಡಲು ಸೂಕಿ ಕಂಕಣಬದ್ದಳಾಗಿದ್ದಾಳೆ. ಅಷ್ಟು ಕಷ್ಟ-ಕಾರ್ಪಣ್ಯಗಳ ನಡುವೆಯೂ ಸುಕ್ಕೂ ಚದುರದೆ ಆಕೆಯದು ಎನ್ನುವಂತೆ ಉಳಿದಿರುವುದು ಬರೀ ಆಕೆಯ "ಮಂದಹಾಸ" & "ಮನೋಸ್ತೈರ್ಯ".

 ಚೈತ್ರದ ಚಿಗುರಿಗಾಗಿ ಕೋಗಿಲೆ ಮತ್ತೆ ಹಾಡಲಿದೆ... ಕಮ್ಯುನಿಸ್ಟ್ ದಳ್ಳುರಿಯಲ್ಲಿ ದಹಿಸಿದ ಬರ್ಮಾ ಮತ್ತೆ ಪ್ರಜಾಪ್ರಭುತ್ವದ ಹಸಿರು ಸಿರಿಯನ್ನು ಕಾಣಲಿದೆ. ಇದಕ್ಕೆ ಪೂರಕವೆಂಬಂತೆ ಬರ್ಮದಲ್ಲಿ ನೆಡೆಯುತ್ತಿರುವ ಚುನಾವಣೆಯಲ್ಲಿ ಸೂಕಿ ಜಯಗಳಿಸಿದ್ದಾಳೆ. ಇದರೊಂದಿಗೆ ಅಧಿಕೃತ ಮುದ್ರೆಯೊಂದಿಗೆ ಸೂಕಿ ಬರ್ಮಾ ಸಂಸತ್ತಿಗೆ ಕಾಲಿಡುವುದು ಖಚಿತವಾಗಿದೆ. ಗೆದ್ದರೆ ಬರ್ಮಾ ಗಣರಾಜ್ಯದ ಅಧ್ಯಕ್ಷೆಯಾಗಿ, ಸೋತರೆ[ಅದಾಗದೆಂಬ ವಿಶ್ವಾಸದಲ್ಲಿ] ವಿರೋಧಪಕ್ಷದ ಅಧ್ಯಕ್ಷೆಯಾಗಿ!!! ಒಟ್ಟಿನಲ್ಲಿ ದಮನಕಾರಿ ಆಡಳಿತದ ವಿರುದ್ದ ದನಿಯೆತ್ತಲು ಸೂಕಿಗೆ ಅವಕಾಶ ಇದ್ದೇ ಇದೆ. "ಸತ್ಯಮೇವ ಜಯತೆ" ನಿರೂಪಿಸಲು ಕಾಲ ತೆಗೆದುಕೊಂಡ ಅವಧಿ ಭರ್ತಿ 21 ವರುಷ.... 66ರ ಚಿರಯವ್ವನೆ ಸೂಕಿ ನಿಜಕ್ಕೂ ನಮ್ಮೆಲ್ಲರಿಗೂಸ್ಪೂರ್ತಿಯ ಚಿಲುಮೆ.

ಮನುಕುಲದ ಮನಸ್ಥಿತಿಯೇ ಹಾಗೆ... ಆದರ್ಶವೆನಿಸುವ ಪ್ರತಿಯೊಂದೂ ಅವರ ಪಕ್ಕದ ಮನೆಯಲ್ಲಿ ನಡೆಯಬೇಕು. ಹಲವು ನೋವುಗಳ ದನಿ ಕೂಡ ಪಕ್ಕದಲ್ಲಿಂದಲೆಲ್ಲೋ ಮೊಳಗಬೇಕೆ ಹೊರತು ನಮ್ಮೊಳಗಲ್ಲ. ಸಮಸ್ತ ಇಸ್ಲಾಂ ದೇಶಗಳ ಆದರ್ಶ ಇಸ್ಲಾಂ ಧರ್ಮಪಾಲಕ ದೇಶದ  ಪ್ರಯೋಗಶಾಲೆಯಾಗಿ ಸಿಕ್ಕಿದ್ದು ನತದೃಷ್ಟ ಆಫ್ಘಾನಿಸ್ತಾನ, ತಮಿಳು ತಲೆಗಳ ಪುಂಡಾಟಗಳಿಗೆ ಮೈದಾನವಾದದ್ದು ಶ್ರೀಲಂಕಾ... ಹಾಗೆ ಬರ್ಮಾ ಕಮ್ಯೂನಿಸ್ಟರ ಪ್ರಯೋಗಶಾಲೆಯಾಗದೆ ಉಳಿಯಲು ಕಾರಣ ಸೂಕಿ.   ಸತ್ತ ಗಂಡನ ಹೆಂಡತಿ ಎಂಬ ಒಂದೇ ಕಾರಣಕ್ಕೆ ಕೊಡಬಾರದ ಅಧಿಕಾರವನ್ನು ಕೊಡಮಾಡುವ ಭಾರತ ಇನ್ನಾದರೂ ಕಾದು-ನೋಡುವ  ತಂತ್ರ ಬಿಟ್ಟು ಸೂಕಿಯ ಬೆಂಬಲಕ್ಕೆ ನಿಲ್ಲುವ ಪ್ರಾಜ್ಞ ನಿಲುವು ತಾಳುವುವುದರೊಂದಿಗೆತಾನೂ ಕೂಡ ತನ್ನ ಜ್ವಲಂತ ಸಮಸ್ಯೆಗಳನ್ನು ಅಂತಹುದೇ ದಿಟ್ಟ-ನೇರ ನಿರ್ಧಾರದಲ್ಲಿ ಬಗೆಹರಿಸಿಕೊಳ್ಳುವ ಜಾಣ್ಮೆಮೆರೆಯಬೇಕು.

ಸೂಕಿಯ ಗೆಲುವಿನೊಂದಿಗೆ ಬುದ್ದ ಕೂಡ ಹಸನ್ಮುಖನಾಗಿದ್ದಾನೆ.ಸೂಕಿ ಅಧಿಕಾರ ಚುಕ್ಕಾಣಿ ಹಿಡಿಯುವುದರೊಂದಿಗೆ ಬರ್ಮಾದ ಸುವರ್ಣಕಾಲ ಶುರುವಾಗುದೆಂಬ ಭರವಸೆಯಲ್ಲಿ 

ನಿಮ್ಮ
ಅವಿ

Friday, March 23, 2012

ಆಸ್ತಿಕತೆ v/s ಮುಗ್ದತೆ.


ಬೆಳೆಯುವ ಪ್ರತೀ ಹಂತದಲ್ಲಿ ಸಾಯುವ ಮುಗ್ಧತೆ ಕಾಲಾಂತರದಿ ಬೇರೂರಿ ನಿಂತ ಆಸ್ತಿಕತೆಗೆ ಒಂದೊಂದೇ ಕೊಡಲಿ ಪೆಟ್ಟನ್ನು ಹಾಕಿದೆ. ಅಜ್ಜಿ ಕಥೆಯ 7 ಸಾಗರದಾಚೆಯ ರಾಜಕುಮಾರಿ ಇಂದಿನ ತಲೆಮಾರಿಗೆ ಕೇಟ್ ವಿನ್ಸ್ಲೆಟ್, ಅಂಜೆಲಿನಾಜೂಲಿಯ ಪ್ರತಿರೂಪವಷ್ಟೆ.
ಅಡ್ಡಿ ಇಲ್ಲ... ಮುಗ್ದತೆ ಸಾಯಲೇ ಬೇಕು. ಅದರ ಸಾವಲ್ಲೇ ಜಗತ್ತಿನ ಬದುಕಿದೆ. ಆ ಬದುಕಿನಲ್ಲೇ ಇತಿಹಾಸದ ಅಸ್ತಿತ್ವವಿದೆ. ಕಳೆದ ವರುಷ ನಮ್ಮ ಮುಗ್ದತೆಯ ಒಂದು ಮಜಲನ್ನು ಕೊಂದಿದೆ. ಬದುಕಿನ ಗೋಡೆ ಇನ್ನೊ ಒಂದು ಹಂತಕ್ಕೆ ಮೇಲೇರಿದೆ. ಸಾವು-ಬದುಕಿನ ಲಾಸ್ಯದಂತಹ ಬೇವು-ಬೆಲ್ಲದ ಯುಗಾದಿ ಮತ್ತೆ ಬಂದಿದೆ..... "Be Practicle"ನಂತಹ ಬೇವಿನ ಬದುಕಿಗೆ ಆಸ್ತಿಕತೆಯೆಂಬ ಬೆಲ್ಲವೂ ಕೊಂಚ ಸೇರಲಿ. "ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಗಸು", ಅಲ್ಲವೇ?

ನಿದ್ರಿಸಿರುವ ನಿಮ್ಮ ಆಸ್ತಿಕತೆಗೊಂದು ಮೊಟಕಿ, ಇಂದಾದರೂ ಮುಗ್ದತೆಯನ್ನ ಆಹ್ವಾನಿಸಿ. ಅದರೊಡಗೂಡಿ ದೇಸಿ ಸೊಗಡಿನ ಯುಗಾದಿಯನ್ನ ಆಚರಿಸಿ. ಸರ್ವಗಣ ಪ್ರಥಮ ಗಣುಮಾಮ ನಿಮ್ಮಗಳ ಬದುಕಿನ ಅನುದಿನವನ್ನೂ ಸಂತೋಷಕರವಾಗಿಡಲಿ ಎಂಬ ಹಾರೈಕೆಯೊಂದಿಗೆ

ನಿಮ್ಮ
ಅವಿ


Monday, February 6, 2012

ಮಕ್ಕಳಿರಲವ್ವ ಮನೆ ತುಂಬಾ!!!

ಅಂದಕಾಲತ್ತಿಲ್ ಈ ಮಾತಿತ್ತು. ಹೆರುವ ಮಕ್ಕಳಿಗನುಗುಣವಾಗಿ ಪಟ್ಟದರಸಿ ಪಟ್ಟವೂ ಗಿಟ್ಟುವ ಕಾಲವಿತ್ತು. ಇಂದು ಮಾತೆಗೆ ಈ ಮಾತೇ heavy ಆಗಿದೆ. ಸುಕ್ಕೂ ಚದುರದೆ ಹೆರುವ ಕಷ್ಟ ಹಾಗಿರಬಹುದೇನೋ?!! ಬಿಡಿ, ಗಂಡಸಿಗ್ಯಾಕೆ ಗೌರಿ ದುಖ:.  ಸ್ವಂತ  ಮನೆಯ ನನಸಿನೊಂದಿಗೆ ಅಮ್ಮ ಮಕ್ಕಳ ಜಂಜಾಟಕ್ಕೆ ಒಂದು break ಕೊಟ್ಟು, ದೇವ ಮಂದಿರಗಳಲ್ಲಿ ಮನಶಾಂತಿ ಹುಡುಕುವ ವಯಸ್ಸಿನಲ್ಲಿ ಮೂಕ ಜೀವಗಳಲ್ಲಿ ಕಂಬ-ಗೋಡೆಗಳ ನಡುವೆ ಸಿಗದ ಮನಶಾಂತಿ ಕಂಡುಕೊಂಡಿದ್ದಾಳೆ.

3 ವರುಷದ ಕೆಳಗೆ ನನ್ನ ಪಾಲಿನ ಕೈತುತ್ತು ಕಸಿದುಕೊಂಡ ಜಿಮ್ಮಿ, ಈಗ ಅಮ್ಮನೊಡನೆ ಕಳೆಯುವ ಸಮಯದಲ್ಲೂ ಪಾಲು ಕೇಳುತ್ತಿರುವ ರಾಮ-ಲಕ್ಷ್ಮಣ, ಶೀಘ್ರದಲ್ಲೇ ನಿರೀಕ್ಷಿಸಿರುವ 5-6 ಹಾರಲಾರದ 2 ಕಾಲಿನ ಅಪ್ಸರೆಯರು...... ನಾನುಗಳ ನಡುವೆ ಅವಳದಾಗಿ ಉಳಿಯದ ಮಕ್ಕಳಿಗಿಂತ "ನಾವುಗಳ" ಸಿದ್ದಾಂತದಲ್ಲಿ ನಂಬಿಕೆ ಇಟ್ಟವರೊಂದಿಗೆ ಅಮ್ಮ ಕಳೆದುಹೋಗುತ್ತಿದ್ದಾಳೆ.

ಅಮ್ಮ ಕಂಡುಕೊಂಡ ಮನಶಾಂತಿಗಾಗಿ ಖುಷಿಪಡುವುದೋ, ನಾನು ಕಳೆದುಕೊಂಡ ಅಮ್ಮನ ಒಡನಾಟದ ಗಳಿಗೆಗಳಿಗಾಗಿ ಮರುಗುವುದೊ.... ಒಟ್ಟಿನಲ್ಲಿ ತಿಂಗಳ ಮುಂಚೆಯೇ ನನ್ನ ಜೀವನದಲ್ಲಿ ಬೇವು-ಬೆಲ್ಲದ ಯುಗಾದಿ ಬಂದಿದೆ.

Wednesday, January 18, 2012

ಪ್ರಜಾಪ್ರಭುತ್ವದ ಕಂಬಕ್ಕೆ ಕುಟ್ಟು ಹಿಡಿದಿದೆ

ಬೆಂಗಳೂರೇನು ಇವರಪ್ಪನ ಮನೆ ಆಸ್ತಿಯೇ ಹೀಗೆ ಘಂಟೆಗಟ್ಟಲೆ ಐಸ್ ಕ್ರೀಂ ಮೆಲ್ಲುತ್ತಾ ಉಡಾಡಿತನ ತೋರಿಸಲಿಕ್ಕೆ?

ಒಂದೇ ಬೈಕಿನಲ್ಲಿ 3 ಜನ ಬುದ್ದಿಗೇಡಿ ವಕೀಲರು ಬರುತ್ತಿದ್ದಿದ್ದನ್ನು ಕಂಡ ಪೇದೆ ಕೇಳಿದ್ದೇ ತಡ,  ಕಳ್ಳು ಕುಡಿದ ಕೋತಿಯಂತೆ ಹಲ್ಲೆ ಮಾಡಿದ್ದೇ ಅಲ್ಲದೆ ಅಂಡು  ಸುಟ್ಟ ಬೆಕ್ಕುಗಳಂತೆ ಹೀಗೆ 7 ಘಂಟೆಗಳ ಕಾಲ "freedom for expression" ಹೆಸರಿನಲ್ಲಿ ಈ ಪರಿಯ ಗೂಂಡಾಗಿರಿ ಮಾಡಬಹುದೇ?

ಇಂಥಾ ಹುಂಬರಿಗೆ ಆಂಡಿಗೆರಡು ಕೊಡದೆ ಪೊಲೀಸರೂ ಕೂಡ ಸಂಧಾನದ ಹೆಸರಿನಲ್ಲಿ ಹುಲಿ-ಕುರಿ ಆಟ ಆಡಬಹುದೇ? ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಜನತೆಯ ನೆಮ್ಮದಿಯನ್ನೇ ಹರಾಜಿಗಿಟ್ಟ ಈ ಇಬ್ಬಂದಿಗಳಿಗೆ ಶಿಕ್ಷಿಸೋರು ಯಾರು? ಊರಿಗೆಲ್ಲ ಬುದ್ದಿ ಹೇಳುವ ಬೆಕ್ಕು ಒಲೆ ಮುಂದೆ ಉಚ್ಚೆ ಹುಯ್ದರೆ ಎಂತ ಮಾಡೋದು?

ಹಸಿವು, ಬೆದರಿಕೆಯಿಂದ ಕಂಗೆಟ್ಟು ಅತ್ತ ಮಕ್ಕಳು, ಇಹ-ಪರ ತಿಳಿಯದ ಪೋಷಕರು, ಕುಳಿತಲ್ಲೆ ಕಲ್ಲಾದ ವೃದ್ದರು, ಭಾಷೆ ಬಾರದೆ ಕಿದ್ವಾಯಿ ರಸ್ತೆ ತಿಳಿಯದೆ ಕಂಗೆಟ್ಟ ಪರವೂರಿನ ಅನಾರೋಗ್ಯಪೀಡಿತನ ಬಸುರಿ ಹೆಂಗಸು, ತ್ರಿಶಂಕು ಸ್ಟಿತಿಯಲ್ಲಿನ ಪ್ರಯಾಣಿಕರು, ಜನತೆಗೆ ಮಾರ್ಗದರ್ಶನ ಮಾಡದೆ ನಂ.1 ಗುಂಗಿನಲ್ಲೇ ತಗಲಾಕೊಂಡ ಎಫ್ ಎಂಗಳು.....ಡೈರಿ ವೃತ್ತದಿಂದ ಮಲ್ಲೇಶ್ವರ ತಲುಪಲು 4 ಘಂಟೆ 30 ನಿಮಿಷ.

ಇವರು ನಮ್ಮ so called ನಾಗರೀಕ ವಕೀಲರು, ಮಣ್ಣಿಗೆ ಹೋಗಲಿ ಇವರ ನಾಗರೀಕತೆ..... ಜನಸಾಮಾನ್ಯರ ದುಗುಡವನ್ನು ಅರಿಯದ ಈ ಮಂಕುದಿಣ್ಣೆಗಳಿಗೆ ನಮ್ಮ ಘನ ನ್ಯಾಯ ಕಾಯುವ ಕೆಲಸ.

ನಿಜಕ್ಕೂ ಇಂಥಾ ಬೇಜವಾಬ್ದಾರಿ ಹೀನಸುಳಿ ಜನರ ಹೊಲಸು ಕೆಲಸ, ಕಾದು ನೋಡುವ ತಂತ್ರದ ರಾಜಕಾರಣಿಗಳು....!!!!

ಇಂಥವರಿದ್ದರೆ ನ್ಯಾಯದೇವತೆಯ ಕಣ್ಣಷ್ಟೇ ಯಾಕೆ? ಮೈಯನ್ನೂ ಕೂಡ ಕಪ್ಪು ಬಟ್ಟೆಯಲ್ಲೇ ಸುತ್ತಬೇಕು.

Saturday, January 14, 2012

ಸಂಕ್ರಮಣ ಘಟ್ಟದಲ್ಲಿ....


"ಅಗ್ನಿರ್ಜ್ಯೋತಿರ್‌ ಅಹಃ ಶುಕ್ಲಃ ಷಣ್‌ಮಾಸ ಉತ್ತರಾಯಣಂ।
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾಃ।"


ಇಹದ ದಕ್ಷಿಣಾಯನದಿಂದ ಮೋಕ್ಷದ ಉತ್ತರಾಯಣದ ಪಥಕ್ಕೆ ಸೂರ್ಯ 14ರ ಇಳಿಸಂಜೆ 6 ಘಂಟೆ 44 ನಿಮಿಷಕ್ಕೆ ಮಕರ ರಾಶಿ ಪ್ರವೇಶದೊಂದಿಗೆ ತನ್ನ ಯಾನ ಆರಂಭಿಸುತ್ತಾನೆ......
ಕಕ್ಷೆ ಪಥಗಳ ಕುರಿತು ಹಿರಿಯರ ವೈಜ್ಞಾನಿಕತೆಗೆ ತಲೆದೂಗುತ್ತಾ, ಬರಲಿರುವ ಪುಣ್ಯಕಾಲ ಅಂಧಕಾರದಲ್ಲಿ ಹುದುಗಿದ ಜನಮಾನಸದ ಸಮಸ್ತ ಭರವಸೆಗಳಿಗೂ ಜೀವಜಲವನ್ನುಣಿಸಲಿದೆಯೆಂಬ ಭರವಸೆಯಲ್ಲಿ,


"ಉಗ್ರರ  ಹೃದಯಕ್ಕೂ ಒಲಿಯಲಿ ಪ್ರೀತಿ...ಹರಸಲಿ ಸಂಕ್ರಾಂತಿ"


ಹಾರೈಕೆಯೊಂದಿಗೆ,
ನಿಮ್ಮ
ಅವಿ

Saturday, December 31, 2011

ಮತ್ತೆ ಹಾಡಲಿ ಕೋಗಿಲೆ...!!


ಒಂದು ವರ್ಷ ಅನುಭವದಲ್ಲಿ ಪಕ್ವತೆಗಳಿಸಿದ್ದಕ್ಕೆ ಖುಷಿಪಡಬೇಕೋ,  ಬದುಕಿನ ಮುತ್ತಿನ ಹಾರದಲ್ಲಿ ಒಂದು  ಮುತ್ತು ಕಮ್ಮಿಯಾಗಿದ್ದಕ್ಕೆ ಕಸಿವಿಸಿಪಡಬೇಕೋ... ಅರ್ಥವಿಲ್ಲದ ಆಲಾಪ.

"ಒಳ್ಳೆ ಕ್ಷಣಗಳ ಕೂಡಿಡಬೇಕು, ಬದುಕಿನ ನೆನಪಿಗೆ, ಋತುಗಳ ಜೂಟಾಟಕೆ"

ರೂಪಾಯಿ, ಚಿನ್ನ ಬೆಳ್ಳಿಯ ಹಗ್ಗ ಜಗ್ಗಾಟದಲ್ಲಿ ನಲುಗಿದ ಮಧ್ಯಮವರ್ಗ, ಭ್ರಷ್ಟಾಚಾರದ ವಿರುದ್ದದ  ಕಣ್ಣಾಮುಚ್ಚಾಲೆಯಲ್ಲಿ ಗೆದ್ದು ಸೋತ ಜನತೆ,  ಜಗತ್ತಿನೆಲ್ಲೆಡೆ ಕ್ರಾಂತಿಯ ಹೆಸರಿನಲ್ಲಿ ಉರುಳಿದ ಗದ್ದುಗೆಗಳು,  ಈ ಎಲ್ಲಾ ಭಾನಗಾಡಿಗಳ ಮಧ್ಯೆ ಸದ್ದಿಲ್ಲದೇ ಕರಗಿಹೋದ ಧ್ರುವಗಳ ಹಿಮಪದರ, ಇಳಿಯದ ಥರ್ಮೋಮೀಟರ್ ಪಾದರಸ.

ಬರುವ ಮನ್ವಂತರ ಬಳಲಿದ ಮನಗಳಿಗೆ ಹೊಸ ಚೇತನವನ್ನು ತರಲಿದೆಯೆಂಬ ಭರವಸೆಯಲ್ಲಿ

ಹಾರೈಕೆಯೊಂದಿಗೆ,
ನಿಮ್ಮ
ಅವಿ

Thursday, November 10, 2011

A Transition.... A Celeberation

ಬದಲಾವಣೆಯ ಗಾಳಿ ಬೀಸಲು ಇಷ್ಟು ಕಾಲ ಬೇಕಿತ್ತು.

2009ರ ಇಳಿ ಸಂಜೆ ನಾನು ಪ್ರಕಟಿಸಿದೆ "ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ" ಅನ್ನುವ ಮಾತಿಗೆ  ಇದೇ 13ರ ಶುಭ ಮುಂಜಾನೆಯಂದು ತೆರೆಬೀಳುತ್ತಿದೆ.

ನಮ್ಮ ಕನಸಿನರಮನೆ  "ಮನ್ವಂತರ" ನಮ್ಮ ಬಾಳುಗಳಲ್ಲೂ ಬದಲಾವಣೆಯ ತಂಗಾಳಿ ತರುವುದೆಂಬ ನಿರೀಕ್ಷೆಯೊಂದಿಗೆ ಭಾನುವಾರದ ಬೆಳಗ್ಗಿನ 7:30ರ ಚುಮ್ಮು ಚುಮ್ಮು ಚಳಿಯಲ್ಲಿ ಗೃಹ ಪ್ರವೇಶ ಮಾಡುವ ಹುನ್ನಾರದಲ್ಲಿದ್ದೇವೆ. :-)

 ಹತ್ತು ಗುಂಡಿ ತೊಡುವ ಬದಲು ಒಂದು ಬಾವಿ ತೋಡುವ ಪೆದ್ದು ನಾನು. ಇರುವ ಬೆರಳೆಣಿಕೆಯಷ್ಟುಗೆಳೆಯರ ಫೋನ್ ನಂಬರ್ ಇಟ್ಟುಕೊಳ್ಳಬೇಕೆನ್ನುವ ಕಾಮನ್ ಸೆನ್ಸ್ ಕೂಡ ಇಲ್ಲದ ಪಂಜುರ್ಲಿ. ಪರಿವರ್ತನೆಯ ಸೊಬಗಿಗೆ ನಮ್ಮವರೆನಿಸಿಕೊಂಡ ನೀವಿಲ್ಲದಿದ್ದರೆ ನಿಜಕ್ಕೂ ನಾವು ನಾವಾಗಿರುವುದಿಲ್ಲ.. ಇಂಥ ಹುಸಿ ಕೋಪದ ನಾಟಕದೊಂದಿಗೆ ನಿಮಗೆಲ್ಲರಿಗೂ ಆಮಂತ್ರಣವೀಯುತ್ತಿದ್ದೇನೆ.  ನಿಮ್ಮ ಆಗಮನದ ನಿರೀಕ್ಷೆಯಲ್ಲಿ.........





ಅನ್ನಪೂರ್ಣೇಶ್ವರಿ ನಗರ [ಕ್ಯಾತನಗೆರೆ ಲೇಔಟ್]
ಸೇಂಟ್. ಥಾಮಸ್ ಹೈ ಸ್ಕೂಲ್ ಹಿಂಭಾಗ.
ಚಾನಲ್ ರೋಡ್.
ಮಂಡ್ಯ-01

ನಕ್ಷೆ:








 

Tuesday, October 25, 2011

ಕತ್ತಲ ಕಣ್ಣುಗಳಲ್ಲಿನ ಸ್ನಿಗ್ದ ಹೊಳಪಿನ ನಿರೀಕ್ಷೆಯಲ್ಲಿ....

 "ಬೆಳಕನು ನುಂಗಿವೆ ಇಲ್ಲಿ ಕತ್ತಲ ಕಣ್ಣುಗಳು...
      ಮರೆವಿಗೆ ಸಂದಿವೆ ಇಲ್ಲಿ ಹರುಷದ ಬಣ್ಣಗಳು
           ತೋರು ಬಾ ಮನ್ವಂತರವೇ ಕನಸಿನೂರ ದಾರಿ...
                  ಸಾರು ಬಾ ಶುಭ ಸಂದೇಶ ಕಾಲ ರಥವನೇರಿ......!!! 

 ತಮ್ಮಿರುವಿಕೆಯನ್ನು ಮರೆತ ಮನುಷ್ಯರ ಮನುಷ್ಯತ್ವಗಳಿಗಾಗಿ ಕಾಲರಥವನ್ನು ನೆನೆಯುತ್ತಾ...
                  "ದೀಪಾವಳಿ ಹಬ್ಬದ ಶುಭಾಶಯಗಳು......."

ನಿಮ್ಮ
ಆವೀನ್

Saturday, October 15, 2011

ಸತ್ಯ, ಅದು ಹಿಡಿಬೂದಿಯೇ ಇರಲಿ, ವಸ್ತುನಿಷ್ಠವಾಗುತ್ತದೆ.


ಬಹಳ ದಿನಗಳ ನಂತರ ಓದಲೇ ಬೇಕೆಂದು ಓದಿದ್ದು ಕಾರಂತರ "ಆಳಿದ ಮೇಲೆ".



ಕಾರಂತರೇ ಪಾತ್ರಧಾರಿಯಾಗಿ ಹುಡುಕ ಹೊರಟಿರುವುದು ಅಳಿದ ಮೇಲೆ ಉಳಿದುದನ್ನು. ‘ಅಳಿದ ಮೇಲೆ’ ಯಲ್ಲಿಯ ಜೀವನದ ಅನ್ವೇಷಣೆ ಮಾತ್ರ ನೈತಿಕ ಹೊಣೆಗಾರಿಕೆಯಿಂದ ಪ್ರೇರಿತವಾದದ್ದು.ಇದರಲ್ಲಿನ ಪಾತ್ರಗಳಲ್ಲಿ ಎದ್ದು ಕಾಣುವ ಅಂಶ ಜೀವನಾಸಕ್ತಿ ಅಥವಾ ಬದುಕಿನಲ್ಲಿ ಶ್ರದ್ಧೆ, ಬದುಕಿನಲ್ಲಿ ಪ್ರಾಮಾಣಿಕತೆ. ’ಅಳಿದ ಮೇಲೆ’ ಕಾದಂಬರಿಯಲ್ಲಿ ಪುಟ ತಿರುಗಿಸಿಕೊಂಡು ಹೋಗಲು ಸಾಧ್ಯವಿಲ್ಲ. ಇದರಲ್ಲಿನ ಪ್ರತಿ ಘಟನೆ ವಿವರಣೆ, ಸಂಭಾಷಣೆಯನ್ನು ಗಮನಿಸಬೇಕು. ಅಲ್ಲಿರುವ ಅನುಭವದ ಪಕ್ವತೆ ನಮ್ಮ ಓಟವನ್ನು ತಡೆದು ನಿಲ್ಲಿಸಿ ಬದುಕಿನ ಸಂಕೀರ್ಣತೆ, ವಿಸ್ತಾರತೆಯತ್ತ ಬೆಟ್ಟು ಮಾಡುತ್ತದೆ.

ನನ್ನನ್ನು ಬಹಳ ಚಿಂತನೆಗೆ ಹಚ್ಚಿದ ಹಲವು ಸಾಲುಗಳಲ್ಲಿ ಕೆಳಗಿನವು ಪ್ರಮುಖವು.
  • ನಾನಿರುವುದು ಈಗ: ಸತ್ತ ಮೇಲಲ್ಲ. ಹುಟ್ಟುವ ಮೊದಲಿದ್ದಿರಲಿಲ್ಲ.ಸತ್ತ ಮೇಲೆಉಳಿಯುವುದು ನನ್ನ ನಡವಳಿಕೆಯ ನೆನಪು; ನಾನಲ್ಲ. ಇಲ್ಲದ ಆ ನನಗಾಗಿ ನಡೆಸುವ ಶ್ರಾದ್ದಾದಿ ಕ್ರಮಗಳುನನಗೆ ಸಮ್ಮತವಲ್ಲ.ನನಗೆ ಸಲ್ಲಿಸುವ ಶ್ರದ್ದೆ, ನನ್ನಲ್ಲಿ ಕಂಡ ಯಾವುದಾದರೂಒಳಿತು ಗುಣವಿದ್ದರೆ, ಅದನ್ನು ತಮ್ಮ ಬಾಳಲ್ಲಿ ತರುವುದು.ಅಂಥಾ ಶ್ರಾದ್ದವನ್ನುಯಾರು ಯಾರಿಗೆ ಬೇಕಾದರೂ ಮಾಡಬಹುದು. ಅದು ಮಾನವತೆಗೆ ಮಾಡುವ ಶ್ರಾದ್ದ;ವ್ಯಕ್ತಿಗಲ್ಲ.ಮಾನವಕುಲ ಚಿರಂತನ, ನಾವು ನಾಲ್ಕು ದಿನಗಳ ಒಂದು ದೃಶ್ಯ.

  • ಒಂದು ಸಮಾಜ, ಒಂದು ಕಾಲ, ಆ ಕಾಲದ ನಂಬಿಕೆ, ಆ ಸಮಾಜದ ವಿವಿಧ ಸನ್ನಿವೇಶಗಳು; ಆ ಸನ್ನಿವೇಶಗಳಲ್ಲಿ ಭಾಗಿಗಳಾದ, ಘಟನೆಗಳಲ್ಲಿ ಪಾತ್ರಗಳಾದ ವಿವಿಧ ಶೀಲ ಜನಗಳಿಂದಾಗಿ ಯಾವುದೋ ಮಾತು ಹೇಳಬೇಕೆನಿಸಿ ಹೊರಬೀಳುತ್ತದೆ. ಆ ಕಾಲ ಸರಿದ ಮೇಲೆ, ಹಿನ್ನಲೆಯಲ್ಲಿ ತಿಳಿದ ವ್ಯಕ್ತಿ ತೀರಿಕೊಂಡ ಮೇಲೆ, ನಮಗೆ ಉಳಿಯುವುದು ಜಡವಾಕ್ಯಗಳು; ಹತ್ತಾರು ಅರ್ಥಗಳನ್ನು ಕೊಡಮಾಡಬಲ್ಲ ಒಂದೊಂದು ಶಬ್ಧಗಳನ್ನೂ ಪೋಣಿಸಿ ಮಾಡಿದಂಥಾ ವಾಕ್ಯ ಸರಣಿಗಳು. ಅವುಗಳ ಮೇಲಿಂದಲೇ-ಬುದ್ದ ಹೀಗೆ ಹೇಳಿದ, ವಾಲ್ಮೀಕಿ ರಾಮನಿಂದ ಹೀಗೆಯೇ ಹೇಳಿಸಿದ , ಕೃಷ್ಣ ಹೇಳಿದ್ದೇ ಇದು- ಎಂಬ ದಿಟ್ಟತನವೇಕೋ? ಹಾಗೆ ಹೇಳಿದವರ ಕಾಲ ಸರಿದು ಸಾವಿರ. ಎರಡು ಸಾವಿರ ವರ್ಷ ಸಂದಿವೆ. ಆ ಕಾಲದ ಪ್ರವಾಹದಲ್ಲಿ ಹಿನ್ನಲೆಯೆಂಬುದು ಕೊಚ್ಚಿ ಹೋಗಿದೆ; ಬಳಸಿದ ಒಂದೊಂದು ಅರ್ಥವೂ ಮೂಲ ವ್ಯಾಪ್ತಿಯನ್ನು ಕಳೆದುಕೊಂಡಿರಬೇಕು. ಹೊಸ ಅರ್ಥ ಛಾಯೆಯನ್ನು ಪಡೆದಿರಬೇಕು. ಈಗಿನ ಭಾಷೆಯನ್ನು ಬಲ್ಲ ಮಾತ್ರಕ್ಕೆ, ಮೂಲ ಅರ್ಥ ಇದ್ದಕ್ಕಿದ್ದಂತೆಯೇ ಹೊಳೆದೀತೇ?

  • ನಿಜವಾದ ಸೂರ್ಯ ಮುಳುಗಿದ; ನಾಳೆ ಆತ ಬಂದಾನೆಂಬುದು ನಮ್ಮ ಅನುಭವ. ಆದ್ದರಿಂದಲೇ, ಮನುಷ್ಯ ಒಂದು ದಿನ ಸತ್ತರೂ, ನಾಳೆಯ ದಿನಇನ್ನೊಂದು ದೇಹವನ್ನುತಾಳಿ ಬರುತ್ತಾನೆ-ಎಂಬ ಭಾವನೆ ಮೊಳಗಿರಬೇಕು ಮನುಷ್ಯನ ಹೃದಯದಲ್ಲಿ. ಸಾಯುವುದಕ್ಕೆ ಇಷ್ಟವಿಲ್ಲದ ಮನುಸ್ಸುಅಂಥಾ ಕಲ್ಪನೆಗಳನ್ನು ತಾನೇ ಹೆಣೆಯಬೇಕು? ಈ ಸೂರ್ಯನಾದರೆ ತನಗಿರುವ ಕಾಯದೊಂದಿಗೆ ನಾಳೆಯೂ ಬರುತ್ತಾನೆ; ನಾಡಿದ್ದೂ ಬರುತ್ತಾನೆ;ದಿನ ದಿನವೂ ಬರುತ್ತಿರುತ್ತಾನೆ. ನಾವು! ಶರೀರವನ್ನು ಕಳಚಿ ಬಿಟ್ಟುಹೋಗುವ ಮಾನವ ಜೀವಿಗಳು; ಪುನರ್ಜನ್ಮದಲ್ಲಿ ಮತ್ತೊಂದು ಕಾಯಕವನ್ನು ಧರಿಸಿ ಬರುತ್ತೇವಂತೆ! ಈ “ಸೂರ್ಯ” ತಿರುಗಿ ಬಂದರೆ“ನಿನ್ನೆ ಬಂದು ಹೋದ ಸೂರ್ಯ ಇವನೇ”ಎಂಬುದನ್ನ ನಾವು ಗುರುತಿಸುತ್ತೇವೆ, ಮಾನವಪುನರ್ದೇಹಿಯಾಗಿ ಬಂದರೆ ಅವರನ್ನು ಗುರುತಿಸಬಲ್ಲೆವೇ? ಎಂದೂ ಇಲ್ಲ, ಗುರುತಿಸಿದವರಿಲ್ಲ. ಆದರೂ ಅಂಥಾ ಒಂದು ಹಂಬಲ ನಂಬಿಕೆಯಾಗಿ ನಮ್ಮ ಭಾವನೆಗಳಲ್ಲಿ ಬೇರೂರಿದೆ!ನಾವು ಹಿಂದೆ ಯಾವ ಅವತಾರ ತಾಳಿದ್ದೋ, ನಾಳೆ ಯಾವ ಜನ್ಮ ತಾಳಬಹುದು ಎಂದು ತಿಳಿಯಲಾರೆವಾದರೂ, ನಮ್ಮ ದೇವರ ಜನ್ಮಗಳನ್ನೆಲ್ಲಾ ನಾವು ಗುರುತಿಸಿದ್ದೇವೆ.ತಾನು ಸಹ ಚಿರಂತನವಾಗಿ ಬದುಕಬೇಕೆಂಬ ಆಸೆಯಿಂದ ಅವನು ಹೀಗೆ ಮಾಡುತ್ತಿರಬೇಕಲ್ಲವೇ?

  • ಹಾಲು ಹಾಲು ಬೆರೆತರೆ , ಅದು ಹಾಲು ಅಥವಾ ತುಂಬು ಹಾಲು . ಹಾಲು ನೀರು ಬೆರೆತರೆ ಬಣ್ಣ ಮಾತ್ರ ಹಾಲು , ಅದರ ರುಚಿ ಹಾಲಿನದಲ್ಲ . ಹಾಲು ಮಜ್ಜಿಗೆ ಬೆರೆತರೆ ಹಾಲಿನ ಸ್ವರೂಪವೇ ಉಳಿಯಲಾರದು . ಜೊತೆಗೆ ಅದು ತಾಮ್ರದಪಾತ್ರೆಯನ್ನು ಸೇರಿದರೆ ಕಿಲುಬದೆ ಉಳಿದೀತು ಹೇಗೆ?

  • ಮನುಷ್ಯ ಹುಟ್ಟುತ್ತಾನೆ , ಬಾಳುತ್ತಾನೆ , ಸಾಯುತ್ತಾನೆ . ಅವನ ಹುಟ್ಟಿನೊಂದಿಗೇ ಹುಟ್ಟಿಕೊಳ್ಳುವ ಬಾಂಧವ್ಯಗಳು , ಅವನನ್ನು ಬಂಧನದ ಬಳ್ಳಿಯಂತೆ ಸುತ್ತಿಕೊಳ್ಳುತ್ತವೆ . ಅಲ್ಲಿ ಸ್ವಾರ್ಥವೂ ಇರುತ್ತದೆ , ನಿಸ್ವಾರ್ಥವೂ ಇರುತ್ತದೆ . ನಂತರ ಬರುವ ಮಿತ್ರ ವರ್ಗದಲ್ಲಿ ವಂಚನೆಯೂ ಇರುತ್ತದೆ, ಉಪಕಾರವೂ ಇರುತ್ತದೆ . ಇವೆಲ್ಲ ಬಂಧನಗಳಿಗಿಂತ ಬಿಗಿಯಾದ , ಎಡೆಬಿಡದ ಬಂಧನವಾದ ದಾಂಪತ್ಯದಲ್ಲಿ ವಂಚನೆಗಳಿದ್ದರೆ ಅದು ಪ್ರತ್ಯಕ್ಷ ನರಕ . ಇಂತಹ ಗೋಜಲುಗಳಿಂದ ಕೂಡಿದ ಸಂಕೀರ್ಣ ಜೀವನದಲ್ಲಿಯೂ , ಒಬ್ಬ ವ್ಯಕ್ತಿ ಎಷ್ಟು ಸಮಾಜ ಮುಖಿಯಾಗಿ ಬದುಕಿದ ? ಅವನ ಹುಟ್ಟು ಮನುಷ್ಯ ಕುಲಕ್ಕೆ ಹೊರೆಯೇ ?ಸಹಕಾರಿಯೇ ? ಅವನು ನುಂಗಿದ ದುಃಖಗಳಿಗಿಂತಾ ಹಂಚಿದ ಸುಖ ಹೆಚ್ಚೇ ? ಕಡಿಮೆಯೇ ? ಅವನ ಒಟ್ಟೂ ಬದುಕೆಂಬುದು ಅನ್ಯರ ವಿಷಯದಲ್ಲಿ ಎಷ್ಟು ಸಹ್ಯವಾಗಿತ್ತು?
ಬದುಕಿನ ಒಂದು ಮೂಲಭೂತ ಅಂಶವಾದ ಕಾಮವನ್ನು ಕಾರಂತರು ಆರಾಧಿಸುವುದೂ ಇಲ್ಲ, ಧಿಕ್ಕರಿಸುವುದೂ ಇಲ್ಲ, ಒಪ್ಪಿಕೊಳ್ಳುತ್ತಾರೆ. ಕಾರಂತರ ನಿಲುವಿನಂತೆ ಬಾಳ್ವೆಯ ಪ್ರಶ್ನೆಯು ಒಬ್ಬರು ಬಾಳಿ, ಇನ್ನೊಬ್ಬರು ಉತ್ತರಿಸಿ, ಮೂರನೆಯವರು ಒಪ್ಪಿ ಸಾಗುವಂತಹ ಪ್ರಶ್ನೆ ಎಂದೂ ಆಗಿರಲಾರದು. ಅನಿವಾರ್‍ಯವಾಗಿರುವ ಬಾಳಿನ ರೀತಿಯನ್ನು ಕಂಡರೆ, ಅದು ಅವರವರು ಬಾಳಿ ಬದುಕಿ, ಅನುಭವಿಸಿ, ಹೋರಾಡಿ, ಪರಿಸ್ಥಿತಿಗಳಿಗೆ ಹೊಂದಿಕೊಂಡು ಪರಿಣಾಮಗೊಳ್ಳಬೇಕಾದ ಸಮಸ್ಯೆ.

ಓದಿದ ದಿನ ಪೂರ್ತಿ ನಾನು ನಾನಾಗಿರಲಿಲ್ಲ....

Wednesday, July 13, 2011

ಬ್ರಿಟೀಷರನ್ನು ಭಾರತದಷ್ಟೇ ಪ್ರೀತಿಸುತ್ತೇನೆ.

ಕಸಬ್ ಹುಟ್ಟುಹಬ್ಬದ ಉಡುಗೊರೆಯನ್ನ ಅವನ ಜೊತೆಗಾರರು ಭರ್ಜರಿಯಾಗೆ ನೀಡಿದ್ದಾರೆ.

ಮನಮೋಹನ್, ಸೋನಿಯಾ, ಚಿದು ನಿಮ್ಮ ಅಲ್ಪಸಂಖ್ಯಾತರ ಏಳಿಗೆಗಾಗಿ ಮುಂದಿನ ಪ್ಯಾಕೇಜ್ ಯಾವಾಗ ಘೋಷಿಸೋರಿದ್ದೀರಾ?

a. ಎಲ್ಲಾ ರಾಜ್ಯಗಳಲ್ಲಿ ಕಟ್ಟೆಚ್ಚರ
b. ಪಾಕ್ ಪ್ರೇರಿತ ಸಂಚು: ಕೃಷ್ಣ
c. ಬಾಂಬ್ ಸ್ಫೋಟಿಸಲು ಸುಧಾರಿತ ತಂತ್ರಜ್ಞಾನ ಬಳಕೆ: ಮುಂಬೈ ಪೋಲಿಸ್
d. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ, ಸಿಮಿ ಭಯೋತ್ಪಾದಕ ಸಂಘಟನೆಗಳೆಂಬುದಕ್ಕೆ ಸಾಕ್ಷಿ ಹುಡುಕಾಟದಲ್ಲಿ ಪೊಲೀಸರು.

ನಿಜಕ್ಕೋ ಭಾರತವೆಂಬುದು ಶತಮಾನದ ಪ್ರಹಸನ.

ಚರ್ಚಿಲ್ಲನ ಮಾತು 100% ಸತ್ಯ. "ಭಾರತೀಯರಿಗೆ ಆಳಲಿಕ್ಕೆ ಗೊತ್ತಿಲ್ಲ, ಅವರು ಆಲಿಸಿಕೊಳ್ಳಲಿಕ್ಕಷ್ಟೆ ಲಾಯಕ್ಕು"
ನೋವಿದೆ.. ಆದರೆ ತೀರ್ಮಾನವೂ ಅದೇ. ಇಂದಿನವರಿಗಿಂತ ಅಂದಿನವರೆ ಎನಗಿಷ್ಟ.