Sunday, August 9, 2009

ದೇವರು ಎಡವಿದ್ದಾದರೂ ಎಲ್ಲಿ?





ಮನಸ್ಸು ನಿಜಕ್ಕೂ ಕದಡಿದ ರಾಡಿಯಾಗಿದೆ.

ಬೆಂಗಳೂರಿನ Busy Lifeನಲ್ಲಿ ಬ್ಲಾಗ್ ಸಹವಾಸವೇ ಬೇಡವೆಂದಿದ್ದ ನನಗೆ ಈ ಎರಡು Photoಗಳು ಕತ್ತಿನ ಪಟ್ಟಿ ಹಿಡಿದು, ಕೆನ್ನೆಗೆರಡು ಬಿಗಿದು ಬರೆಯಲು ಕೂರಿಸಿವೆ. ನನ್ನ ಬರವಣಿಗೆಯಲ್ಲಾದರೂ ಅವುಗಳಿಗೆ ನ್ಯಾಯ ದೊರೆಯಬಹುದೆಂಬ ಭರವಸೆಯೊಂದಿಗೆ..!! ನಾನಾದರೋ ದಿಕ್ಕುಗೆಟ್ಟ ದಿಕ್ಪಾಲಕನಾಗಿದ್ದೇನೆ.

ಮರ ಇಳಿದು ಜೊತೆ ಹಿಡಿದು ಕೂಡಿ ಬಾಳಲು ಕಲಿತ ಮಾನವ ಪ್ರಕೃತಿಯನ್ನು ಬೆರಗುಗಣ್ಣಿನಿಂದ ನೋಡಿದ್ದಷ್ಟೇ ಅಲ್ಲದೆ ಅದಕ್ಕೆ ದೈವತ್ವವನ್ನೂ ಕರುಣಿಸಿದ. ನೋಡಿದ ಸೃಷ್ಟಿಯೇ ಬೆರಗಾಗುವಂತೆ ಸೃಷ್ಟಿಕ್ರಿಯೆಯಲ್ಲೂ ಪ್ರಾಮುಖ್ಯತೆ ಮೆರೆದ.

"ಋತುಮಾನ ಸಂಪುಟಕೆ ಹೊಸ ಕಾವ್ಯ ಬರೆದವಳೇ
ಮಾನವ ಕುಲವ ಕಾಯುವ ತಾಯಿ"

ನಂತರ, ಪ್ರಕೃತಿ ಅವನ ದೇವರಾಯಿತು, ಬದುಕಾಯಿತು, ಬಾಳಲ್ಲಿ ಹಾಸು ಹೊಕ್ಕಯಿತು. ಅವನು ಬೆಳೆಯುವ ಪ್ರತಿ ಹಂತದಲ್ಲೂ ಅವನ ಜೊತೆಗೂಡುವ ಅರಿಷಡ್ವರ್ಗಗಳಿಗೆ ಅಪವಾದದಂತಿರುವ ಮಕ್ಕಳಲ್ಲೂ ದೇವರನ್ನು ಹುಡುಕುವ ಪ್ರಯತ್ನ ಮಾಡಿದ. ಏಕೆಂದರೆ ದೇವರೂ ಮಕ್ಕಳಷ್ಟೇ ಮೃದುವಂತೆ, ನಿಷ್ಕಲ್ಮಶವಂತೆ ಹಾಗೇ ನಿಸ್ವಾರ್ತಿಯಂತೆ ಕೂಡ..!! ಮಧ್ಯಮ ವರ್ಗದಲ್ಲಿ ಜನಿಸಿದ ನಾನು ದೇವರ ಕುರಿತು ಎಷ್ಟೋ ಕೇಳಿದ್ದೇನೆ, ಓದಿದ್ದೇನೆ.."ದೇವರು ಸರ್ವ ಶಕ್ತ, ಕರುಣಾ ಮಾಯಿ, ಅನಾಥರಕ್ಷಕ, ದೀನ ಬಂಧು.. Blaa.. Blaa.. Bli... Bli... ಅಳಿಯ ಅಲ್ಲ ಮಗಳ ಗಂಡ ಎಂಬಂತೆ ಹಲವು ಧರ್ಮಗಳಲ್ಲಿ ಅವನ ಹೆಸರು ಬೇರೆಯಾದರೂ ಅವನ ಶಕ್ತಿ ಸ್ವರೂಪ ಒಂದೇ.

" God never plays with dice"
"ವ್ಯಥೆಗಳ ಕಳೆಯುವ ಕಥೆಗಾರ ನಿನ್ನೀ ಕಲೆಗೆ ಯಾವುದು ಭಾರ"
"ಕರುಣಾಳು ಬಾ ಬೆಳಕೆ ಮುಸುಕಿಹುದು ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು"

ದಾಳದೊಡನೆ ಆಡದ ದೇವರ ಸೃಷ್ಟಿ ಅಚ್ಚು ತೆಗೆದಷ್ಟೇ ಸ್ಪಷ್ಟ. ಅವನೊಬ್ಬ ಅದ್ಭುತ ಕಲೆಗಾರ..ಪಥದಿಂದ ಸರಿಯದ ಗ್ರಹ ನಕ್ಷತ್ರಗಳನ್ನು ಸೃಷ್ಟಿಸುವುದು ಗೊತ್ತು, ಹರಿವ ನೀರಿಗೆ ದಿಕ್ಕು ತೋರಿಸುವವನೂ ಅವನೇ!! ಭೂಮಿಯ ಒಡಲಲ್ಲಿ ಲಾವಾಗ್ನಿಯನ್ನು ತುಂಬಿ, ಅದನ್ನು ಕವಚದಿಂದ ಬಿಗಿದು ಅದ ತಂಪಾಗಿಸಲು ಸಮುದ್ರಗಳನ್ನು ಸೃಷ್ಟಿಸಬೇಕೆನ್ನುವ Extraordinary Ideaಗಳೂ ಅವನಿಗೆ ಆಗಾಗ್ಗೆ ಬರುತ್ತವೆ.
ಅವನ ಕೌಶಲ್ಯವೆಷ್ಟು ಗೊತ್ತಾ?

"ನೆಲ್ಲಿಕಾಯಿ ಮರದೊಳಿತ್ತನೋ ನಮ್ಮ ಶಿವ ಕುಂಬಳಕಾಯಿ ಬಳ್ಳಿಲಿಟ್ಟನೋ
ಹೆಣ್ಣಿನಲ್ಲಿ ಅಂದವಿಟ್ಟನೋ ನಮ್ಮ ಶಿವ ಗಂಡಿನಲ್ಲಿ ಆಸೆ ಇತ್ತನೋ
ಹೆಣ್ಣು ಗಂಡು ಸೇರಿಕೊಂಡು ಯುದ್ದವನ್ನು ಮಾಡುವಾಗ ಕಾಣದಂತೆ ಮಾಯವಾದನೋ
ನಮ್ಮ ಶಿವ ಕೈಲಾಸ ಸೇರಿಕೊಂಡನೋ"

Ooops... ಎಲ್ಲದರಲ್ಲೂ Perfection ಮೆರೆದ ದೇವರು ಕೊನೆಯ ಹಂತದಲ್ಲೇ ಕೈ ಕೊಟ್ಟು ಓಡುವಷ್ಟು Idiotic ಕೆಲಸ ಮಾಡಿದ್ದೇಕೆ? ನನಗಿನ್ನೂ ಅರ್ಥವಾಗುತ್ತಿಲ್ಲ.

ಮೇಲಿನ ಎರಡು ಚಿತ್ರಗಳನ್ನು ಕ್ಷಣ ಹೊತ್ತು ದಿಟ್ಟಿಸಿ ನೋಡಿ.. ಹೇಳಿ ಕೊಂಚವಾದರೂ ವ್ಯತ್ಯಾಸ ಕಾಣುತ್ತಿದೆಯೇ? ಸ್ನಿಗ್ದ ಮಂದಹಾಸ, ಹಾಲುಗಲ್ಲ, ಏನೋ ಹೇಳ ಬಯಸುವ ಕಣ್ಣುಗಳು, ಜಗತ್ತನ್ನೇ ತನ್ನಲ್ಲಡಗಿಸಲೆಂದೇ ಮೂಡಿರುವ ಮುಗ್ದತೆ ಎಲ್ಲ... ಎಲ್ಲಾ Similar. ಅಂತಹುದರಲ್ಲಿ ದೇವರು "ಧರ್ಮ-ಕರ್ಮ"ದ ಹೆಸರಿನಲ್ಲಿ "ಮೇಲು-ಕೀಳೆನ್ನುವ" ಆಟ ಈ ಮಕ್ಕಳೊಂದಿಗೂ ಆಡುವಷ್ಟು Saddist ಯಾಕಾದ?

ಸಾಕಂತೆ ಹತ್ತು ಪದಗಳ ಬದಲು ಒಂದು ಚಿತ್ರ.ಆದರೆ ಚಿತ್ರವೂ ತನ್ನ ಒಳಾರ್ಥವನ್ನು ಬಿಂಬಿಸುವುದರಲ್ಲಿ ಸೋಲುತ್ತದೆ ಎಂಬುದು ಎಷ್ಟು ಜನಕ್ಕೆ ಗೊತ್ತು?
ಈ ಹಂತದಲ್ಲಿ ಒಂದಾಗಿ ಕಾಣುವ ಈ ಮುಗ್ದ ಕಂದಮ್ಮಗಳ ಭವಿಷ್ಯವೂ ಒಂದೇ ಆಗಿರುತ್ತದೆಂಬ ವಿಶ್ವಾಸವೇನು? ಅದನ್ನು ನೆನೆದೆ ಮನಸ್ಸು ಕಳವಳಕ್ಕೀಡಾಗುತ್ತಿದೆ.ನಮ್ಮನ್ನು ಸೃಷ್ಟಿಸಿದ ದೇವರು ಒಂದೇ ಆದರೆ ನಾಮ ಹಲವು ಎಂದು ಜಗತ್ತಿಗೆ ಮನವರಿಕೆಯಾಗುತ್ತಿರುವ ಈ ಯುಗದಲ್ಲಿ ನಮ್ಮನ್ನು ಸೃಷ್ಟಿಸಿದ ದೇವರಿಗೇ ತಾನು ಸೃಷ್ಟಿಸುವ ಕಂದಮ್ಮಗಳಿಗೆ ಒಂದು ಉಜ್ವಲ ಭವಿಷ್ಯ ನೀಡಲಾಗದ್ದು ಅಪಹಾಸ್ಯದ ಪರಮಾವಧಿಯೇ ಸರಿ!!

ಹೇಳಿ, ಸರ್ವಶಕ್ತನೆಂಬ ದೇವರನ್ನು ಸೃಷ್ಟಿಸಿದ ಮಾನವನಿಗೆ ಅವನಲ್ಲಿ "Common Sense" ಇಡಲಾಗದಷ್ಟು ದೇವರು ಕಗ್ಗಂಟಾದನೇಕೆ?

ಕಾಣದ ದೇವರೊಡನೆ ಈ ಮಕ್ಕಳೂ ಅದೇ ಪ್ರಶ್ನೆ ಕೇಳುತ್ತಿರಬಹುದೇ?

ಯಾಕೋ ಕಣ್ಣು ತುಂಬಿಬರುತ್ತಿವೆ..ಬರವಣಿಗೆಯಲ್ಲಿ ಆ ಚಿತ್ರಗಳಿಗೆ ನ್ಯಾಯ ಒದಗಿಸುವಷ್ಟು ಶಕ್ತಿ ನನ್ನಲ್ಲಿಲ್ಲ..

ಕೊಸರು:
ದಿಗಂತದೆಡೆಗಿನ ಕಿರುನೋಟ ಅನ್ವೇಷಣೆಯೋ! ವಿಶ್ಲೇಷಣೆಯೋ !!
ಹಾಲ್ಗಂಗಳಲಿ ಬಾಳ ಪ್ರತಿಬಿಂಬ, ಕಪ್ಪೋ ಬಿಳುಪೋ
ಇರಲಿ ಬಣ್ಣದ ಕನಸು, ಚಿನ್ನದ ಬದುಕು