Friday, October 19, 2012

ಮಥುರಾ ನಗರಪತಿ ಗೋಕುಲದ ಉತ್ಕಟತೆ ಏಕೆ?


ಪ್ರೀತಿ ಹಾಗೂ ವಿರಹದ ಉತ್ಕಟೆಗೆ ಮತ್ತೊಂದು ಹೆಸರೇ ಕೃಷ್ಣ ಮತ್ತು ರಾಧೆ. ಯಮುನಾ ತಟದಲ್ಲಿ ವಿಹಾರಿಸುವಾಗಲೂ, ವಿರಹದಿ ವಿರಮಿಸುವಾಗಲೂ ಒಬ್ಬರು ಮತ್ತೊಬ್ಬರ ನೆನಪಲ್ಲಿ ವಿಲೀನ...ತಮ್ಮ ಇರುವಿಕೆಯನ್ನೇ ಮರೆತ  ತನ್ಮಯತೆ. ಹದ ತಪ್ಪಿದ್ದಾದರೂ ಎಲ್ಲಿ? ಜಗತ್ತನ್ನೇ ಗೆಲ್ಲುವ ಛಲವಿದ್ದ ಕೃಷ್ಣನಿಗೆ ತನ್ನ ರಾಧೆಯನ್ನು ದಕ್ಕಿಸಿಕೊಳ್ಳಲಾಗಲಿಲ್ಲ. ಸಮಾಜದ ಕಟ್ಟುಪಾಡುಗಳನ್ನ ಮೀರಿ ಕೃಷ್ಣನನ್ನು ಗಂಡನಂತೆ ಕಂಡ ರಾಧೆಗೆ ಅದೇ ಸಮಾಜದ ಎದುರಿನಲ್ಲೇ ಛಲದಂಕಮಲ್ಲನೊಡನೆ ಬಾಳುವೆ ಮಾಡಲಾಗಲಿಲ್ಲ....

 ಕಟ್ಟುಪಾಡುಗಳ ಸಂತೆ ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯದಾಚೆಗೂ ಸಂಬಂಧಗಳ ಒಪ್ಪಿಗೆ ಸಮಸ್ತರಿಂದಲೂ ಸಿಕ್ಕಿದ್ದೇ ಇದ್ದಲ್ಲಿ ಅದು ರಾಧಾ ಕೃಷ್ಣರಿಗೆ ಮಾತ್ರ.  ಆಸ್ತಿಕರು ದೈವಕೃಪೆ, ದೇವಲೀಲೆ ಹಾಗೆ ಹೀಗೆ ಏನೇನು ಹೇಳಿದರೂ ಇವರ ಪ್ರೀತಿ ಕೊಂಚ ಮರ್ಯಾದೆಯ ಚೌಕಟ್ಟಿನ ಹೊರಗೇ...   ಸೂಜೆ ಮೊನೆಯಷ್ಟು ಭೂಮಿಗಾಗಿ ಅಣ್ಣ -ತಮ್ಮರೇ ಕೊಲ್ಲಾಡುವಂತಹ ಜನಮಾನಸದಿಂದಲೂ ಇವರೀರ್ವರ  ಪ್ರೀತಿಗೆ ಮನ್ನಣೆ. ಆದರಣೆ.

ತನುಮನದಲ್ಲೂ ರಾಮನವಳಾಗಿದ್ದ ಸೀತೆ, ಛದ್ಮವೇಷಧಾರಿಯೊಡನೆ ಗಂಡನೊಡನಾಡುವ ಸಲುಗೆಯಿಂದಲೇ ಮಿಲನಗೈದ ಅಹಲ್ಯೆ, ಮಂಡೋದರಿ, ಜಗವಾಳುವ ಪಂಚವೀರ್ಯವಂತರಿಂದ ಮಕ್ಕಳು ಪಡೆದರೂ ಜೀವನಪೂರ್ತಿ ವೈಧವ್ಯದಲ್ಲೇ ಕಾಲಕಳೆದ ಕುಂತಿಯರಿಗೆ ಕಾಡಿದ ಧರ್ಮದ ಕಟ್ಟಳೆ ರಾಧೆಗೆ ಅಂಕುಶವಾಗಲಿಲ್ಲ.... ರಾಧೆಗೆ ಸಿಕ್ಕ ಈ ಬೌದ್ಧಿಕ ಸ್ವಾತಂತ್ರ್ಯ ಪಂಚ ಪತಿವ್ರತೆಯರಾರಿಗೂ ದೊರಕದಿರುವುದು ನಿಜಕ್ಕೂ ವಿಪರ್ಯಾಸ.  ಈ ಸ್ವಾತಂತ್ರ್ಯದಲ್ಲೇ ಕಾಯುತ್ತಾ ನಿಂತ ರಾಧೆ... ಮೇಘರಾಜನ ವರ್ಷಧಾರೆಗೆ ನಿಲುಕಿಸುತ್ತಿರುವ ಧರಣಿಯಂತೆ.


" ಏರುನದಿಗೆ ಇದಿರಾಗಿ ಈಜಿ ದಡಸೇರಬಹುದೇ ಜೀವ ದಾಟಿ ಈ ಪ್ರವಾಹ"... ಪ್ರೀತಿಯೂ ಅಂತೆ ಕಂತೆ. ಸರ್ವವೂ ಪ್ರೀತಿಯಲ್ಲಿ ಸಹ್ಯ.
       
" ನಿನ್ನನಗಲಿದ ಕ್ಷಣದ ನಿನ್ನವಳ ಕಣ್ಣಂಚಿನ ಹನಿ ಒಣಗಿ ಕಾಲ ಸರಿದಾಗಿದೆ
ನಿನ್ನ ಪ್ರೀತಿ ಈಗ ತುಂಬು ಗೃಹಿಣಿ
ಈಗಲೂ  ಏಕೆ ಗೋಕುಲಕ್ಕೆ ಹೋಗುವ ತವಕ ಓ ಮಥುರಾನಗರಪತಿ"

ಮಲಗಿದ್ದವ ಬೆಚ್ಚಿ ಎದ್ದೆ. ಕಣ್ಣಗಲಿಸಿ ಹುಡುಕಾಡಿದೆ.... ಯಾಕೋ ಕೃಷ್ಣನ ಭಾರದ ಹೆಜ್ಜೆಗಳು ಸನಿಹದಲ್ಲೇ ಓಡಿದಂತಾಯಿತು.

ಹೆಚ್ ಎಸ್ ವಿಯವರ ಪ್ರೀತಿಯುಟ್ಕತೆಯ "ತೂಗುಮಂಚದಲ್ಲಿ ಕೂತು",ರೈನ್ ಕೋಟ್ ಚಿತ್ರದ " ಮಥುರಾ ನಗರಪತಿ" ಹಾಡುಗಳು ನನ್ನನ್ನು ಸಮಯದ ದಿವಾಳಿತನದಂಚಿಗೆ ನಿಲ್ಲಿಸಿವೆ. ಅದಕ್ಕೆ ಖುಷಿಯಿದೆ.....ಅಂತಹ ಪ್ರೀತಿಯ ಪಾಲು ನನಗಿಲ್ಲ; ಅಷ್ಟೇ ದುಖ್ಖವೂ ಇದೆ.

ನಿಮ್ಮ
ಅವಿ

Saturday, October 6, 2012

ಕಾವೇರಿ.. T20, ಕೂಲಿಂಗ್ ಗ್ಲಾಸ್ ಹಾಗೂ 90

ನಮ್ಮ ಜನಗಳ ಕಳಕಳಿ ಒಪ್ಪುವಂತಹುದೇ... ರಾಲಿ ಕೂಗಿ, ಕೂಲಿಂಗ್ ಗ್ಲಾಸ್ ಕಣ್ಣಲ್ಲಿ ಕಿಡಿಕಾರಿ, ಧಿಕ್ಕಾರ ಕೂಗಿ, 2 ಹೊತ್ತು ಉಪವಾಸ ಕೂತು ಸಂಜೆ ಮನೆಗೆ ಹಿಂತುರಿಗಿ ಟಿ20 ಮ್ಯಾಚ್ ನೋಡುವ ಪ್ರತಿಭಟನೆಗಳು ಯಾರ ಮೇಲೆ ಒತ್ತಡ ತರುತ್ತವೆ ನಿಜಕ್ಕೂ ತಿಳಿಯುತ್ತಿಲ್ಲ....

ದಿನದಿಂದ ದಿನಕ್ಕೆ ಪ್ರತಿಭಟನೆ ತೀವ್ರಗೊಳ್ಳುತ್ತಲೇ ಇದೆ... ರಸ್ತೆ ಬದಿಗಳಲ್ಲಿ, ಪ್ರಮುಖ ಸರ್ಕಲ್ ಗಳಲ್ಲಿ...

ಜನಸಾಮಾನ್ಯ ಓಡಾಡುವ ಸಾರ್ವಜನಿಕ ವಾಹನಗಳ ಹೆದ್ದಾರಿಗಳನ್ನು ಬಂಧ್ ಮಾಡಿ, ಪರೀಕ್ಷೆ ಸಮಯದಲ್ಲಿ ಶಾಲಾ ಕಾಲೇಜುಗಳ ವೇಳಾಪಟ್ಟಿ ಹಿಂದೂ-ಮುಂದುಮಾಡಿ ಸರ್ಕಾರಕ್ಕೆ ಒತ್ತಡ ತರುತ್ತೇವೆ ಅನ್ನುವ ಭ್ರಮೆ ಅರಿಯದ ದಾರಿ ತಿಳಿಯದ ಅನ್ನದಾತನಿಗಿರಬಹುದು..... ತಿಳಿದ ಬುದ್ದಿಜೀವಿಗಳಿಗೆಕಿಲ್ಲ?

ಕೆ‌ ಆರ್ ಎಸ್ ನಿಂದ ನಿನ್ನೆ ರಾತ್ರೋ  ರಾತ್ರಿ ಮತ್ತೆ 4 ಹೊಸ ಕ್ರಿಸ್ಟ್ ಗೇಟ್ ಓಪೆನ್ ಮಾಡಿದ್ದಾರೆ... ನೀರು ಧಾರಾಕಾರ ಹರಿದು ಹೋಗುತ್ತಿದೆ....ತಡೆಯಬೇಕಾದ ನಮ್ಮ ಜನ ಆಳುವವರ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಸರ್ಕಲ್ ,ಹಾದಿ ಬೀದಿಗಳಲ್ಲಿ ಬ್ಯುಸಿಯೋ ಬ್ಯುಸಿ.

ಏಕೆ ಹೀಗೆ? ನಿಜಕ್ಕೂ ಅಷ್ಟು ಕಳಕಳಿ ಇರುವವರು ವಿಧಾನ ಸೌಧದ ಮುಂದೇಕೆ ಧರಣಿ ಕೂರೊಲ್ಲ? ಮುಖ್ಯಮಂತ್ರಿಗಳ/ಆಳುವ ಬಾಬುಗಳ ಮನೆಗೇಕೆ ಘೇರಾವು ಹಾಕುವುದಿಲ್ಲ? ಪ್ರಾಣ ಕೊಟ್ಟೆವು .. ಹನಿ ನೀರು ಬಿಡೆವು ಎಂದು ಗಂಟಲು ಹರಿಯುವಂತೆ ಕಾಣದ ಟೌನ್ ಹಾಲ್, ಪ್ಯಾಲೇಸ್ ಗ್ರೌಂಡ್ , ಬಸವನಗುಡಿ ಮೈದಾನದಲ್ಲಿ ಕಿರುಚುವ ಬದಲು ಆಳುವವರ ಕಿವಿ ಸನಿಹದಲ್ಲೇಕೆ ನಿಮ್ಮ ದನಿಮೂಡಿಸುವುದಿಲ್ಲ?  ಹಳ್ಳಿಯಲ್ಲಿ ಪಂಚಾಯ್ತಿ ಹಂತದಲ್ಲಿ, ತಾಲೂಕಿನಲ್ಲಿ ತಹಸೀಲ್ದಾರರ ಹಂತದಲ್ಲಿ, ಜಿಲ್ಲಾವಾರಿನಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲೇಕೆ, ಅವರ ಮನೆ, ಆಫೀಸುಗಳ ಮುಂದೇಕೆ ಸರದಿ ಪ್ರಕಾರ 24/7 ಧರಣಿಗಳು ಮೂಡುವುದಿಲ್ಲ?

ಪ್ರತಿಭಟನೆಯ ದನಿಗೆ ಅಡ್ಡ ನಿಲ್ಲುವ ಪೊಲೀಸರೂ ಕೂಡ ಅದೇ ಕಾವೇರಿಯ ಮಕ್ಕಳೇ.... ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಕಾರ್ಯವೈಖರಿಯನ್ನು ವಿಮರ್ಶೆ ಮಾಡಲು ಒಂದು ಕರೆ ಕೊಟ್ಟ ಒಬ್ಬ ಜನ ಪ್ರತಿನಿಧಿಯನ್ನೂ ಕಾಣೆ!!... ಅಮರಣ ಉಪವಾಸ ಮಾಡುವ so called ಜಲಾಭಿಮಾನಿಗಳು ವಿಧಾನ ಸೌಧದ ಮುಂದೆ ಮಾಡಿ.... ಉಚ್ಚಿ ಮಾಡಿದ್ದಕ್ಕೆ, ಹೊಡೆದಿದ್ದಕ್ಕೆ, ಬೈದಿದ್ದಕ್ಕೆ ಅಳುತ್ತಾ ಹೈಕಮಾಂಡ್ ಎದುರು ಕಿರುಲಾಡುವ ರಾಜ್ಯ ಕಾಂಗ್ರೆಸ್ಸ್ ನಾಯಕರು ಅವರದೇ ಹೈಕಮಾಂಡ್ ಮಾಡಿರುವ ಈ ಇಬ್ಬಂದಿತನಕ್ಕೆ ತಿರುಗಿ ಗಂಟುಬೀಳುವಂತೆ ಅವರ ದೈನಂದಿನ ಜೀವನವನ್ನು ಹಾಳವುಗೆಡವಿ!! ಆಳುವ ಚುವಾಯಿತ ಪ್ರತಿನಿಧಿಗಳ ದೈನಂದಿನ ಜೀವನ ನರಕ ಮಾಡಿ...

ಅದು ಒಪ್ಪುವ ಮಾತು... ಜನ ಸಾಮಾನ್ಯನದಲ್ಲ

ಕಾನೂನು ಸಮರದಲ್ಲಿ ಪ್ರತೀ ಬಾರಿಯೂ ಕನ್ನಡಿಗರ ಹದ ತಪ್ಪುತ್ತಿದೆ ಎಂದಾದಲ್ಲಿ ಒಂದೋ ನಮ್ಮ ಬೇಡಿಕೆಯಲ್ಲೇ ತಪ್ಪಿದೆ.. ಇಲ್ಲವಾದಲ್ಲಿ ನಮ್ಮ ವಿಚಾರಮಂಡನೆ ಸರಿಯಿಲ್ಲ ಎಂದರ್ಥ... ಮೊದಲನೆಯದು "ಖಡಾಖಂಡಿತ ಆಗದ ಮಾತು" ಅನ್ನುವುದೇ ನಮ್ಮ-ನಿಮ್ಮಲ್ಲರ ಒಕ್ಕೊರಳಿನ ಮಾತು. ಅಂತಾದಲ್ಲಿ ನಮ್ಮ ವಾದದಲ್ಲಿ ಹುರುಳಿಲ್ಲ. ದಶಕಗಳಿಂದಲೂ ನ್ಯಾಯಾಲಯಕ್ಕೆ ನಮ್ಮ ಬೇಡಿಕೆ ಮನವರಿಕೆ ಮಾಡಲು ನಾವು ಸೋಲುತ್ತಿದ್ದೇವೆ ಎಂದಾದಲ್ಲಿ ಸೈದ್ದಾಂತಿಕ ನಿಲುವಿನ ಪ್ರತಿಪಾದನೆಗಾಗಿ ಅರ್ಹ ವಕೀಲರನ್ನ ನೇಮಿಸುವ, ನಮ್ಮ ವಾದ ಪುಷ್ಟೀಕರಿಸಲು ಬೇಕಾದ ಹತ್ತು ಹಲವು ಸಾಕ್ಷ್ಯ-ಸಂದರ್ಭಗಳನ್ನ ಒದಗಿಸುವ ಗುರುತರ ಜವಾಬ್ದಾರಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಬದಲು ನವೆಂಬರ್ ಕನ್ನಡಾಭಿಮಾನದಂತೆ, ಚಳಿಗಾಲದ ಕಾವೇರಿ ಚಳುವಳಿ ಪ್ರತೀ ವರ್ಷ ಪುನರಪಿ ಜನನಂ: ಪುನರಪಿ ಮರಣಂ  ತರಹ ಜೀವಂತವಿಡುವಲ್ಲಿ  ಏಕೆ ಇಷ್ಟು ಕಾತರರಾಗಿದ್ದೇವೆ?

ಕೇಂದ್ರ ಸರ್ಕಾರ 1 ಕಲ್ಲಿಗೆ ಎರಡು ಹಕ್ಕಿ ಹೊಡೆದಿದೆ.  ತಮಿಳುನಾಡಿಗೆ ಬಂಪರ್, ಕರ್ನಾಟಕ ಬಿ ಜೆ ಪಿಗೆ ಷಾಕ್. ನಾವು ಬಿ ಜೆ ಪಿ ದೂರುತ್ತಿದ್ದೇವೆ... ಅವರು ಕುರ್ಚಿ ರೇಸಿನಲ್ಲಿ ಬ್ಯುಸಿ....  ಇನ್ನೂ ಕಾಂಗ್ರೆಸ್, ದಳಕ್ಕೆ  ಸಿಕ್ಕಿದ್ದೇ  ಛಾನ್ಸ್ ಎಂದು ನಮ್ಮ ಬೀದಿ ಬವಣೆಗೆ ಐಷಾರಾಮಿ ಕಾರಿನಲ್ಲಿ ಬಂದು ಸಾಥ್/ಪೊಸು ಕೊಡುತ್ತಿದ್ದಾರೆ.

ಉರಿಯುತ್ತಿರುವ ಮನೆಯಲ್ಲಿ ಸಿಗರೇಟು ಹಚ್ಚಿಕೊಳ್ಳುವ ಮನೋಭಾವದವರು ನಮ್ಮ ಹೀನಲಾಡಿ ರಾಜಕಾರಣಿಗಳು. ಹರಿಯುವ ನೀರು ಹರಿದಷ್ಟೂ ಹೋಗಲಿ... ಜನ ಕಚ ಪೀಚ ಕಿರುಲಾಡಿ ಒಂದು ಹಂತಕ್ಕೆ ಬರುವಷ್ಟರಲ್ಲಿ ನೀರು ಹೋಗಿರುತ್ತದೆ... ಆಗ, "ನೋಡ್ರಪ್ಪ ನೀವು ಹೇಳಿದಂತೆ ನೀರನ್ನು ಬಿಡುತ್ತಿಲ್ಲ.. ಸಮಾಧಾನ ತಾನೇ?" ಅನ್ನುವ ಧಾಟಿಯಲ್ಲಿ ಆಳುವ ವರ್ಗ ವ್ಯಂಗ್ಯನಗೆ ಬೀರುತ್ತದೆ... ಖುಷಿಯಲ್ಲಿ ಟಿ20, 90 ಹೊಡೆದು ಮಲಗಿ ಮುಂದಿನ ಕಾವೇರಿ ಗಲಭೆಯಲ್ಲಿ ಎಚ್ಚೆತ್ತು ಮತ್ತೆ ಹೀಗೇ ಆಲಾಪನೆ ಶುರುಮಾಡುವ ಬದಲು ಇಂದೇ ಎಚ್ಕೆಟ್ಟುಕೊಳ್ಳೋಣ....ನಿಮಗೆ ಅಷ್ಟು ಕಿಚ್ಚೇ ಇದ್ದಲ್ಲಿ Paralyze the Administrative system ....!!  ಕಬ್ಬಿಣ ಕಾಯುವ ಮೊದಲೇ ತಟ್ಟುವ ಹುಚ್ಚು ಸಾಹಸದಲ್ಲಿ ನಮ್ಮ ಕೈಯೇ ನೋಯುವುದು..ಇನ್ನಾದರೂ ಪ್ರತಿಭಟನೆಯ ಸ್ಥಳ, ಕಾರ್ಯವೈಖರಿ ವೈಜ್ಞಾನಿಕತೆಯಿಂದ ಕೂಡಿರಲಿ.... ಅಷ್ಟರಲ್ಲಿ ನಮ್ಮ ಕಾವೇರಿಯ ನೀರು ನಿಮ್ಮಿಂದ ಬಿಟ್ಟು ಹೋಗದಿರುತ್ತದೆ ಎಂಬ ಭರವಸೆಯಲ್ಲಿ

Tuesday, October 2, 2012

"ಕಣ್ಮರೆಯಾದ ಭಾರತದ ಭವಿಷ್ಯ"

"ಜೈ ಜವಾನ್ ಜೈ ಕಿಸಾನ್" ಘೋಷಣೆಯೊಂದಿಗೆ ವಿಶ್ವದ ರಾಜಕೀಯಕ್ಕೆ ಮಾದರಿಯಾಗಿದ್ದ "ಶಾಸ್ತ್ರೀಜಿಯವರ ಜನುಮದಿನ ಇಂದು. ಗಾಂಧಿ-ನೆಹರು ಅಲೆಯ ಈ ಘಳಿಗೆಯಲ್ಲಿ ಮರೆತುಹೋದ ಅಪ್ಪಟ ಗಾಂಧೀವಾದಿಯ ಜಯಂತಿ.

"We miss you Shastriji"

Wednesday, September 19, 2012

ಓದಲೇ ಬೇಕಾದ ಇಂದಿನ ಪುಸ್ತಕಗಳು"

"ವಿಜಯನಗರ ಹಾದಿ ಬೀದಿಯಲ್ಲಿ ಮಾರುತ್ತಿದ್ದ ಮುತ್ತು ರತ್ನ ನಂತರದಲ್ಲಿ ಎಲ್ಲಿಗೆ ಹೊದ್ವು?
  "ಸಿದ್ದಾರ್ಥ ನಡುರಾತ್ರಿ  ಕದ್ದೋಡಿ ಬುದ್ದನಾದಾಗ ಯಶೋಧರೆ ಮಗನೊಡನೆ ಹೆಣಗಿದ ಮನಸ್ಥಿತಿ ಹೇಗಿತ್ತು?"
     "ಅಜಂತಾ ಗುಹೆಗಳಲ್ಲೇ ಕಲ್ಲಿನಲ್ಲೇಕೆ ಕಲೆಯರಳಿಸುವ ಹುಚ್ಚು ಪ್ರಯತ್ನಕ್ಕೆ ಬೋಡು ತಲೆಯ ಬೌದ್ದರು ಪ್ರಯತ್ನಪಟ್ಟರು?"
      "ಮಾಲಂಗಿ ಮಡುವಾಗಲಿ ಎಂದು ಶಾಪಕೊಟ್ಟು ಇದ್ದ ಮಡುವಿಗೇ ಬಿದ್ದ ಅಲಮೇಲಮ್ಮನ ಶಾಪಕ್ಕೆ  ಸಿಕ್ಕ ಸಾರ್ಥಕತೆ ಏನು?
       "ಪಟ್ಟದ ರಾಣಿ ಶಾಂತಲೆ ಬೇಲೂರು ಶಿಲ್ಪಕಲೆಗಾಗಿ ಶಿಲ್ಪಿಗಳ ಎದುರಿನಲ್ಲೇ ಆ ಪರಿ ಸೊಬಗಿನಲ್ಲಿ ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆ ಏನಿತ್ತು?"
"ಸಾರನಾಥದ ಅಶೋಕ ಸ್ಥಂಬದಲ್ಲಿ ಸಿಂಹಗಳಂತೂ ಇದ್ದವು.. ಆದರೆ ಒಂದು ಹೆಣ್ಣಿನ ಆಕ್ರೋಶಕ್ಕೆ ಬಲಿಯಾದವು". 


ಬಹಳ ವರ್ಷಗಳಿಂದ ನನ್ನೊಳಗೇ ತೊಳಲಾಡುತ್ತಿದ್ದ ಹಲವು ಪ್ರಶ್ನೆಗಳಿಗೆ ಇಂದು ಉತ್ತರ ಸಿಕ್ಕಿದೆ. "ಇದ ಮಿತ್ತಂ"   ಅನ್ನುವಂತಿಲ್ಲದಿದ್ದರೂ ಮನಸ್ಸಿನ ಬಿರುಗಾಳಿ ಶಾಂತವಾಗುವಷ್ಟು.  ನಿಮಗೂ ಹಲವುಬಾರಿ ಮನಸ್ಸಿನಲ್ಲಿ ಈ ಪ್ರಶ್ನೆ ಖಂಡಿತಾ ಮೂಡಿರುತ್ತದೆ. ಉತ್ತರ ಬೇಕಾದಲ್ಲಿ ಓದಿ ಕನ್ನಡದ "ಡಾವಿಂಚಿ ಕೋಡ್ "  ಎಂದೇ ಪ್ರಖ್ಯಾತವಿರುವ  ಕೆ.ಎನ್.ಗಣೇಶಯ್ಯನವರ 

       


"ಭಾವನೆಗಳ ಎರಕ ನಮ್ಮ ಗಣಪ"

ಆಸ್ತಿಕರ ಅನನ್ಯ ಆಸ್ತಿ, ನಾಸ್ತಿಕರ ನಿರಾಕರಣದ ಮುಕುಟ "ಗಣು ಮಾಮನ" ಹಬ್ಬ ಮತ್ತೊಮ್ಮೆ ಜನಮಾನಸದ ಮನದಂಗಳದಲ್ಲಿ. "Blasphemy"ಹೆಸರಿನಲ್ಲಿ ಜಗತ್ತೆಲ್ಲಾ ಹೊತ್ತಿ ಉರಿಯುತ್ತಿರುವ ವೇಳೆಯಲ್ಲಿ ಭಾವನೆಗಳ ಎರಕದಲ್ಲಿ ಮಿಂದೆದ್ದ ಗಣಪ. 

  

ಮತ್ತೆಂದೂ ಮಹಾಭಾರತದ Sequels ಆಗಲಿ Prequels  ಆಗಲಿ ಬರೆಯನೆಂದು ವೇದವ್ಯಾಸರಿಗೆ ಸೆಡ್ಡು ಹೊಡೆದು ಕೆರಳಿದ ಸಿಂಹದಂತಿರುವ ಮಕ್ಕಳ ಗಣು ಮಾಮ, ಯುವಕರ "ಗಣೇಶ ಬಪ್ಪ ಮೊರಯಾ", ಹಿರಿಯರ ಗಣೇಶಪ್ಪ ಇಂದಿನಿಂದ ದಿನಗಳ ಲೆಕ್ಕದಲ್ಲಿ ನಮ್ಮೊಡನೆ ನಮ್ಮವನಾಗಿ ನಮ್ಮ ಅನುಕೂಲಕ್ಕೆ ತಕ್ಕಂತೆ ತೃಪ್ತನಾಗಿ ಹರಸುವ ಸುವರ್ಣಕಾಲ.
ದೇವರ ಹೆಸರಿನಲ್ಲಿ ಹೃದಯದ ಬಾಗಿಲಿಗೆ ಬೀಗಗಳನ್ನು ಬಡಿದು ಪರಸ್ಪರ ಯುದ್ದ ಸಾರಿರುವ ಮನುಕುಲಕ್ಕೆ ಗಣು ಮಾಮ ಸೌಹಾರ್ದತೆಯ ನೈತಿಕ ಪಾಠ ಹೇಳುವ ಸಮಯ ಬಂದಿದೆ. ಕೇಳುವ ತಾಳ್ಮೆ ನಮ್ಮಲ್ಲಿರಬೇಕಷ್ಟೇ!!

Wednesday, August 15, 2012

ಹುಟ್ಟಿ ಸಾಯುವ ಸ್ವಾತಂತ್ರ್ಯೋತ್ಸವ....


ಕೇಳುವ ಎಲ್ಲರ ಪ್ರಶ್ನೆ ಹುಟ್ಟೋದ್ಯಾಕೆ ಸಾಯೋದ್ಯಾಕೆ? ನಿನ್ನೆಗಳ ಸಾವಿನಲ್ಲಿ ತಿಳುವಳಿಕೆಯ ಹುಟ್ಟಿದೆ... ಹುಟ್ಟದ ಇಂದುಗಳಲ್ಲಿ ಆ ತಿಳುವಳಿಕೆಯ ತಳಹದಿಯಿದೆ. ವಿಪರ್ಯಾಸವೆಂದರೆ ಅರಿಯುವ ಮನಸ್ಸುಗಳಿಲ್ಲ..

ಇಂದು ಗಾಂಧಿ[?] ಬಳುವಳಿಯ ಭಾರತದ ಸ್ವಾತಂತ್ರ್ಯೋತ್ಸವ. ಎಲ್ಲರನ್ನು ನೇಪಥ್ಯಕ್ಕೆ ಸರಿಸಿ ಗಾಂಧಿಯದೇ ಎಂದು ಬಿಂಬಿಸುವಲ್ಲಿ ಸಿದ್ದಿ ಪಡೆದ ಗಾಂಧಿ ಪರಿವಾರದ ಈ ಮೀಸಲು ಭಾರತದಲ್ಲಿ  ಕೆಲವರಿಂದ ಕೆಲವರಿಗಾಗಿ ಕೆಲವರಿಗಷ್ಟೇ ಮೀಸಲಾದ ಪ್ರಜಾಪ್ರಭುತ್ವ."


ಸತ್ತ ಭೂತವನೆತ್ತಿ ಹಸಿರಂದದಿ ತಂದು ನನ್ನ ಮನದಂಗಳಕೆ ಹಾಕದಿರು ನೆನಪೇ"...  ಒಪ್ಪುವ ಮಾತೇ.... 66ನೇ ಸ್ವಾತಂತ್ರ್ಯೋತ್ಸವ ದಿನದಂದಾದರೂ ಇತಿಹಾಸದೆಡೆಗೆ ಕಣ್ ಕಾಪು ಕಿತ್ತಸೆದು ಅವಲೋಕಿಸುವ ಸಂದರ್ಭ ಜೀವನದಲ್ಲಿ ಒಮ್ಮೆಯಾದರೂ ಬರಬೇಕೆಂದು ನನ್ನ ಅನಿಸಿಕೆ.

ಬಿಡುವಿನಲ್ಲಿ ಸ್ನೇಹಿತನ ಬ್ಲಾಗಿನಿಂದ ಹೆಕ್ಕಿದ ಕೆಲವು ಮಾಹಿತಿಗಳನ್ನ ಹಂಚಿಕೊಂಡಿದ್ದೇನೆ.ಒಮ್ಮೆ ಕಣ್ಣಾಡಿಸಿ. ಹುಟ್ಟುಹಬ್ಬವನ್ನು ಆಚರಿಸುವ ಈ ಕ್ಷಣದಲ್ಲಿ ಹುಟ್ಟಿನ ಅರಿವಿರಬೇಕಾದುದ್ದೂ ಅವಶ್ಯಕ.

ಗ್ರಹಣ ಕವಿಯದ ಸತ್ಯ ಇನ್ನಾದರೂ ಭಾರತೀಯರನ್ನು ಆವರಿಸಲಿ ಎಂಬ ಹಾರೈಕೆಯಲ್ಲಿ ಎಲ್ಲರಿಗೂ ನಮ್ಮ ಭಾರತದ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

ನಿಮ್ಮ
ಅವಿ

Monday, April 2, 2012

ಗೌತಮನಂತಹ ಗೌತಮಿ...!!


ಈಕೆ ನಮ್ಮ-ನಿಮ್ಮೆಲ್ಲರ ಗೌತಮಿ. ಸಾವಿಲ್ಲದ ಮನೆ ಸಾಸಿವೆಯಲ್ಲ, ಗುಟುಕು ಜೀವ ಹಿಡಿದು ಬದುಕಿರುವ ಬರ್ಮಾ ಎಂಬ ನತದೃಷ್ಟ ದೇಶಕ್ಕೆ ಸಂಜೀವಿನಿಯಾಗಲು ಕರ್ಪೂರದಂತೆ ಕರಗುತ್ತಿರುವ ಗೌತಮಿ. ಸಾಯುತ್ತಿರುವ ಪ್ರಜಾಪ್ರಭುತ್ವದ ಉಳಿವಿಗಾಗಿ ಊಳಿದಡೆ
           "ಗೆದ್ದೇ ಗೆಲ್ಲುವೆ ಎಲ್ಲಾ ಹೂನಗೆಯಲ್ಲೇ,
               ಲೋಕವೇ ಅಡಗುವುದಿಲ್ಲವೇ ಇಬ್ಬನಿಯಲ್ಲೇ,
                        ಉದುರಿ ಹೋದರೂ ತರಗೆಲೆ
                                   ನಾಳೆ ಬರದೇ ಚಿಗುರೆಲೆ..." 
ಎಂಬ ಆಶಾವಾದದಲ್ಲೇ ಬದುಕಿದ್ದ ತನ್ನವರೆಲ್ಲಾ ಸಾವಿನ ಕದ ಬಡಿದರೂ, ಮೂಡಿದ ಕಂಬನಿ ಆರದ ಅನುಘಳಿಗೆಯೂ ತನ್ನ ಸಿದ್ದಾಂತದ ಉಳಿವಿಗಾಗಿ ಕಮ್ಯುನಿಸ್ಟ್ ಯಮನ ಬೆನ್ನು ಹತ್ತಿದ ಸಾವಿತ್ರಿ.

"ಒಂದು ಮನೆ, ಹೆಸರಿಗೆ. ಕರೆಂಟ್ ಇದೆ, ಟಿ ವಿ ಇಲ್ಲ, ರೇಡಿಯೊ ಇಲ್ಲ, ಮೊಬೈಲ್ &ಇಂಟರ್ನೆಟ್ ಇಲ್ಲವೇ ಇಲ್ಲ. ಪುಸ್ತಕ ಇದೆ, ಅಭಿರುಚಿಗೂ ನಿಲುಕದ ಸಿದ್ದಾಂತಕ್ಕೆ ಕಟ್ಟು ಬಿದ್ದಂತಹವು, ಬಾಗಿಲಿನಿಂದ ಒಳಗಿನ/ಹೊರಗಿನ ಕಾಲುಗಳು ಅಡ್ಡಾಡುವಂತಿಲ್ಲ. ಆಲೋಚನೆಗಳು ದಂಡಿಯಿವೆ, ಹಂಚಲು ಜೊತೆಗಾರರೆಂದು ಕರೆಯಬಹುದಾದ ಒಂದು ನರ ಪಿಳ್ಳೆಯೂ ಇಲ್ಲ. ಕೆಲಸದಾಳುಗಳು ಇದ್ದಾರೆ, ಮಾಡುವ ಕೆಲಸ ನಿಮ್ಮದಾದರೂ ನಿಷ್ಠೆ ಅವರ ಧಣಿಗೆ"
ಹೇಳಿ, ಇಂತಹ ವಾತಾವರಣದಲ್ಲಿ ನೀವು ಎಷ್ಟು ದಿನ [ಕ್ಷಮಿಸಿ, ಘಂಟೆ] ಇರಬಲ್ಲಿರಿ? ಅಬ್ಬಬ್ಬಾ ಅಂದರೆ 5 ಘಂಟೆ? ಇದ್ಯಾವುದೋ ಬಿಗ್ ಬಾಸ್ ಅಥವಾ ಬಿಗ್ ಸ್ಲೇವ್ ಸೆಟ್ ಅಲ್ಲ, ಸೂಕಿ ಕಳೆದ 15 ವರುಷದಿಂದ ಬದುಕಿದ ಕ್ಷಣಗಳು ಹಾಗಿದ್ದವು.
5 ದಿನದ ಕಾಟಾಚಾರದ ಕೆಲಸದ ನೆಪಮಾಡಿ ವಾರಾಂತ್ಯದ ಹೆಸರಿನಲ್ಲಿ ಮೋಜು ಮಾಡುವ ಸಂಸ್ಕೃತಿಗೆ ಬಿದ್ದಿರುವ ನಮಗೆ 15 ವರುಷಗಳ ಕಾಲ ಟಿ ವಿ, ಇಂಟರ್ನೆಟ್ ಇಲ್ಲದೆ ಕೇವಲ ಪುಸ್ತಕ, ಸಿದ್ದಾಂತಗಳ ನಡುವೆ ಮನೆಯೆಂಬ ಸೆರೆಮನೆಯಲ್ಲಿ ಜಗತ್ತಿಗೆ ತಿಳಿಯದಂತೆ ಕಳೆದುಹೋಗುವ ಸೂಕಿಯ ಕಿಚ್ಕಿದೆಯಲ್ಲಾ ಅದನ್ನು ಊಹಿಸಲಸಾಧ್ಯ.

ಅಪ್ಪ ಬರ್ಮಾದ ಪಿತಾಮಹ, ಅಮ್ಮ ರಾಜಕೀಯ ಮುತ್ಸದ್ದಿ. ಕೂಡಿ-ಬೆಳೆಯಲು ಅಣ್ಣಂದಿರು. ಎಲ್ಲ "perfect family frame" ತರಹವೇ ಇತ್ತು. ದೇಶಕ್ಕೆ ಸ್ವತಂತ್ರ ಸಿಕ್ಕ ಖುಷಿಯಲ್ಲೇ ತನ್ನವರಿಂದಲೇ ಹತ್ಯೆಗೀಡಾದ ಅಪ್ಪ, ನಂತರ ರಾಜಕೀಯವಾಗಿ ಸಕ್ರಿಯವಾದ ಅಮ್ಮನೊಡನೆ ಭಾರತಕ್ಕೆ ಬಂದು ಇಲ್ಲೇ ವಿದ್ಯಾಭ್ಯಾಸ ಪೂರೈಸಿ, ಟಿಬೆಟ್ ಕುರಿತಂತೆ ಸಕ್ರಿಯ ಸಿದ್ದಾಂತವಾದಿಯಾಗಿದ್ದ ಮೈಕಲ್ ನೊಡನೆ ಪ್ರೇಮ-ವಿವಾಹ, ನ್ಯೂಯಾರ್ಕ್ ನಗರದಲ್ಲಿ ವಿಶ್ವ ಸಂಸ್ಥೆ ಕಚೇರಿಯಲ್ಲಿ ಕೆಲಸ, ಮುದ್ದಾದ 2 ಮಕ್ಕಳು... ಇನ್ನೇನು ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚಲು?

ಅಷ್ಟರಲ್ಲೇ ಕಮ್ಮುನಿಸ್ಟ್ ಕಿಚ್ಚು ದೇಶದೆಲ್ಲಡೆ ಹರಡಲಾರಂಭಿಸಿತ್ತು. ಮಿಲಿಟರಿ ಆಡಳಿತದ ಛಾಯೆ ರಂಗೂನ್ ಆಗಸದಲ್ಲಿ ಕವಿದಿತ್ತು. ಅಂತಹ ಅನಿಶ್ಚಿತ 88ರ ಒಂದು ಮುಂಜಾನೆ ಮರಣಶಯ್ಯೆಯಲ್ಲಿದ್ದ ತಾಯಿಯ ನೋಡಲು ಬರ್ಮಾಗೆ ಬಂದಿಳಿದ ಸೂಕಿಗೆ ಗೊತ್ತೇ ಆಗದ ವಿಷಯವೆಂದರೆ ಆಕೆ ಮತ್ತೆಂದೂ ಆ ನೆಲ ಬಿಟ್ಟು ಕಡಲುವಂತಿಲ್ಲ.... ಅದೂ 2 ದಶಕಗಳ ಕಾಲ.

ಅಮ್ಮನ ಆರೋಗ್ಯದ ಜೊತೆದೇಶದ ಪ್ರಜಾಪ್ರಭುತ್ವಕ್ಕೂಕಮ್ಮುನಿಸ್ಟ್ ಸೋಂಕು ಹರಡುವುದನ್ನು ಮನಗಂಡ ಸೂಕಿ 90ರ ಸಾರ್ವತ್ರಿಕ ಚುನಾವಣೆಯಲ್ಲಿ ಪಾಲ್ಗೊಂಡು ಬಹುಮತವನ್ನೂ ಪಡೆದರು. ದೇಶದ ಚುಕ್ಕಾಣಿ ಬಿಟ್ಟು ಕೊಡಲು ಭಂಡ ಜಿಂಟಾಹು ಸಿದ್ದನಿರಲಿಲ್ಲ. ದೇಶದ ಆಂತರಿಕ ಕ್ಷೋಬೆಯ ಹೆಸರಿನಲ್ಲಿ ಸೂಕಿಗೆ ಮನೆ ದಿಗ್ಬಂಧನ ವಿಧಿಸಲಾಯಿತು.  ನ್ಯೂಯಾರ್ಕ್ ನಗರದಲ್ಲಿದ್ದ ಸೂಕಿಯ ಪತಿ ಕಳವಳಗೊಂಡು ಬರ್ಮಾಗೆ ಬರಲು ವೀಸಾ ಕೇಳಿದರೆ ಕಮ್ಯುನಿಸ್ಟ್ ಸರಕಾರ ಸಮ್ಮತಿಸಲಿಲ್ಲ... ಬೇಕಿದ್ದಲ್ಲಿ ಸೂಕಿಯೇ  ನ್ಯೂಯಾರ್ಕ್ ನಗರಕ್ಕೆ ಹೋಗಲಿ ಎಂದಿತು. ಸೂಕಿ ಒಪ್ಪಲಿಲ್ಲ... ಆಕೆಗೆ ಭಂಡ ಕಮ್ಮ್ಯೂನಿಸ್ಟ್ ಸರಕಾರದ ಹುನ್ನಾರ ತಿಳಿದು ಹೋಗಿತ್ತು. ಒಮ್ಮೆ ದೇಶದಿಂದ ಹೊರಗೆ ಕಾಲಿಟ್ಟಲಿ ಮತ್ತೆ ಮರಳಲು ಅನುಮತಿ ದೊರೆಯದೆಂದು. ನಂತರದಲ್ಲಿ ಮೈಕಲ್ ಕ್ಯಾನ್ಸರ್ ಪೀಡಿತನಾಗಿ ಮರಣ ಶಯ್ಯೆಯಲ್ಲಿದ್ದಾಗಲೂ ಸೂಕಿ ಅವನನ್ನು ನೋಡಲು ದೇಶ ಬಿಟ್ಟು ಹೊರಡಲಿಲ್ಲ... ದೇಶದ ಭವಿಷ್ಯದ ಮುಂದೆ ಆಕೆಯ ಸ್ವಂತ ಸುಖ-ದುಖ ಮರೆತುಹೋಗಿತ್ತು. ಹೆಂಡತಿಯನ್ನು ನೋಡದೇ 99ರಲ್ಲಿ ಕ್ಯಾನ್ಸರ್ ಪೀಡಿತನಾಗಿ ಮರಣಹೊಂದಿದಾಗ ಸೂಕಿ ಒಳಗೊಳಗೆ ಮುರಿದುಹೋಗಿದ್ದಳು. 89ರಿಂದ-99ರ ಅವಧಿಯಲ್ಲಿ ಕೇವಲ 5 ಬಾರಿಯಷ್ಟೆ ಭೆಟ್ಟಿ ಮಾಡಿದ್ದ ಮೈಕಲ್ ಮರಣದೊಂದಿಗೆ ಸೂಕಿ ಮಕ್ಕಳೂ ಕೂಡ ಲಂಡನ್ ನಗರದಲ್ಲಿ ಆಶ್ರಿತರಾಗಿ ಬೆಳೆಯಬೇಕಾಯಿತು.  ಕೈ ಹಿಡಿತ ಪತಿ ಅನಾಥನಂತೆ ಸತ್ತಾಗಲೂ, ಸ್ವಂತ ಮಕ್ಕಳು ಪರದೇಶದಲ್ಲಿ ಕಂಡವರ ನೆರಳಿನಲ್ಲಿ ಬದುಕಬೇಕಾದಾಗಲೂ ಸೂಕಿ ಕದಲಲಿಲ್ಲ... ಅಕ್ಷರಶಃ ಸೂಕಿ ಗೌತಮ ಬುದ್ದನಷ್ಟೆ ಪ್ರಬುದ್ದಳಾಗಿದ್ದಳು. ಹೆಂಡತಿ ಮಕ್ಕಳನ್ನು ನಡುನೀರಿನಲ್ಲಿ ಬಿಟ್ಟು ಮೋಕ್ಷ ಹುಡುಕಲು ಮಧ್ಯರಾತ್ರಿ ಮರೆಯಾದ ಬುದ್ದನಿಗಿಂತ ಪ್ರಭುತ್ವ ಮೆರೆದು ಪತಿ-ಪುತ್ರರಿಗೆ ತಿಳಿಸಿಯೇ ತನ್ನ ಹಾದಿ ಹಿಡಿದಿದ್ದಳು. ಆಕೆಗೆ ತಿಳಿದಿತ್ತು, ಹಿಡಿಯುವ  ಹಾದಿಯಲ್ಲಿ ಹಿಂತುರುಗುವುದು ಸಾಧ್ಯವಿಲ್ಲ, ತನ್ನವರೆನ್ನುವ ಯಾರೂ ನನ್ನವರಾಗಿರುವುದಿಲ್ಲ... ಒಂಟಿತನದ ಸುದೀರ್ಘ ಯಶಸ್ಸು ಅನಿಶ್ಚಿತವಿರುವ ಪ್ರಯಾಣ. ದೇಶದ ಹಿತ ಕಾಯುವ ಕೆಲಸ ಬದುಕಿನ ಅಮೂಲ್ಯ ಕ್ಷಣಗಳನ್ನು ಬೇಡುತ್ತಿತ್ತು.... ಕೊಡಲು ಸೂಕಿ ಸಿದ್ದಳಿದ್ದೇ ಇದ್ದಳು. ಆ ತ್ಯಾಗ ಆಕೆಯಿಂದ ಕಸಿದಿದ್ದು ಆಕೆಯ ಬದುಕಿನ ಅಮೂಲ್ಯ 21 ವರುಷಗಳನ್ನ.... ತ್ಯಾಗಗೂ ಎಲ್ಲೆ ಇದೆಯೇ?

ಕಷ್ಟಗಳಿಗೆಲ್ಲಾ ಕಲಶವಿಟ್ಟಂತೆ 2008ರ ಮೇನಲ್ಲಿ ಬೀಸಿದ ನರ್ಗೀಸ್ ಚಂಡಮಾರುತದಲ್ಲಿ ಸೂಕಿ ಮನೆಯಿರುವ ಪ್ರದೇಶದಲ್ಲಿ ವಿದ್ಯುತ್ ಕಡಿತ ಉಂಟಾಯಿತು. ಭಂಡ ಕಮ್ಯುನಿಸ್ಟ್ ಸರಕಾರ ಈ ತೊಂದರೆಯನ್ನು ಸರಿಪಡಿಸುವ ಗೋಜಿಗೆ ಹೋಗಲಿಲ್ಲ. 2009ರ ಆಗಸ್ಟ್ ತಿಂಗಳಿನವರೆಗೂ... ಅಂದರೆ ಭರ್ತಿ  1.5 ವರ್ಷ ಸೂಕಿ  ಮೇಣದ ಬತ್ತಿ ಹಚ್ಚಿಕೊಂಡು ರಾತ್ರಿಗಳನ್ನ ಕಳೆದಿದ್ದಾಳೆ ಅಂದರೆ ಸರ್ಕಾರ ಆಕೆಯನ್ನು ಇಟ್ಟಿದ್ದ ಪರಿಸ್ಥಿತಿ, ಆಕೆಯ ಮನೋಸ್ತೈರ್ಯವನ್ನ  ಊಹಿಸಿಕೊಳ್ಳಿ. ಇಷ್ಟಾದರೂ ಆಕೆ ಪರಿಸ್ಥಿತಿಯೊಡನೆ ರಾಜಿಯಾಗಲಿಲ್ಲ.  
ಬುರ್ಮದಲ್ಲಿ ಹೀಗಾಗುತ್ತಿರುವಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಕಿಯ ಪರವಾಗಿ ಪ್ರತಿಭಟನೆಗಳಾದವು. ಅಮೆರಿಕ, ಯೂರೋಪ್, ಆಸ್ಟ್ರೇಲಿಯಾ ಎಲ್ಲೆಡೆ ಸೂಕಿಯ ಬಿಡುಗದೆಗಾಗಿ ಧ್ವನಿ ಮೊಳಗಿದವು. ಅಂತರ ರಾಷ್ಟ್ರೀಯ ಮಟ್ಟದ ನಾಯಕರು ಸೂಕಿಗೆ ಮನೋಸ್ತೈರ್ಯ ನೀಡಿ ಆಕೆಗೆ ಬೆಂಬಲಿಸಿದರು. ನೋಬೆಲ್ ಶಾಂತಿ ಪುರಸ್ಕಾರ ಸೂಕಿಯನ್ನಿ ಹುಡುಕಿಕೊಂಡು ಬರ್ಮಗೇ ಬಂತು. ಇಷ್ಟಾದರೂ ಲಜ್ಜೆಗೇಡಿ ಕಮ್ಮ್ಯೂನಿಸ್ಟ್ ಸರಕಾರ ಮಣಿಯಲಿಲ್ಲ. 

ಹಲವು ಏಳು-ಬೀಳುಗಳ ನಂತರ ಸೂಕಿಯ ಶಾಂತಿಯ ಕಿಚ್ಚಿಗೆ ಮಣಿದು ಬರ್ಮಾ ಸರಕಾರ 2010ರಲ್ಲಿ ಆಕೆಯನ್ನು ದಿಗ್ಬಂಧನದಿಂದ ಬಿಡುಗಡೆಗೊಳಿಸಿತು. ಅಂದಿನಿಂದಲೂ ಹತಾಶರಾಗಿದ್ದ ಜನತೆಯಲ್ಲಿ ಆತ್ಮವಿಶ್ವಾಸವನ್ನು ತುಂಬಿ, ದೇಶದ ಭವಿಷ್ಯದ ದಿನಗಳಲ್ಲಿ ಬರುವ ಸುವರ್ಣಯುಗದ ದಿನಗಳಲ್ಲಿ ಅವರ ಪಾಲನ್ನು ಅವರಿಗೇ ನೀಡಲು ಸೂಕಿ ಕಂಕಣಬದ್ದಳಾಗಿದ್ದಾಳೆ. ಅಷ್ಟು ಕಷ್ಟ-ಕಾರ್ಪಣ್ಯಗಳ ನಡುವೆಯೂ ಸುಕ್ಕೂ ಚದುರದೆ ಆಕೆಯದು ಎನ್ನುವಂತೆ ಉಳಿದಿರುವುದು ಬರೀ ಆಕೆಯ "ಮಂದಹಾಸ" & "ಮನೋಸ್ತೈರ್ಯ".

 ಚೈತ್ರದ ಚಿಗುರಿಗಾಗಿ ಕೋಗಿಲೆ ಮತ್ತೆ ಹಾಡಲಿದೆ... ಕಮ್ಯುನಿಸ್ಟ್ ದಳ್ಳುರಿಯಲ್ಲಿ ದಹಿಸಿದ ಬರ್ಮಾ ಮತ್ತೆ ಪ್ರಜಾಪ್ರಭುತ್ವದ ಹಸಿರು ಸಿರಿಯನ್ನು ಕಾಣಲಿದೆ. ಇದಕ್ಕೆ ಪೂರಕವೆಂಬಂತೆ ಬರ್ಮದಲ್ಲಿ ನೆಡೆಯುತ್ತಿರುವ ಚುನಾವಣೆಯಲ್ಲಿ ಸೂಕಿ ಜಯಗಳಿಸಿದ್ದಾಳೆ. ಇದರೊಂದಿಗೆ ಅಧಿಕೃತ ಮುದ್ರೆಯೊಂದಿಗೆ ಸೂಕಿ ಬರ್ಮಾ ಸಂಸತ್ತಿಗೆ ಕಾಲಿಡುವುದು ಖಚಿತವಾಗಿದೆ. ಗೆದ್ದರೆ ಬರ್ಮಾ ಗಣರಾಜ್ಯದ ಅಧ್ಯಕ್ಷೆಯಾಗಿ, ಸೋತರೆ[ಅದಾಗದೆಂಬ ವಿಶ್ವಾಸದಲ್ಲಿ] ವಿರೋಧಪಕ್ಷದ ಅಧ್ಯಕ್ಷೆಯಾಗಿ!!! ಒಟ್ಟಿನಲ್ಲಿ ದಮನಕಾರಿ ಆಡಳಿತದ ವಿರುದ್ದ ದನಿಯೆತ್ತಲು ಸೂಕಿಗೆ ಅವಕಾಶ ಇದ್ದೇ ಇದೆ. "ಸತ್ಯಮೇವ ಜಯತೆ" ನಿರೂಪಿಸಲು ಕಾಲ ತೆಗೆದುಕೊಂಡ ಅವಧಿ ಭರ್ತಿ 21 ವರುಷ.... 66ರ ಚಿರಯವ್ವನೆ ಸೂಕಿ ನಿಜಕ್ಕೂ ನಮ್ಮೆಲ್ಲರಿಗೂಸ್ಪೂರ್ತಿಯ ಚಿಲುಮೆ.

ಮನುಕುಲದ ಮನಸ್ಥಿತಿಯೇ ಹಾಗೆ... ಆದರ್ಶವೆನಿಸುವ ಪ್ರತಿಯೊಂದೂ ಅವರ ಪಕ್ಕದ ಮನೆಯಲ್ಲಿ ನಡೆಯಬೇಕು. ಹಲವು ನೋವುಗಳ ದನಿ ಕೂಡ ಪಕ್ಕದಲ್ಲಿಂದಲೆಲ್ಲೋ ಮೊಳಗಬೇಕೆ ಹೊರತು ನಮ್ಮೊಳಗಲ್ಲ. ಸಮಸ್ತ ಇಸ್ಲಾಂ ದೇಶಗಳ ಆದರ್ಶ ಇಸ್ಲಾಂ ಧರ್ಮಪಾಲಕ ದೇಶದ  ಪ್ರಯೋಗಶಾಲೆಯಾಗಿ ಸಿಕ್ಕಿದ್ದು ನತದೃಷ್ಟ ಆಫ್ಘಾನಿಸ್ತಾನ, ತಮಿಳು ತಲೆಗಳ ಪುಂಡಾಟಗಳಿಗೆ ಮೈದಾನವಾದದ್ದು ಶ್ರೀಲಂಕಾ... ಹಾಗೆ ಬರ್ಮಾ ಕಮ್ಯೂನಿಸ್ಟರ ಪ್ರಯೋಗಶಾಲೆಯಾಗದೆ ಉಳಿಯಲು ಕಾರಣ ಸೂಕಿ.   ಸತ್ತ ಗಂಡನ ಹೆಂಡತಿ ಎಂಬ ಒಂದೇ ಕಾರಣಕ್ಕೆ ಕೊಡಬಾರದ ಅಧಿಕಾರವನ್ನು ಕೊಡಮಾಡುವ ಭಾರತ ಇನ್ನಾದರೂ ಕಾದು-ನೋಡುವ  ತಂತ್ರ ಬಿಟ್ಟು ಸೂಕಿಯ ಬೆಂಬಲಕ್ಕೆ ನಿಲ್ಲುವ ಪ್ರಾಜ್ಞ ನಿಲುವು ತಾಳುವುವುದರೊಂದಿಗೆತಾನೂ ಕೂಡ ತನ್ನ ಜ್ವಲಂತ ಸಮಸ್ಯೆಗಳನ್ನು ಅಂತಹುದೇ ದಿಟ್ಟ-ನೇರ ನಿರ್ಧಾರದಲ್ಲಿ ಬಗೆಹರಿಸಿಕೊಳ್ಳುವ ಜಾಣ್ಮೆಮೆರೆಯಬೇಕು.

ಸೂಕಿಯ ಗೆಲುವಿನೊಂದಿಗೆ ಬುದ್ದ ಕೂಡ ಹಸನ್ಮುಖನಾಗಿದ್ದಾನೆ.ಸೂಕಿ ಅಧಿಕಾರ ಚುಕ್ಕಾಣಿ ಹಿಡಿಯುವುದರೊಂದಿಗೆ ಬರ್ಮಾದ ಸುವರ್ಣಕಾಲ ಶುರುವಾಗುದೆಂಬ ಭರವಸೆಯಲ್ಲಿ 

ನಿಮ್ಮ
ಅವಿ

Friday, March 23, 2012

ಆಸ್ತಿಕತೆ v/s ಮುಗ್ದತೆ.


ಬೆಳೆಯುವ ಪ್ರತೀ ಹಂತದಲ್ಲಿ ಸಾಯುವ ಮುಗ್ಧತೆ ಕಾಲಾಂತರದಿ ಬೇರೂರಿ ನಿಂತ ಆಸ್ತಿಕತೆಗೆ ಒಂದೊಂದೇ ಕೊಡಲಿ ಪೆಟ್ಟನ್ನು ಹಾಕಿದೆ. ಅಜ್ಜಿ ಕಥೆಯ 7 ಸಾಗರದಾಚೆಯ ರಾಜಕುಮಾರಿ ಇಂದಿನ ತಲೆಮಾರಿಗೆ ಕೇಟ್ ವಿನ್ಸ್ಲೆಟ್, ಅಂಜೆಲಿನಾಜೂಲಿಯ ಪ್ರತಿರೂಪವಷ್ಟೆ.
ಅಡ್ಡಿ ಇಲ್ಲ... ಮುಗ್ದತೆ ಸಾಯಲೇ ಬೇಕು. ಅದರ ಸಾವಲ್ಲೇ ಜಗತ್ತಿನ ಬದುಕಿದೆ. ಆ ಬದುಕಿನಲ್ಲೇ ಇತಿಹಾಸದ ಅಸ್ತಿತ್ವವಿದೆ. ಕಳೆದ ವರುಷ ನಮ್ಮ ಮುಗ್ದತೆಯ ಒಂದು ಮಜಲನ್ನು ಕೊಂದಿದೆ. ಬದುಕಿನ ಗೋಡೆ ಇನ್ನೊ ಒಂದು ಹಂತಕ್ಕೆ ಮೇಲೇರಿದೆ. ಸಾವು-ಬದುಕಿನ ಲಾಸ್ಯದಂತಹ ಬೇವು-ಬೆಲ್ಲದ ಯುಗಾದಿ ಮತ್ತೆ ಬಂದಿದೆ..... "Be Practicle"ನಂತಹ ಬೇವಿನ ಬದುಕಿಗೆ ಆಸ್ತಿಕತೆಯೆಂಬ ಬೆಲ್ಲವೂ ಕೊಂಚ ಸೇರಲಿ. "ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಗಸು", ಅಲ್ಲವೇ?

ನಿದ್ರಿಸಿರುವ ನಿಮ್ಮ ಆಸ್ತಿಕತೆಗೊಂದು ಮೊಟಕಿ, ಇಂದಾದರೂ ಮುಗ್ದತೆಯನ್ನ ಆಹ್ವಾನಿಸಿ. ಅದರೊಡಗೂಡಿ ದೇಸಿ ಸೊಗಡಿನ ಯುಗಾದಿಯನ್ನ ಆಚರಿಸಿ. ಸರ್ವಗಣ ಪ್ರಥಮ ಗಣುಮಾಮ ನಿಮ್ಮಗಳ ಬದುಕಿನ ಅನುದಿನವನ್ನೂ ಸಂತೋಷಕರವಾಗಿಡಲಿ ಎಂಬ ಹಾರೈಕೆಯೊಂದಿಗೆ

ನಿಮ್ಮ
ಅವಿ


Monday, February 6, 2012

ಮಕ್ಕಳಿರಲವ್ವ ಮನೆ ತುಂಬಾ!!!

ಅಂದಕಾಲತ್ತಿಲ್ ಈ ಮಾತಿತ್ತು. ಹೆರುವ ಮಕ್ಕಳಿಗನುಗುಣವಾಗಿ ಪಟ್ಟದರಸಿ ಪಟ್ಟವೂ ಗಿಟ್ಟುವ ಕಾಲವಿತ್ತು. ಇಂದು ಮಾತೆಗೆ ಈ ಮಾತೇ heavy ಆಗಿದೆ. ಸುಕ್ಕೂ ಚದುರದೆ ಹೆರುವ ಕಷ್ಟ ಹಾಗಿರಬಹುದೇನೋ?!! ಬಿಡಿ, ಗಂಡಸಿಗ್ಯಾಕೆ ಗೌರಿ ದುಖ:.  ಸ್ವಂತ  ಮನೆಯ ನನಸಿನೊಂದಿಗೆ ಅಮ್ಮ ಮಕ್ಕಳ ಜಂಜಾಟಕ್ಕೆ ಒಂದು break ಕೊಟ್ಟು, ದೇವ ಮಂದಿರಗಳಲ್ಲಿ ಮನಶಾಂತಿ ಹುಡುಕುವ ವಯಸ್ಸಿನಲ್ಲಿ ಮೂಕ ಜೀವಗಳಲ್ಲಿ ಕಂಬ-ಗೋಡೆಗಳ ನಡುವೆ ಸಿಗದ ಮನಶಾಂತಿ ಕಂಡುಕೊಂಡಿದ್ದಾಳೆ.

3 ವರುಷದ ಕೆಳಗೆ ನನ್ನ ಪಾಲಿನ ಕೈತುತ್ತು ಕಸಿದುಕೊಂಡ ಜಿಮ್ಮಿ, ಈಗ ಅಮ್ಮನೊಡನೆ ಕಳೆಯುವ ಸಮಯದಲ್ಲೂ ಪಾಲು ಕೇಳುತ್ತಿರುವ ರಾಮ-ಲಕ್ಷ್ಮಣ, ಶೀಘ್ರದಲ್ಲೇ ನಿರೀಕ್ಷಿಸಿರುವ 5-6 ಹಾರಲಾರದ 2 ಕಾಲಿನ ಅಪ್ಸರೆಯರು...... ನಾನುಗಳ ನಡುವೆ ಅವಳದಾಗಿ ಉಳಿಯದ ಮಕ್ಕಳಿಗಿಂತ "ನಾವುಗಳ" ಸಿದ್ದಾಂತದಲ್ಲಿ ನಂಬಿಕೆ ಇಟ್ಟವರೊಂದಿಗೆ ಅಮ್ಮ ಕಳೆದುಹೋಗುತ್ತಿದ್ದಾಳೆ.

ಅಮ್ಮ ಕಂಡುಕೊಂಡ ಮನಶಾಂತಿಗಾಗಿ ಖುಷಿಪಡುವುದೋ, ನಾನು ಕಳೆದುಕೊಂಡ ಅಮ್ಮನ ಒಡನಾಟದ ಗಳಿಗೆಗಳಿಗಾಗಿ ಮರುಗುವುದೊ.... ಒಟ್ಟಿನಲ್ಲಿ ತಿಂಗಳ ಮುಂಚೆಯೇ ನನ್ನ ಜೀವನದಲ್ಲಿ ಬೇವು-ಬೆಲ್ಲದ ಯುಗಾದಿ ಬಂದಿದೆ.

Wednesday, January 18, 2012

ಪ್ರಜಾಪ್ರಭುತ್ವದ ಕಂಬಕ್ಕೆ ಕುಟ್ಟು ಹಿಡಿದಿದೆ

ಬೆಂಗಳೂರೇನು ಇವರಪ್ಪನ ಮನೆ ಆಸ್ತಿಯೇ ಹೀಗೆ ಘಂಟೆಗಟ್ಟಲೆ ಐಸ್ ಕ್ರೀಂ ಮೆಲ್ಲುತ್ತಾ ಉಡಾಡಿತನ ತೋರಿಸಲಿಕ್ಕೆ?

ಒಂದೇ ಬೈಕಿನಲ್ಲಿ 3 ಜನ ಬುದ್ದಿಗೇಡಿ ವಕೀಲರು ಬರುತ್ತಿದ್ದಿದ್ದನ್ನು ಕಂಡ ಪೇದೆ ಕೇಳಿದ್ದೇ ತಡ,  ಕಳ್ಳು ಕುಡಿದ ಕೋತಿಯಂತೆ ಹಲ್ಲೆ ಮಾಡಿದ್ದೇ ಅಲ್ಲದೆ ಅಂಡು  ಸುಟ್ಟ ಬೆಕ್ಕುಗಳಂತೆ ಹೀಗೆ 7 ಘಂಟೆಗಳ ಕಾಲ "freedom for expression" ಹೆಸರಿನಲ್ಲಿ ಈ ಪರಿಯ ಗೂಂಡಾಗಿರಿ ಮಾಡಬಹುದೇ?

ಇಂಥಾ ಹುಂಬರಿಗೆ ಆಂಡಿಗೆರಡು ಕೊಡದೆ ಪೊಲೀಸರೂ ಕೂಡ ಸಂಧಾನದ ಹೆಸರಿನಲ್ಲಿ ಹುಲಿ-ಕುರಿ ಆಟ ಆಡಬಹುದೇ? ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಜನತೆಯ ನೆಮ್ಮದಿಯನ್ನೇ ಹರಾಜಿಗಿಟ್ಟ ಈ ಇಬ್ಬಂದಿಗಳಿಗೆ ಶಿಕ್ಷಿಸೋರು ಯಾರು? ಊರಿಗೆಲ್ಲ ಬುದ್ದಿ ಹೇಳುವ ಬೆಕ್ಕು ಒಲೆ ಮುಂದೆ ಉಚ್ಚೆ ಹುಯ್ದರೆ ಎಂತ ಮಾಡೋದು?

ಹಸಿವು, ಬೆದರಿಕೆಯಿಂದ ಕಂಗೆಟ್ಟು ಅತ್ತ ಮಕ್ಕಳು, ಇಹ-ಪರ ತಿಳಿಯದ ಪೋಷಕರು, ಕುಳಿತಲ್ಲೆ ಕಲ್ಲಾದ ವೃದ್ದರು, ಭಾಷೆ ಬಾರದೆ ಕಿದ್ವಾಯಿ ರಸ್ತೆ ತಿಳಿಯದೆ ಕಂಗೆಟ್ಟ ಪರವೂರಿನ ಅನಾರೋಗ್ಯಪೀಡಿತನ ಬಸುರಿ ಹೆಂಗಸು, ತ್ರಿಶಂಕು ಸ್ಟಿತಿಯಲ್ಲಿನ ಪ್ರಯಾಣಿಕರು, ಜನತೆಗೆ ಮಾರ್ಗದರ್ಶನ ಮಾಡದೆ ನಂ.1 ಗುಂಗಿನಲ್ಲೇ ತಗಲಾಕೊಂಡ ಎಫ್ ಎಂಗಳು.....ಡೈರಿ ವೃತ್ತದಿಂದ ಮಲ್ಲೇಶ್ವರ ತಲುಪಲು 4 ಘಂಟೆ 30 ನಿಮಿಷ.

ಇವರು ನಮ್ಮ so called ನಾಗರೀಕ ವಕೀಲರು, ಮಣ್ಣಿಗೆ ಹೋಗಲಿ ಇವರ ನಾಗರೀಕತೆ..... ಜನಸಾಮಾನ್ಯರ ದುಗುಡವನ್ನು ಅರಿಯದ ಈ ಮಂಕುದಿಣ್ಣೆಗಳಿಗೆ ನಮ್ಮ ಘನ ನ್ಯಾಯ ಕಾಯುವ ಕೆಲಸ.

ನಿಜಕ್ಕೂ ಇಂಥಾ ಬೇಜವಾಬ್ದಾರಿ ಹೀನಸುಳಿ ಜನರ ಹೊಲಸು ಕೆಲಸ, ಕಾದು ನೋಡುವ ತಂತ್ರದ ರಾಜಕಾರಣಿಗಳು....!!!!

ಇಂಥವರಿದ್ದರೆ ನ್ಯಾಯದೇವತೆಯ ಕಣ್ಣಷ್ಟೇ ಯಾಕೆ? ಮೈಯನ್ನೂ ಕೂಡ ಕಪ್ಪು ಬಟ್ಟೆಯಲ್ಲೇ ಸುತ್ತಬೇಕು.

Saturday, January 14, 2012

ಸಂಕ್ರಮಣ ಘಟ್ಟದಲ್ಲಿ....


"ಅಗ್ನಿರ್ಜ್ಯೋತಿರ್‌ ಅಹಃ ಶುಕ್ಲಃ ಷಣ್‌ಮಾಸ ಉತ್ತರಾಯಣಂ।
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾಃ।"


ಇಹದ ದಕ್ಷಿಣಾಯನದಿಂದ ಮೋಕ್ಷದ ಉತ್ತರಾಯಣದ ಪಥಕ್ಕೆ ಸೂರ್ಯ 14ರ ಇಳಿಸಂಜೆ 6 ಘಂಟೆ 44 ನಿಮಿಷಕ್ಕೆ ಮಕರ ರಾಶಿ ಪ್ರವೇಶದೊಂದಿಗೆ ತನ್ನ ಯಾನ ಆರಂಭಿಸುತ್ತಾನೆ......
ಕಕ್ಷೆ ಪಥಗಳ ಕುರಿತು ಹಿರಿಯರ ವೈಜ್ಞಾನಿಕತೆಗೆ ತಲೆದೂಗುತ್ತಾ, ಬರಲಿರುವ ಪುಣ್ಯಕಾಲ ಅಂಧಕಾರದಲ್ಲಿ ಹುದುಗಿದ ಜನಮಾನಸದ ಸಮಸ್ತ ಭರವಸೆಗಳಿಗೂ ಜೀವಜಲವನ್ನುಣಿಸಲಿದೆಯೆಂಬ ಭರವಸೆಯಲ್ಲಿ,


"ಉಗ್ರರ  ಹೃದಯಕ್ಕೂ ಒಲಿಯಲಿ ಪ್ರೀತಿ...ಹರಸಲಿ ಸಂಕ್ರಾಂತಿ"


ಹಾರೈಕೆಯೊಂದಿಗೆ,
ನಿಮ್ಮ
ಅವಿ