Monday, April 2, 2012

ಗೌತಮನಂತಹ ಗೌತಮಿ...!!


ಈಕೆ ನಮ್ಮ-ನಿಮ್ಮೆಲ್ಲರ ಗೌತಮಿ. ಸಾವಿಲ್ಲದ ಮನೆ ಸಾಸಿವೆಯಲ್ಲ, ಗುಟುಕು ಜೀವ ಹಿಡಿದು ಬದುಕಿರುವ ಬರ್ಮಾ ಎಂಬ ನತದೃಷ್ಟ ದೇಶಕ್ಕೆ ಸಂಜೀವಿನಿಯಾಗಲು ಕರ್ಪೂರದಂತೆ ಕರಗುತ್ತಿರುವ ಗೌತಮಿ. ಸಾಯುತ್ತಿರುವ ಪ್ರಜಾಪ್ರಭುತ್ವದ ಉಳಿವಿಗಾಗಿ ಊಳಿದಡೆ
           "ಗೆದ್ದೇ ಗೆಲ್ಲುವೆ ಎಲ್ಲಾ ಹೂನಗೆಯಲ್ಲೇ,
               ಲೋಕವೇ ಅಡಗುವುದಿಲ್ಲವೇ ಇಬ್ಬನಿಯಲ್ಲೇ,
                        ಉದುರಿ ಹೋದರೂ ತರಗೆಲೆ
                                   ನಾಳೆ ಬರದೇ ಚಿಗುರೆಲೆ..." 
ಎಂಬ ಆಶಾವಾದದಲ್ಲೇ ಬದುಕಿದ್ದ ತನ್ನವರೆಲ್ಲಾ ಸಾವಿನ ಕದ ಬಡಿದರೂ, ಮೂಡಿದ ಕಂಬನಿ ಆರದ ಅನುಘಳಿಗೆಯೂ ತನ್ನ ಸಿದ್ದಾಂತದ ಉಳಿವಿಗಾಗಿ ಕಮ್ಯುನಿಸ್ಟ್ ಯಮನ ಬೆನ್ನು ಹತ್ತಿದ ಸಾವಿತ್ರಿ.

"ಒಂದು ಮನೆ, ಹೆಸರಿಗೆ. ಕರೆಂಟ್ ಇದೆ, ಟಿ ವಿ ಇಲ್ಲ, ರೇಡಿಯೊ ಇಲ್ಲ, ಮೊಬೈಲ್ &ಇಂಟರ್ನೆಟ್ ಇಲ್ಲವೇ ಇಲ್ಲ. ಪುಸ್ತಕ ಇದೆ, ಅಭಿರುಚಿಗೂ ನಿಲುಕದ ಸಿದ್ದಾಂತಕ್ಕೆ ಕಟ್ಟು ಬಿದ್ದಂತಹವು, ಬಾಗಿಲಿನಿಂದ ಒಳಗಿನ/ಹೊರಗಿನ ಕಾಲುಗಳು ಅಡ್ಡಾಡುವಂತಿಲ್ಲ. ಆಲೋಚನೆಗಳು ದಂಡಿಯಿವೆ, ಹಂಚಲು ಜೊತೆಗಾರರೆಂದು ಕರೆಯಬಹುದಾದ ಒಂದು ನರ ಪಿಳ್ಳೆಯೂ ಇಲ್ಲ. ಕೆಲಸದಾಳುಗಳು ಇದ್ದಾರೆ, ಮಾಡುವ ಕೆಲಸ ನಿಮ್ಮದಾದರೂ ನಿಷ್ಠೆ ಅವರ ಧಣಿಗೆ"
ಹೇಳಿ, ಇಂತಹ ವಾತಾವರಣದಲ್ಲಿ ನೀವು ಎಷ್ಟು ದಿನ [ಕ್ಷಮಿಸಿ, ಘಂಟೆ] ಇರಬಲ್ಲಿರಿ? ಅಬ್ಬಬ್ಬಾ ಅಂದರೆ 5 ಘಂಟೆ? ಇದ್ಯಾವುದೋ ಬಿಗ್ ಬಾಸ್ ಅಥವಾ ಬಿಗ್ ಸ್ಲೇವ್ ಸೆಟ್ ಅಲ್ಲ, ಸೂಕಿ ಕಳೆದ 15 ವರುಷದಿಂದ ಬದುಕಿದ ಕ್ಷಣಗಳು ಹಾಗಿದ್ದವು.
5 ದಿನದ ಕಾಟಾಚಾರದ ಕೆಲಸದ ನೆಪಮಾಡಿ ವಾರಾಂತ್ಯದ ಹೆಸರಿನಲ್ಲಿ ಮೋಜು ಮಾಡುವ ಸಂಸ್ಕೃತಿಗೆ ಬಿದ್ದಿರುವ ನಮಗೆ 15 ವರುಷಗಳ ಕಾಲ ಟಿ ವಿ, ಇಂಟರ್ನೆಟ್ ಇಲ್ಲದೆ ಕೇವಲ ಪುಸ್ತಕ, ಸಿದ್ದಾಂತಗಳ ನಡುವೆ ಮನೆಯೆಂಬ ಸೆರೆಮನೆಯಲ್ಲಿ ಜಗತ್ತಿಗೆ ತಿಳಿಯದಂತೆ ಕಳೆದುಹೋಗುವ ಸೂಕಿಯ ಕಿಚ್ಕಿದೆಯಲ್ಲಾ ಅದನ್ನು ಊಹಿಸಲಸಾಧ್ಯ.

ಅಪ್ಪ ಬರ್ಮಾದ ಪಿತಾಮಹ, ಅಮ್ಮ ರಾಜಕೀಯ ಮುತ್ಸದ್ದಿ. ಕೂಡಿ-ಬೆಳೆಯಲು ಅಣ್ಣಂದಿರು. ಎಲ್ಲ "perfect family frame" ತರಹವೇ ಇತ್ತು. ದೇಶಕ್ಕೆ ಸ್ವತಂತ್ರ ಸಿಕ್ಕ ಖುಷಿಯಲ್ಲೇ ತನ್ನವರಿಂದಲೇ ಹತ್ಯೆಗೀಡಾದ ಅಪ್ಪ, ನಂತರ ರಾಜಕೀಯವಾಗಿ ಸಕ್ರಿಯವಾದ ಅಮ್ಮನೊಡನೆ ಭಾರತಕ್ಕೆ ಬಂದು ಇಲ್ಲೇ ವಿದ್ಯಾಭ್ಯಾಸ ಪೂರೈಸಿ, ಟಿಬೆಟ್ ಕುರಿತಂತೆ ಸಕ್ರಿಯ ಸಿದ್ದಾಂತವಾದಿಯಾಗಿದ್ದ ಮೈಕಲ್ ನೊಡನೆ ಪ್ರೇಮ-ವಿವಾಹ, ನ್ಯೂಯಾರ್ಕ್ ನಗರದಲ್ಲಿ ವಿಶ್ವ ಸಂಸ್ಥೆ ಕಚೇರಿಯಲ್ಲಿ ಕೆಲಸ, ಮುದ್ದಾದ 2 ಮಕ್ಕಳು... ಇನ್ನೇನು ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚಲು?

ಅಷ್ಟರಲ್ಲೇ ಕಮ್ಮುನಿಸ್ಟ್ ಕಿಚ್ಚು ದೇಶದೆಲ್ಲಡೆ ಹರಡಲಾರಂಭಿಸಿತ್ತು. ಮಿಲಿಟರಿ ಆಡಳಿತದ ಛಾಯೆ ರಂಗೂನ್ ಆಗಸದಲ್ಲಿ ಕವಿದಿತ್ತು. ಅಂತಹ ಅನಿಶ್ಚಿತ 88ರ ಒಂದು ಮುಂಜಾನೆ ಮರಣಶಯ್ಯೆಯಲ್ಲಿದ್ದ ತಾಯಿಯ ನೋಡಲು ಬರ್ಮಾಗೆ ಬಂದಿಳಿದ ಸೂಕಿಗೆ ಗೊತ್ತೇ ಆಗದ ವಿಷಯವೆಂದರೆ ಆಕೆ ಮತ್ತೆಂದೂ ಆ ನೆಲ ಬಿಟ್ಟು ಕಡಲುವಂತಿಲ್ಲ.... ಅದೂ 2 ದಶಕಗಳ ಕಾಲ.

ಅಮ್ಮನ ಆರೋಗ್ಯದ ಜೊತೆದೇಶದ ಪ್ರಜಾಪ್ರಭುತ್ವಕ್ಕೂಕಮ್ಮುನಿಸ್ಟ್ ಸೋಂಕು ಹರಡುವುದನ್ನು ಮನಗಂಡ ಸೂಕಿ 90ರ ಸಾರ್ವತ್ರಿಕ ಚುನಾವಣೆಯಲ್ಲಿ ಪಾಲ್ಗೊಂಡು ಬಹುಮತವನ್ನೂ ಪಡೆದರು. ದೇಶದ ಚುಕ್ಕಾಣಿ ಬಿಟ್ಟು ಕೊಡಲು ಭಂಡ ಜಿಂಟಾಹು ಸಿದ್ದನಿರಲಿಲ್ಲ. ದೇಶದ ಆಂತರಿಕ ಕ್ಷೋಬೆಯ ಹೆಸರಿನಲ್ಲಿ ಸೂಕಿಗೆ ಮನೆ ದಿಗ್ಬಂಧನ ವಿಧಿಸಲಾಯಿತು.  ನ್ಯೂಯಾರ್ಕ್ ನಗರದಲ್ಲಿದ್ದ ಸೂಕಿಯ ಪತಿ ಕಳವಳಗೊಂಡು ಬರ್ಮಾಗೆ ಬರಲು ವೀಸಾ ಕೇಳಿದರೆ ಕಮ್ಯುನಿಸ್ಟ್ ಸರಕಾರ ಸಮ್ಮತಿಸಲಿಲ್ಲ... ಬೇಕಿದ್ದಲ್ಲಿ ಸೂಕಿಯೇ  ನ್ಯೂಯಾರ್ಕ್ ನಗರಕ್ಕೆ ಹೋಗಲಿ ಎಂದಿತು. ಸೂಕಿ ಒಪ್ಪಲಿಲ್ಲ... ಆಕೆಗೆ ಭಂಡ ಕಮ್ಮ್ಯೂನಿಸ್ಟ್ ಸರಕಾರದ ಹುನ್ನಾರ ತಿಳಿದು ಹೋಗಿತ್ತು. ಒಮ್ಮೆ ದೇಶದಿಂದ ಹೊರಗೆ ಕಾಲಿಟ್ಟಲಿ ಮತ್ತೆ ಮರಳಲು ಅನುಮತಿ ದೊರೆಯದೆಂದು. ನಂತರದಲ್ಲಿ ಮೈಕಲ್ ಕ್ಯಾನ್ಸರ್ ಪೀಡಿತನಾಗಿ ಮರಣ ಶಯ್ಯೆಯಲ್ಲಿದ್ದಾಗಲೂ ಸೂಕಿ ಅವನನ್ನು ನೋಡಲು ದೇಶ ಬಿಟ್ಟು ಹೊರಡಲಿಲ್ಲ... ದೇಶದ ಭವಿಷ್ಯದ ಮುಂದೆ ಆಕೆಯ ಸ್ವಂತ ಸುಖ-ದುಖ ಮರೆತುಹೋಗಿತ್ತು. ಹೆಂಡತಿಯನ್ನು ನೋಡದೇ 99ರಲ್ಲಿ ಕ್ಯಾನ್ಸರ್ ಪೀಡಿತನಾಗಿ ಮರಣಹೊಂದಿದಾಗ ಸೂಕಿ ಒಳಗೊಳಗೆ ಮುರಿದುಹೋಗಿದ್ದಳು. 89ರಿಂದ-99ರ ಅವಧಿಯಲ್ಲಿ ಕೇವಲ 5 ಬಾರಿಯಷ್ಟೆ ಭೆಟ್ಟಿ ಮಾಡಿದ್ದ ಮೈಕಲ್ ಮರಣದೊಂದಿಗೆ ಸೂಕಿ ಮಕ್ಕಳೂ ಕೂಡ ಲಂಡನ್ ನಗರದಲ್ಲಿ ಆಶ್ರಿತರಾಗಿ ಬೆಳೆಯಬೇಕಾಯಿತು.  ಕೈ ಹಿಡಿತ ಪತಿ ಅನಾಥನಂತೆ ಸತ್ತಾಗಲೂ, ಸ್ವಂತ ಮಕ್ಕಳು ಪರದೇಶದಲ್ಲಿ ಕಂಡವರ ನೆರಳಿನಲ್ಲಿ ಬದುಕಬೇಕಾದಾಗಲೂ ಸೂಕಿ ಕದಲಲಿಲ್ಲ... ಅಕ್ಷರಶಃ ಸೂಕಿ ಗೌತಮ ಬುದ್ದನಷ್ಟೆ ಪ್ರಬುದ್ದಳಾಗಿದ್ದಳು. ಹೆಂಡತಿ ಮಕ್ಕಳನ್ನು ನಡುನೀರಿನಲ್ಲಿ ಬಿಟ್ಟು ಮೋಕ್ಷ ಹುಡುಕಲು ಮಧ್ಯರಾತ್ರಿ ಮರೆಯಾದ ಬುದ್ದನಿಗಿಂತ ಪ್ರಭುತ್ವ ಮೆರೆದು ಪತಿ-ಪುತ್ರರಿಗೆ ತಿಳಿಸಿಯೇ ತನ್ನ ಹಾದಿ ಹಿಡಿದಿದ್ದಳು. ಆಕೆಗೆ ತಿಳಿದಿತ್ತು, ಹಿಡಿಯುವ  ಹಾದಿಯಲ್ಲಿ ಹಿಂತುರುಗುವುದು ಸಾಧ್ಯವಿಲ್ಲ, ತನ್ನವರೆನ್ನುವ ಯಾರೂ ನನ್ನವರಾಗಿರುವುದಿಲ್ಲ... ಒಂಟಿತನದ ಸುದೀರ್ಘ ಯಶಸ್ಸು ಅನಿಶ್ಚಿತವಿರುವ ಪ್ರಯಾಣ. ದೇಶದ ಹಿತ ಕಾಯುವ ಕೆಲಸ ಬದುಕಿನ ಅಮೂಲ್ಯ ಕ್ಷಣಗಳನ್ನು ಬೇಡುತ್ತಿತ್ತು.... ಕೊಡಲು ಸೂಕಿ ಸಿದ್ದಳಿದ್ದೇ ಇದ್ದಳು. ಆ ತ್ಯಾಗ ಆಕೆಯಿಂದ ಕಸಿದಿದ್ದು ಆಕೆಯ ಬದುಕಿನ ಅಮೂಲ್ಯ 21 ವರುಷಗಳನ್ನ.... ತ್ಯಾಗಗೂ ಎಲ್ಲೆ ಇದೆಯೇ?

ಕಷ್ಟಗಳಿಗೆಲ್ಲಾ ಕಲಶವಿಟ್ಟಂತೆ 2008ರ ಮೇನಲ್ಲಿ ಬೀಸಿದ ನರ್ಗೀಸ್ ಚಂಡಮಾರುತದಲ್ಲಿ ಸೂಕಿ ಮನೆಯಿರುವ ಪ್ರದೇಶದಲ್ಲಿ ವಿದ್ಯುತ್ ಕಡಿತ ಉಂಟಾಯಿತು. ಭಂಡ ಕಮ್ಯುನಿಸ್ಟ್ ಸರಕಾರ ಈ ತೊಂದರೆಯನ್ನು ಸರಿಪಡಿಸುವ ಗೋಜಿಗೆ ಹೋಗಲಿಲ್ಲ. 2009ರ ಆಗಸ್ಟ್ ತಿಂಗಳಿನವರೆಗೂ... ಅಂದರೆ ಭರ್ತಿ  1.5 ವರ್ಷ ಸೂಕಿ  ಮೇಣದ ಬತ್ತಿ ಹಚ್ಚಿಕೊಂಡು ರಾತ್ರಿಗಳನ್ನ ಕಳೆದಿದ್ದಾಳೆ ಅಂದರೆ ಸರ್ಕಾರ ಆಕೆಯನ್ನು ಇಟ್ಟಿದ್ದ ಪರಿಸ್ಥಿತಿ, ಆಕೆಯ ಮನೋಸ್ತೈರ್ಯವನ್ನ  ಊಹಿಸಿಕೊಳ್ಳಿ. ಇಷ್ಟಾದರೂ ಆಕೆ ಪರಿಸ್ಥಿತಿಯೊಡನೆ ರಾಜಿಯಾಗಲಿಲ್ಲ.  
ಬುರ್ಮದಲ್ಲಿ ಹೀಗಾಗುತ್ತಿರುವಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಕಿಯ ಪರವಾಗಿ ಪ್ರತಿಭಟನೆಗಳಾದವು. ಅಮೆರಿಕ, ಯೂರೋಪ್, ಆಸ್ಟ್ರೇಲಿಯಾ ಎಲ್ಲೆಡೆ ಸೂಕಿಯ ಬಿಡುಗದೆಗಾಗಿ ಧ್ವನಿ ಮೊಳಗಿದವು. ಅಂತರ ರಾಷ್ಟ್ರೀಯ ಮಟ್ಟದ ನಾಯಕರು ಸೂಕಿಗೆ ಮನೋಸ್ತೈರ್ಯ ನೀಡಿ ಆಕೆಗೆ ಬೆಂಬಲಿಸಿದರು. ನೋಬೆಲ್ ಶಾಂತಿ ಪುರಸ್ಕಾರ ಸೂಕಿಯನ್ನಿ ಹುಡುಕಿಕೊಂಡು ಬರ್ಮಗೇ ಬಂತು. ಇಷ್ಟಾದರೂ ಲಜ್ಜೆಗೇಡಿ ಕಮ್ಮ್ಯೂನಿಸ್ಟ್ ಸರಕಾರ ಮಣಿಯಲಿಲ್ಲ. 

ಹಲವು ಏಳು-ಬೀಳುಗಳ ನಂತರ ಸೂಕಿಯ ಶಾಂತಿಯ ಕಿಚ್ಚಿಗೆ ಮಣಿದು ಬರ್ಮಾ ಸರಕಾರ 2010ರಲ್ಲಿ ಆಕೆಯನ್ನು ದಿಗ್ಬಂಧನದಿಂದ ಬಿಡುಗಡೆಗೊಳಿಸಿತು. ಅಂದಿನಿಂದಲೂ ಹತಾಶರಾಗಿದ್ದ ಜನತೆಯಲ್ಲಿ ಆತ್ಮವಿಶ್ವಾಸವನ್ನು ತುಂಬಿ, ದೇಶದ ಭವಿಷ್ಯದ ದಿನಗಳಲ್ಲಿ ಬರುವ ಸುವರ್ಣಯುಗದ ದಿನಗಳಲ್ಲಿ ಅವರ ಪಾಲನ್ನು ಅವರಿಗೇ ನೀಡಲು ಸೂಕಿ ಕಂಕಣಬದ್ದಳಾಗಿದ್ದಾಳೆ. ಅಷ್ಟು ಕಷ್ಟ-ಕಾರ್ಪಣ್ಯಗಳ ನಡುವೆಯೂ ಸುಕ್ಕೂ ಚದುರದೆ ಆಕೆಯದು ಎನ್ನುವಂತೆ ಉಳಿದಿರುವುದು ಬರೀ ಆಕೆಯ "ಮಂದಹಾಸ" & "ಮನೋಸ್ತೈರ್ಯ".

 ಚೈತ್ರದ ಚಿಗುರಿಗಾಗಿ ಕೋಗಿಲೆ ಮತ್ತೆ ಹಾಡಲಿದೆ... ಕಮ್ಯುನಿಸ್ಟ್ ದಳ್ಳುರಿಯಲ್ಲಿ ದಹಿಸಿದ ಬರ್ಮಾ ಮತ್ತೆ ಪ್ರಜಾಪ್ರಭುತ್ವದ ಹಸಿರು ಸಿರಿಯನ್ನು ಕಾಣಲಿದೆ. ಇದಕ್ಕೆ ಪೂರಕವೆಂಬಂತೆ ಬರ್ಮದಲ್ಲಿ ನೆಡೆಯುತ್ತಿರುವ ಚುನಾವಣೆಯಲ್ಲಿ ಸೂಕಿ ಜಯಗಳಿಸಿದ್ದಾಳೆ. ಇದರೊಂದಿಗೆ ಅಧಿಕೃತ ಮುದ್ರೆಯೊಂದಿಗೆ ಸೂಕಿ ಬರ್ಮಾ ಸಂಸತ್ತಿಗೆ ಕಾಲಿಡುವುದು ಖಚಿತವಾಗಿದೆ. ಗೆದ್ದರೆ ಬರ್ಮಾ ಗಣರಾಜ್ಯದ ಅಧ್ಯಕ್ಷೆಯಾಗಿ, ಸೋತರೆ[ಅದಾಗದೆಂಬ ವಿಶ್ವಾಸದಲ್ಲಿ] ವಿರೋಧಪಕ್ಷದ ಅಧ್ಯಕ್ಷೆಯಾಗಿ!!! ಒಟ್ಟಿನಲ್ಲಿ ದಮನಕಾರಿ ಆಡಳಿತದ ವಿರುದ್ದ ದನಿಯೆತ್ತಲು ಸೂಕಿಗೆ ಅವಕಾಶ ಇದ್ದೇ ಇದೆ. "ಸತ್ಯಮೇವ ಜಯತೆ" ನಿರೂಪಿಸಲು ಕಾಲ ತೆಗೆದುಕೊಂಡ ಅವಧಿ ಭರ್ತಿ 21 ವರುಷ.... 66ರ ಚಿರಯವ್ವನೆ ಸೂಕಿ ನಿಜಕ್ಕೂ ನಮ್ಮೆಲ್ಲರಿಗೂಸ್ಪೂರ್ತಿಯ ಚಿಲುಮೆ.

ಮನುಕುಲದ ಮನಸ್ಥಿತಿಯೇ ಹಾಗೆ... ಆದರ್ಶವೆನಿಸುವ ಪ್ರತಿಯೊಂದೂ ಅವರ ಪಕ್ಕದ ಮನೆಯಲ್ಲಿ ನಡೆಯಬೇಕು. ಹಲವು ನೋವುಗಳ ದನಿ ಕೂಡ ಪಕ್ಕದಲ್ಲಿಂದಲೆಲ್ಲೋ ಮೊಳಗಬೇಕೆ ಹೊರತು ನಮ್ಮೊಳಗಲ್ಲ. ಸಮಸ್ತ ಇಸ್ಲಾಂ ದೇಶಗಳ ಆದರ್ಶ ಇಸ್ಲಾಂ ಧರ್ಮಪಾಲಕ ದೇಶದ  ಪ್ರಯೋಗಶಾಲೆಯಾಗಿ ಸಿಕ್ಕಿದ್ದು ನತದೃಷ್ಟ ಆಫ್ಘಾನಿಸ್ತಾನ, ತಮಿಳು ತಲೆಗಳ ಪುಂಡಾಟಗಳಿಗೆ ಮೈದಾನವಾದದ್ದು ಶ್ರೀಲಂಕಾ... ಹಾಗೆ ಬರ್ಮಾ ಕಮ್ಯೂನಿಸ್ಟರ ಪ್ರಯೋಗಶಾಲೆಯಾಗದೆ ಉಳಿಯಲು ಕಾರಣ ಸೂಕಿ.   ಸತ್ತ ಗಂಡನ ಹೆಂಡತಿ ಎಂಬ ಒಂದೇ ಕಾರಣಕ್ಕೆ ಕೊಡಬಾರದ ಅಧಿಕಾರವನ್ನು ಕೊಡಮಾಡುವ ಭಾರತ ಇನ್ನಾದರೂ ಕಾದು-ನೋಡುವ  ತಂತ್ರ ಬಿಟ್ಟು ಸೂಕಿಯ ಬೆಂಬಲಕ್ಕೆ ನಿಲ್ಲುವ ಪ್ರಾಜ್ಞ ನಿಲುವು ತಾಳುವುವುದರೊಂದಿಗೆತಾನೂ ಕೂಡ ತನ್ನ ಜ್ವಲಂತ ಸಮಸ್ಯೆಗಳನ್ನು ಅಂತಹುದೇ ದಿಟ್ಟ-ನೇರ ನಿರ್ಧಾರದಲ್ಲಿ ಬಗೆಹರಿಸಿಕೊಳ್ಳುವ ಜಾಣ್ಮೆಮೆರೆಯಬೇಕು.

ಸೂಕಿಯ ಗೆಲುವಿನೊಂದಿಗೆ ಬುದ್ದ ಕೂಡ ಹಸನ್ಮುಖನಾಗಿದ್ದಾನೆ.ಸೂಕಿ ಅಧಿಕಾರ ಚುಕ್ಕಾಣಿ ಹಿಡಿಯುವುದರೊಂದಿಗೆ ಬರ್ಮಾದ ಸುವರ್ಣಕಾಲ ಶುರುವಾಗುದೆಂಬ ಭರವಸೆಯಲ್ಲಿ 

ನಿಮ್ಮ
ಅವಿ