Monday, July 5, 2010

"ಭಾರತೀಯರಿಗೆ ಆಳುವುದು ಗೊತ್ತಿಲ್ಲ.. ಆಳಿಸಿಕೊಳ್ಳಲಿಕ್ಕೆ ಅವರು ಲಾಯಕ್ಕು"

ಯಾರೋ ತಲೆಗೆ ಹೊಡೆದಂತೆ ತಟ್ಟನೆ ಎಚ್ಚರವಾಯ್ತು. ಹಾಗೆ ಮೊಬೈಲ್ ನೋಡಿದೆ. ರಾತ್ರಿ 2 ಘಂಟೆ ಅಂತ ಹೇಳಿ ನಸು ನಗುತ್ತಿತ್ತು. ಅಸ್ಥ್ತರಲ್ಲೇ ಕುಯ್ನ್ ಕುಯ್ನ್ ಅಂತ ಮೊಬೈಲ್ ಹೊಯ್ಕೊಳ್ಳಲಿಕ್ಕೆ ಶುರು ಮಾಡ್ತು. ಏನಪ್ಪಾ ಇದರ ರಾಗ ಅಂತ ನೋಡಿದ್ರೆ ನನ್ನ ಕೊಲ್ಲೀಗ್ ಅನಂತ ಮೆಸೇಜ್ ಮಾಡಿದ್ದ

"It seems some problem happened in mysore road bcos of bharath band. be carefull. Better don;t come to office tomorrow work from home"

ಹ್ಮ್ಮ್..ಕ್ಷಣ ಕಾಲ ಏನೇನೂ ಅರ್ಥವಾಗಲಿಲ್ಲ... ನಂತರದಲ್ಲಿ ಅರ್ಥವಾಗಲು ಶುರುವಾದ ವಿಷಯಗಳು ಮತ್ತೆ ನಿದ್ದೆ ಮಾಡಲು ಬಿಡಲಿಲ್ಲ..

ಎಲ್ಲಿ ತಪ್ಪಾಯ್ತು? ಯಾರಿಂದ? ಯಾವಾಗಿಂದ? ಹೂಸಿದ್ರೂ, ಕೆಮ್ಮಿದ್ರೂ ಬಂದಿಗೆ ಕರೆಕೊಡೋ ಮೂರೂ ಬಿಟ್ಟ ನಮ್ಮ ರಾಜಕಾರಣಿಗಳಾ? ತಿಳಿದೂ ತಿಳಿದೋ ಅವರು ಕೊಡುವ ಪುಡಿ ಕಾಸಿಗೆ ಕೈಯೊಡ್ಡಿ ಬೇಕೋ ಬೇಡವೋ ಹೇಳುವವರಿಗೆ ವೋಟು ಕೊಟ್ಟು ನಂತರ ವರ್ಷಪೂರ್ತಿ ಶಪಿಸಿ ಮುಂದಿನ ಚುನಾವಣೆಯಲ್ಲಿ ಮತ್ತೆ ಅವನ ಎಂಜಲಿಗೆ ನಿಲ್ಲುವ ನಮ್ಮ ಶ್ರೀ ಸಾಮಾನ್ಯನಾ? ಏನ್ ಮಾಡಿದರೂ ಈ ದೇಶದ ಕಥೆ ಇಷ್ಟೇ ಅಂತ ಹೇಳಿ ವೋಟಿನ ದಿನ ಮಾಲ್, ಮೂವಿ,ಮಸ್ತಿ, ಔಟಿಂಗ್ ಅಂತ ಜವಾಬ್ದಾರಿ ಹೀನರಾಗೋ ನಮ್ಮ ಟೆಕ್ಕಿಗಳಾ? ಯಾರು, ಯಾರು ಇದಕ್ಕೆ ಕಾರಣ? ಆಗ ಅನ್ನಿಸಿದ್ದು.. ಒಹ್ ಇವರಾರೂ ಅಲ್ಲ... ಭಾರತದ ಇಂದಿನ ದುರ್ಗತಿಯ ಬೇರುಗಳು ನಮ್ಮ ನಲವತ್ತೇಳರ ಸ್ವಾತಂತ್ರದ ರಾತ್ರಿಯಿಂದಲೇ ಶುರುವಾಗಿವೆ ಅನ್ನಿಸಿತು.

ಭಾರತದ ಇತಿಹಾಸದ ಅಮೋಘ ಕ್ಷಣ ನಲವತ್ತೇಳರ ಸ್ವಾತಂತ್ರ್ಯ. ಒಂದು ಹನಿ ರಕ್ತ ಹರಿಸದೆ, ಮೂಲ ಬೆಲೆಯನ್ನೇ ಅರಿಯದೆ ನಾವು ಪಡೆದ ಏಕೈಕ ವಸ್ತು "ಸ್ವಾತಂತ್ರ್ಯ". 1857ರಿಂದ 1947ರ ವರಗೆ ಎಲ್ಲರ ಮನದಲ್ಲಿ ಇದ್ದ ಸ್ವಾತ್ರಂತ್ರ್ಯವನ್ನ ಕಾಡಿ ಬೇಡಿ ಪಡೆದ ಕ್ಷಣ ಎಲ್ಲರ ಮನದಲ್ಲಿ ಮೂಡಿದ್ದು "ಮುಂದೆ ಏನು"? ದೇಶವಾಳಲರಿಯದ ಮಧ್ಯಮ ವರ್ಗದ ಶಿಕ್ಷಕ ವೃಂದ, ವಣಿಕ, ಧನಿಕ ಹಾಗು ಹಸಿ ಬಿಸಿ ಯುವಜನರಿಂದಲೇ ತುಂಬಿದ್ದ ಸ್ವಾತಂತ್ರ್ಯ ಸಂಗ್ರಾಮ ಸ್ವಾತಂತ್ರ್ಯದ ನಂತರ ಅವರುಗಳಿಗೆ ತಿಳಿಸಿದ್ದಂತೆ ಕೆಲವು ಜವಾಬ್ದಾರಿಯುತ ಸ್ಥಾನಗಳನ್ನೂ ಕೊಡಮಾಡಬೇಕಾಗಿ ಬಂತು. ದೇಶದ ಪ್ರಗತಿ ಕುರಿತು ದೂ[ದು]ರಾಲೋಚನೆಯಿರುವ, ಆ ದಿಶೆಯಡೆ ದೇಶವನ್ನು ಕೊಂಡೊಯ್ಯುವ ಮುತ್ಸದಿಯ ನಾಯಕತ್ವದ ಪ್ರಶ್ನೆ ಬಂದಾಗ ಎಲ್ಲರೂ ಅದಕ್ಕೆ ಮುಖ್ಯವಾಗಿ ಬೇಕಾದ ವಾಕ್ ಪ್ರತಿಭೆ, english ಭಾಷೆಯಲ್ಲಿನ ಪ್ರಭುತ್ವತೆ ಹೊಂದಿದ್ದೆ ನೆಹರೂರನ್ನೆ ನಾಯಕರನ್ನಾಗಿ ಮಾಡಿ, "ಬಿಡು, ಅವ ಎಲ್ಲ ನೋಡ್ಕೋತಾನ, ನಾಮ್ ಆರಾಮ್ ಇರೋಣು" ಅನ್ನೋ ಮನೋಭಾವನೆಯಲ್ಲಿ ದೊರೆತ ಸ್ವಾತಂತ್ರದ ಅರ್ಥ ಹುಡುಕಲೆತ್ನಿಸಿದರು.

ಶುರುವಾತಿನಲ್ಲಿ ಎಲ್ಲ ಚೆನ್ನಾಗೆ ಕಾಣುತಿತ್ತು. ಹರಿದು ಹಂಚಿದ್ದ ಭಾರತವನ್ನು ಸರದಾರರು ಒಂದುಗೂಡಿಸುವ ಕ್ಷಣದಲ್ಲೇ ಅಂಬೇಡ್ಕರರು ತಮ್ಮ[ನಮ್ಮ] ಸಂವಿಧಾನವನ್ನ ರೂಪಿಸಿದ್ದರು. ಹಿಂಸಾತ್ಮಕವಾಗಿ ರಚಿತವಾದ ಪಾಕಿಸ್ತಾನದಿಂದ ತಪ್ಪಿಸಿಕೊಳ್ಳಲು ಭಾರತ ಸೇರಿದ ಕಾಶ್ಮೀರದ ರಾಜ ಹರಿಸಿಂಗ. ನಮ್ಮದೇ ಸರ್ಕಾರ.. ರಾಮ ರಾಜ್ಯದ ಕನಸು ನನಸಾಯಿತು. ಚರ್ಚಿಲ್ಲನು ಹೇಳಿದ "ಭಾರತೀಯರಿಗೆ ಆಳುವುದು ಗೊತ್ತಿಲ್ಲ.. ಆಳಿಸಿಕೊಳ್ಳಲಿಕ್ಕೆ ಅವರು ಲಾಯಕ್ಕು" ಇನ್ನುವ ಮಾತು ಸುಳ್ಳಾಗುವ ದಿನಗಳಿದ್ದವು ಅವು. ನಮ್ಮ ನೆಹರು ಪ್ರಧಾನಿಯಾಗುವ ತನಕ.

ನಮ್ಮ ದೇಶದ ಅದೃಷ್ಟವೋ , ದುರಾದೃಷ್ಟವೋ ತಿಳಿಯುತ್ತಿಲ್ಲ.. ನೆಹರುಗಳು ಮಾಡಿದ ಹಲವು ಅಕ್ಷಮ್ಯ ತಪ್ಪು ನಡಿಗೆಗಳು ದೇಶವನ್ನು ಶತ ಶತಮಾನದ ನಂತರವೂ ಕಾಡುವ ಸಮಸ್ಯೆಗಳನ್ನು ಬಗ್ಗುಲಲ್ಲಿ ಸೃಷ್ಟಿಸಿದವು.

೧. ಲಕ್ಷಾಂತರ ಜನರ ನೋವಿನ, ಸಾವಿನ ದನಿಯಾಗಿ ರೂಪಿತವಾದ ಪಾಕಿಸ್ತಾನ 1948ರಂದು ನಮ್ಮ ಮೇಲೆ ದಂಡೆತ್ತಿ ಬಂದಾಗ ಸರದಾರರು ಕೊಚ್ಚೆ ನಾಯಿಗೆ ಹೊಡೆಯುವಂತೆ ಯುದ್ದರಂಗದಿಂದ ಅವರನ್ನು ಹೊರ ಹಟ್ಟುವ ಹವಣಿಕೆಯಲ್ಲಿದಾಗ ನಮ್ಮ ಚಾಚ ನೆಹರು ತಮ್ಮ ಮುಸ್ಲಿಂ ಸ್ನೇಹಿತರಿಗಾಗಿ ಗೆಲ್ಲುತ್ತಿದ್ದ ನಮ್ಮ ಸೈನ್ಯವನ್ನು ಹಿಂತೆಗೆದುಕೊಂಡರು. ನಮ್ಮ 2/3ರಷ್ಟು ಕಾಶ್ಮೀರ ನಮ್ಮ ಕೈಬಿಟ್ಟು ಹೋದಾಗ್ಯೂ ನೆಹರು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆ ಮುಂದೆ ತೆಗೆದುಕೊಂಡು ಹೋದರು. ಸೂಜಿಯಲ್ಲಿ ಮಾಡಬೇಕಿದ್ದ ಕೆಲಸವನ್ನ ಬೆಟ್ಟ ಮಾಡಿ ಇಟ್ಟರು. ಪರಿಣಾಮ ಇಂದಿಗೂ ನಾವು ಅನುಭವಿಸುತ್ತಿದ್ದೇವೆ.
೨. ದೇಶ ಅನಾಚೂನವಾಗಿ ಬೆಳೆದು ಬಂದದ್ದೇ ಗ್ರಾಮ ಸ್ವರಾಜ್ಯದ ಆಧಾರದ ಮೇಲೆ. ಲಕ್ಷಾಂತರ ಹಳ್ಳಿಗಳು ಉದ್ಧಾರವಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ತತ್ವದ ನಿಲುಕಲ್ಲೇ ಭಾರತ ಅಸ್ತಿತ್ವದಲ್ಲಿತ್ತು. ಆದರೆ ನೆಹರೂ ಅವೆಲ್ಲವನ್ನೂ ತಿರಸ್ಕರಿಸಿದರು. ದೊಡ್ಡ ದೊಡ್ಡ ಯಂತ್ರಗಳು ಗೃಹಕೈಗಾರಿಕೆಗಳನ್ನು ಮೀರಿ ಬೆಳೆಯಬೇಕು. ಆಗ ದೇಶದಲ್ಲಿ ಹಣ ಸಂಗ್ರಹವಾಗುತ್ತದೆ. ಆ ಹಣ ಬಡವರಿಗೂ ಸೇರುತ್ತದೆ ಎಂಬ ಯೋಚನೆಯಲ್ಲಿ, ದ್ವಂದ್ವ ನಿಲುವಿನ ಗಾಂಧೀಜಿಯಂತಹ ಮಹಾನ್ ವ್ಯಕ್ತಿಯೊಂದಿಗೆ ಒಡನಾಡಿಯೂ ತಮ್ಮ ಆ ತನಕದ ಆಡಂಬರತನವನ್ನು ಬದಲಿಸಿಕೊಂಡು ಸರಳವಾಗಲಾರದ ವ್ಯಕ್ತಿ, ಸರಳವಾಗಿದ್ದ ದೇಶವನ್ನು ದಿಢೀರ್ ಸಿರಿವಂತಿಕೆಯತ್ತ ಎಳೆದು ತರುವ ಯೋಚನೆಗೆ ಶುರುವಿಟ್ಟರು.
ನೆಹರೂ ಸ್ವತಃ ಆರ್ಥಿಕ ತಜ್ಞರಲ್ಲ , ಯಂತ್ರಗಳ ಬಗ್ಗೆ ಮಾತನಾಡಬಲ್ಲ ಇಂಜಿನಿಯರೂ ಆಗಿರಲಿಲ್ಲ. ಅವರು ಬರಿ ಕನಸುಗಾರರಾಗಿದ್ದರು. ತಾವು ಕಂಡ ಕನಸನ್ನು ನನಸುಗೊಳಿಸಬೇಕು. ಆ ಮಾರ್ಗದಲ್ಲಿರುವ ತೊಡಕುಗಳು ಏನೇ ಇರಲಿ, ಅದರಿಂದ ದೇಶ ನಿರ್ನಾಮವಾಗಿಯೇ ಹೋಗಲಿ ಚಿಂತೆ ಇಲ್ಲ. ಕನಸು ಮಾತ್ರ ಸಾಕಾರವಾಗಬೇಕು ಎಂಬ ಹುಚ್ಚು ಅವರಲ್ಲಿತ್ತು! ಅದಕ್ಕೆ ಮೆಹಲೋನವೀಸ್ ಎಂಬುವವನ ಜೊತೆ ಪಡೆದರು.ವಾಸ್ತವವಾಗಿ ಆಗತಾನೆ ಸ್ವಾತಂತ್ರ್ಯ ಪಡೆದ ದೇಶ ತನ್ನ ಆಂತರಿಕ ಶಕ್ತಿ ಯಾವುದೆಂದು ಗುರುತಿಸಿಕೊಂಡು ಅದನ್ನು ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ಬೆಳೆಯಬೇಕು. ಅದನ್ನು ಬಿಟ್ಟು, ಅವರು ಹಾಗೆ ಬೆಳೆದಿದ್ದಾರೆ; ಇವರು ಹೀಗೆ ಬೆಳೆದಿದ್ದಾರೆ ಎನ್ನುತ್ತಾ ಕುಳಿತರೆ, ಅವರನ್ನು ಅನುಸರಿಸುವ ಪ್ರಯತ್ನ ಮಾಡಿದರೆ ಖಂಡಿತ ಬೆಳವಣಿಗೆ ಅಸಾಧ್ಯ. ಭಾರತದ ಮಟ್ಟಿಗೆ ಹೇಳುವುದಾದರೆ, ಗ್ರಾಮಶಕ್ತಿ ಇಲ್ಲಿನ ಆಂತರಿಕ ಶಕ್ತಿ. ಅಲ್ಲಿ ಕಳೆದು ಹೋಗುತ್ತಿರುವ ನಮ್ಮವರ ಕೊಡು-ಕೊಳ್ಳು ಸಂಸ್ಕೃತಿಯನ್ನ,ಕೆಲಸಗಳನ್ನು ಬಳಸಿಕೊಳ್ಳಬೇಕಿತ್ತು. ಕೃಷಿ ಕಾರ್ಯದಲ್ಲಿ ಕ್ಷಮತೆಯನ್ನು ಹೆಚ್ಚಿಸುವ ಯತ್ನ ಮಾಡಬೇಕಿತ್ತು. ಆದರೆ ನೆಹರೂ ಅವೆಲ್ಲವನ್ನು ಬದಿಗಿಟ್ಟು ಕೈಗಾರಿಕೀಕರಣ ಮಾಡುವ ಪ್ರಯತ್ನ ಶುರುವಿಟ್ಟರು. ಅದಕ್ಕೆ ಹಣ ಎಲ್ಲಿಂದ ತರಬೇಕು? ಸಾಲ ತಂದರು. ಮೊದಲ ಬಾರಿಗೆ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಲ ಎತ್ತುವ ಚಾಳಿ ಶುರುವಿಟ್ಟಿತು. ಆ ಹಣವನ್ನು ನೆಹರೂ ಎಲ್ಲೆಲ್ಲಿ ಹೂಡಿಕೆ ಮಾಡಿದರೋ ಅಲ್ಲಿಂದ ಹೇಳುವಷ್ಟು ಹಣ ಹುಟ್ಟಲಿಲ್ಲ. ಮತ್ತೆ ಸಾಲ-ಮತ್ತೆ ನಷ್ಟ. ಈ ಚಕ್ರ ಎಲ್ಲಿಯವರೆಗೂ ಮುಂದುವರೆಯಿತೆಂದರೆ, ಇಂದು ಸಾಲದ ಮೇಲೆಯೇ ಬದುಕುವ ಚಟವನ್ನು ನಮ್ಮ ಮೂರು ಬಿಟ್ಟ ರಾಜಕಾರಣಿಗಳು ರೂಡಿಸಿಕೊಂಡಿದ್ದಾರೆ. ದೇಶ ಅಕ್ಷರಶಃ ಸಾಲದ ಉರುಳಲ್ಲಿ ಸಿಕ್ಕು ಒದ್ದಾಡುತ್ತಿದೆ. ನೆಹರೂ ಹುಟ್ಟಿಸಿದ ಆ ಆರ್ಥಿಕ ಕೂಸು ನೆಹರೂ ಕಾಲದಲ್ಲಿಯೇ ಸತ್ತುಹೋಯಿತು. ಈ ದೇಶದ ಜನ ಅಪಾರ ತೆರಿಗೆ ಕಟ್ಟುವ ಮೂಲಕ ಆ ಕೂಸಿಗೆ ಕೃತಕ ಉಸಿರಾಟ ಮಾಡುತ್ತಿದ್ದಾರೆಯೇ ಹೊರತು ಮತ್ತೇನಲ್ಲ!

ನೆಹರೂ, Public sector Unitಗಳನ್ನ ಸರ್ಕಾರದ ವಶಕ್ಕೆ ಪಡೆದರು. ಗೃಹಕೈಗಾರಿಕೆಗಳನ್ನು ನಡೆಸುವುದು, ಅಲ್ಲಿನ ವಸ್ತುಗಳನ್ನು ಮಾರುಕಟ್ಟೆಗೊಯ್ಯುವುದು ಇವಲ್ಲಾ ಸಾಧ್ಯವಾದಷ್ಟೂ ಕಷ್ಟವಾಗುವಂತೆ ನೋಡಿಕೊಂಡರು. ಲೈಸೆನ್ಸು, ಪರ್ಮಿಟ್ಟು ಎಂದೆಲ್ಲ ರಗಳೆಗಳು ಶುರುವಾಗಿದ್ದು ಇದೇ ಕಾಲಕ್ಕೆ. ಸಮಾಜವಾದದ ಹೆಸರಲ್ಲಿ, ಸರ್ವರಿಗೂ ಸಮಪಾಲು ಎನ್ನುತ್ತಿದ್ದ ನೆಹರೂ ಕೊನೆಗಾಲಕ್ಕೆ ಈ ರೀತಿ ಬದಲಾದದ್ದು, ಬಡವರ ಶೋಷಣೆಗೆ ನಿಂತದ್ದು ಎಲ್ಲರಿಗೂ ಅಚ್ಚರಿತಂದಿತ್ತು. ಬಡತನ ನಿರ್ಮೂಲನೆಗೆ ಎಂದು ಶುರುವಿಟ್ಟ ಆರ್ಥಿಕ ಯೋಜನೆಗಳು ಬಡವರ ನಿರ್ಮೂಲನೆ ಮಾಡಿದ್ದು ಖಂಡಿತ ಸುಳ್ಳಲ್ಲ.

ಇದೇ ವೇಳೆಗೆ, ಭಾರತದ ನಂತರ ಸ್ವಾತಂತ್ರ್ಯ ಪಡೆದಿದ್ದ ರಾಷ್ಟ್ರಗಳೆಲ್ಲ ಮಿಂಚಿನಂತೆ ಬೆಳೆದವು. ರಾಷ್ಟ್ರದ ಅಂತಃಶಕ್ತಿಯನ್ನು ಗುರುತಿಸಿ, ನಿಸ್ವಾರ್ಥತೆಯಿಂದ ರಾಷ್ಟ್ರವನ್ನು ಮುನ್ನಡೆಸಿದವರೆಲ್ಲ ಜಗತ್ತಿನ ಭೂಪಟದಲ್ಲಿ ಕಂಗೊಳಿಸುವಂತೆ ಬೆಳೆದರು. ಅಲ್ಲಿ ಬೆಳೆದದ್ದು ವೈಯಕ್ತಿಕವಾಗಿ ಆ ವ್ಯಕ್ತಿಗಳಲ್ಲ , ರಾಷ್ಟ್ರ!. ಆದರೆ ಭಾರತದಲ್ಲಿ ನೆಹರೂ ಹಠಕ್ಕೆ ಬಿದ್ದು, ತಾವು ಬೆಳೆಯಬೇಕೆಂದರು. ಜಗತ್ತಿನ ಎಲ್ಲ ರಾಷ್ಟ್ರಗಳು ತನ್ನ ಬಗ್ಗೆಯೇ ಮಾತಾಡಬೇಕೆಂದು ಆಶಿಸಿದರು. ಆ ಆಸೆಯ ಪೂರೈಕೆಗಾಗಿ ದೇಶದ ಹಿತಾಸಕ್ತಿಗಳನ್ನು ಬಲಿಕೊಡಲಿಕ್ಕೂ ಅವರು ಹಿಂದೆ-ಮುಂದೆ ನೋಡಲಿಲ್ಲ!!

ಭಾರತ ಸ್ವತಂತ್ರವಾಗಿ ಬಹುಕಾಲದ ನಂತರ ಅಕಾರ ಪಡೆದ ಸಿಂಗಾಪೂರದ ಲೀ ಕ್ವಾನ್‌ಯೂರನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಸೂಕ್ತ. ಸ್ಪಷ್ಟ ಉದ್ದೇಶ, ಚಿಂತನೆಗಳೊಂದಿಗೆ ದೇಶವನ್ನು ಎತ್ತರಕ್ಕೆ ಬೆಳೆಸಬೇಕೆಂಬ ಹಠಕ್ಕೆ ಬಿದ್ದ ಕ್ವಾನ್‌ಯೂ ಅಂತಾರಾಷ್ಟ್ರೀಯ ಮಟ್ಟದಿಂದ ವ್ಯಾಪಾರಿಗಳನ್ನು ಸಿಂಗಾಪೂರಕ್ಕೆ ಸೆಳೆದರು. ಅದೇ ವೇಳೆಗೆ ಸಿಂಗಾಪೂರದ ಕಲೆ ಜಗತ್ತು ಮೆಚ್ಚುವಂತೆ ನೋಡಿಕೊಂಡರು. ಸಿಂಗಪೂರ್ ನೋಡುತ್ತ, ನೋಡುತ್ತ ಕಣ್ಣು ಕುಕ್ಕುವ ನಗರವಾಗಿಬಿಟ್ಟಿತು. ಕ್ವಾನ್‌ಯೂ ಒಮ್ಮೆ ಮಾತನಾಡುತ್ತ, ‘ಹೊರಗಡೆಯಿಂದ ಬರುವ ತಂತ್ರಜ್ಞಾನ, ಬಂಡವಾಳವನ್ನು ಸಿಂಗಾಪೂರ ಸ್ವಾಗತಿಸುತ್ತಿದೆ. ಆದರೆ ಆ ನೆಪದಲ್ಲಿ ಅದು ತನ್ನತನವನ್ನು ಕಳೆದುಕೊಳ್ಳಲು ಸಿದ್ಧವಿಲ್ಲ’ ಎಂದಿದ್ದರು. ‘ನಾಯಕರು, ಅಕಾರಿಗಳು, ನಿರ್ಣಯ ಮಾಡಬಲ್ಲ ಜನ ಇವರೆಲ್ಲ ಮೊದಲು ಶಿಸ್ತನ್ನು ಪಾಲಿಸಬೇಕು. ಶಿಸ್ತನ್ನು ಇತರರ ಮೇಲೆ ಹೇರುವ ಮುನ್ನ ಅದನ್ನು ಅನುಸರಿಸಿ ತೋರಿಸಬೇಕು. ಅವರು ಮೊದಲು ಭ್ರಷ್ಟಾಚಾರರಹಿತರಾಗಿ ಜನರಿಗೆ ಉದಾಹರಣೆಯಾಗಬೇಕು’ ಎಂದೂ ಹೇಳಿದ್ದರು. ಅವೆಲ್ಲ ನೆಹರೂ ಕಿವಿಗೆ ಬೀಳುವುದು ಸಾಧ್ಯವೇ ಇರಲಿಲ್ಲ. ಬಿದ್ದರೂ ಕ್ವಾನ್‌ಯೂ ಹೇಳಿದ ಯಾವುದನ್ನೂ ಅವರಿಗೆ ಮಾಡಿ ತೋರಿಸುವುದು ಸಾಧ್ಯವಿರಲಿಲ್ಲ. ಶಿಸ್ತು, ಚಿಂತನೆಗಳಲ್ಲಿನ ಸ್ಪಷ್ಟತೆ, ಇವು ನೆಹರೂ ಪಾಲಿಗೆ ದೂರ-ಬಹುದೂರ! ಚೆಂದದ ಬಟ್ಟೆ, ಭಾಷಣ, ಹೊಗಳುಭಟರ ಸಹವಾಸ ಅವರಿಗೆ ಹೇಳಿ ಮಾಡಿಸಿದಂಥವಾಗಿದ್ದವು!
‘ನಿಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಸೂಕ್ತ ಅವಕಾಶಕೊಡುತ್ತಿಲ್ಲ. ಅವರಿಗೆ ತಮ್ಮ ಸಾಧನೆ ತೋರ್ಪಡಿಸಲು ಅನುಕೂಲವಾಗುವಂತಹ, ಆರ್ಥಿಕ-ಸಾಮಾಜಿಕ-ರಾಜಕೀಯ ಪರಿಸರದ ನಿರ್ಮಾಣ ಮಾಡಿಕೊಡುತ್ತಿಲ್ಲ. ಇದೇ ಭಾರತೀಯರು ಸಿಂಗಾಪೂರಕ್ಕೆ ಬಂದರೆ ಅದ್ಭುತ ಸಾಧನೆ ಮಾಡುತ್ತಾರೆ. ಆದರೆ ಇಲ್ಲಿ ಅವರಿಂದ ಸಾಧ್ಯವಿಲ್ಲ’ ಮುಂತಾದ ವಿಚಾರಗಳನ್ನು ಮನಸ್ಸಿಗೆ ನಾಟುವಂತೆ ಹೇಳಿ ‘ಭಾರತ ಬೆಳೆದರೆ ನಮಗೆ ಲಾಭವಿದೆ. ಅದಕ್ಕೆ ಸ್ವಾರ್ಥದಿಂದ ಭಾರತ ಬೆಳೆಯಲಿ ಎಂದು ಆಶಿಸುತ್ತಿದ್ದೇನೆ’ ಎಂದು ಕ್ವಾನ್‌ಯೂ ಹೇಳಿದ್ದರು.
ಏಷ್ಯಾದ ಬಹುತೇಕ ರಾಷ್ಟ್ರಗಳು ಹೀಗೆ ಭಾರತ ಆರ್ಥಿಕವಾಗಿ ಶಕ್ತಿಯುತವಾಗುವುದನ್ನು ಕಾಯುತ್ತ ಕುಳಿತಿದ್ದವು. ದಶಕಗಳಷ್ಟು ದೀರ್ಘಕಾಲ ಕಾದವು. ಭಾರತ ಪ್ರಬಲವಾಗುವ ಬದಲು, ಆರ್ಥಿಕವಾಗಿ ದುರ್ಬಲವಾಗುತ್ತ ಸಾಗಿದಂತೆಲ್ಲ ಹತಪ್ರಭವಾದವು. ಜಪಾನ್-ಚೀನಾಗಳ ಮೊರೆಹೊಕ್ಕು ಸುಮ್ಮನಾದವು. ನೆಹರೂ ಯೋಜನೆಗಳ ಮೇಲೆ ಯೋಜನೆಗಳನ್ನು ರೂಪಿಸಿದರು. ಪ್ರತಿಯೊಂದೂ ಬಡ ಭಾರತದಲ್ಲಿ ಸಂಪತ್ತನ್ನು ಸೃಷ್ಟಿಸುವ (ನೆನಪಿಡಿ! ಸಂಪತ್ತನ್ನು ಗಳಿಸುವುದಲ್ಲ ) ಯೋಜನೆಗಳೇ ಆದವು. ಅದಕ್ಕೆ ಸಾಲ ತರಲಾಯಿತು. ತಂದ ಸಾಲದಲ್ಲಿ ಬಹುಪಾಲು ನೆಹರೂ ಮತ್ತವರ ತಂಡಕ್ಕೇ ಖರ್ಚಾಯಿತು. ಮಂತ್ರಿಗಳು -ರಾಜಕಾರಣಿಗಳು-ಅಕಾರಿವರ್ಗ ಇವರೆಲ್ಲರ ಖರ್ಚುವೆಚ್ಚ ಅಷ್ಟು ಅಪಾರವಾಗಿತ್ತು!

ಭಾರತದಲ್ಲಿ ಹುಟ್ಟುತ್ತಿರುವ -ಇನ್ನೂ ಹುಟ್ಟದಿರುವ ಮಗುವೂ ಕೂಡ ಸಾಲದ ಹೊರೆ ಹೊರಲೇಬೇಕಾಯಿತು. ಮತ್ತು ಪರಿಸ್ಥಿತಿಗಳನ್ನು ಅವಲೋಕಿಸಿದ ರಾಷ್ಟ್ರಪತಿ ಡಾ ಬಾಬು ರಾಜೇಂದ್ರ ಪ್ರಸಾದರು ದ್ವಿತೀಯ ಪಂಚವಾರ್ಷಿಕ ಯೋಜನೆ (೨ನೇ ಜೂನ್ ೧೯೫೭)ಯ ಮುನ್ನ ನೆಹರೂಗೆ ಪತ್ರ ಬರೆದರು, ‘ನಾವು ಯೋಜನೆಗಳಲ್ಲಿ ತೊಡಗಿಸುತ್ತಿರುವ ಹಣ ಸರಿಯಾಗಿ ಬಳಕೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ಗಮನಿಸಲಿಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಭಾವಿಸಿದ್ದೇನೆ…. ಹಾಗೇನಾದರೂ ಆಗದಿದ್ದಲ್ಲಿ, ಜನರ ಬೆವರಿನ ಹಣ, ತ್ಯಾಗದ ಹಣ ವಿಪತ್ತಿಗಾಗಿ ಖರ್ಚಾದಂತಾಗುತ್ತದೆ. ನಾವು ಎರಡನೇ ಪಂಚವಾರ್ಷಿಕ ಯೋಜನೆಗಳಿಗೆಂದೇ ಜನರ ಮೇಲೆ ತೆರಿಗೆಯ ಭಾರ ಹೇರಿದ್ದೇವೆ. ಆದರೆ ಇದೇ ಸಂದರ್ಭದಲ್ಲಿ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತರಲು, ಆಡಳಿತಕ್ಕೆಂದು ಮಾಡುತ್ತಿರುವ ಖರ್ಚನ್ನು ಕಡಿತಗೊಳಿಸಲು ಯಾವ-ಯಾವ ಕ್ರಮಗಳನ್ನು ಕೈಗೊಂಡಿದ್ದೇವೆಂಬುದು ನನಗೆ ತಿಳಿಯುತ್ತಿಲ್ಲ. ಹನಿ ಹನಿ ಸೋರಿ ಅದು ಖಾಲಿಯೂ ಆಗಬಹುದು. ಅದಕ್ಕೆ ಪ್ರತಿಯೊಂದು ವಿಭಾಗಗಳೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಯಾವುದೇ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಅದು ನಮ್ಮ ಆರ್ಥಿಕ ಪರಿಸ್ಥಿತಿಗೆ ಸೂಕ್ತವಾಗಿ ಹೊಂದಾಣಿಕೆಯಾಗುವಂತಿರಬೇಕು. ಕೊರತೆ ನಿರ್ಮಾಣವಾಗಿ ಜನರ ಮೇಲೆ ತೆರಿಗೆಯ ಭಾರ ಅಕವಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಇರಬೇಕು’ ಎಂದೆಲ್ಲ ಬುದ್ಧಿಮಾತು ಹೇಳಿದ್ದರು.'

ಕೇಳುವ ವ್ಯವಧಾನ ನೆಹರೂಗಿರಲಿಲ್ಲ. ಆ ಪತ್ರ ಅದ್ಯಾವ ಬುಟ್ಟಿ ಸೇರಿತೋ ದೇವರೇ ಬಲ್ಲ.

ನೆಹರೂ ಪಾಲಿಗೆ ಸರ್ಕಾರ ನಡೆಸುವುದೆಂದರೆ ಐಷಾರಾಮಿ ಹೋಟೇಲು ನಡೆಸಿದಂತೆ. ಅಲ್ಲಿ ಎಲ್ಲವೂ ವೈಭವೋಪೇತವಾಗಿರಬೇಕು. ಅದಕ್ಕೆ ಅಗತ್ಯವಿರುವಷ್ಟು ಹಣ ದೊರೆಯದಿದ್ದರೆ ಸಾಲವಾದರೂ ತರಬೇಕು. ಇದು ಅವರ ಚಿಂತನೆ. ಅದಕ್ಕೆ ತಕ್ಕಂತೆ ಭಾರತ ಒಂದು ವೈಭವೋಪೇತ ಹೋಟೆಲಿನಂತಾಯಿತೇ ಹೊರತು ರಾಷ್ಟ್ರವಾಗಲಿಲ್ಲ, ಶಕ್ತಿಯಾಗಲಿಲ್ಲ!

ಯೋಜನೆಗಳ ಹೆಸರಿನಲ್ಲಿ ಖರ್ಚು ಮಾಡಿದ ಒಂದೊಂದು ಹಣವೂ ಸೇರಬೇಕಾದ ಸ್ಥಳ ಸೇರಲಿಲ್ಲ. ಕೆಲಸವೇನೋ ಬೇಕಾದಷ್ಟಾಯ್ತು. ಆದರೆ ಗುಣಮಟ್ಟ ಕಳಪೆಯಾಯಿತು. ೧೯೫೨-೫೩ರಲ್ಲಿ ಒಂದು ಕೊಳವೆ ಬಾವಿ ೨೦೦ ಎಕರೆಗಳ ಭೂಮಿಗೆ ನೀರುಣಿಸಲು ಶಕ್ತವಾಗಿದ್ದರೆ, ಪಂಚವಾರ್ಷಿಕ ಯೋಜನೆಗಳ ಫಲವಾಗಿ ಸಿಕ್ಕಸಿಕ್ಕಲ್ಲಿ ಕೊರೆದ ಕೊಳವೆ ಬಾವಿಗಳು ೧೯೫೫-೫೬ರ ವೇಳೆಗೆ ಸರಾಸರಿ ೬೦ ಎಕರೆ ಭೂಮಿಯನ್ನು ಮಾತ್ರ ತಣಿಸಬಲ್ಲವಾಗಿದ್ದವು. ಹಣ ಸುರಿದದ್ದು ವ್ಯರ್ಥವಾಗಿತ್ತು. ಸರ್ಕಾರ ಜನ ಮಾಡುತ್ತಿದ್ದ ಕೆಲಸಗಳನ್ನು ತಾನೇ ಮಾಡಲು ಮುಂದಾದ್ದರಿಂದ ಜನರೂ ಆಲಸಿಗಳಾದರು. ಕೆರೆ ಹೂಳೆತ್ತಬೇಕಿದ್ದರೂ ಸರ್ಕಾರದ ಮರ್ಜಿಗೆ ಕಾಯಲು ಶುರುವಿಟ್ಟರು. ಇಡಿಯ ದೇಶ ನೈತಿಕ ತಳಹದಿಯನ್ನು ಕಳೆದುಕೊಳ್ಳಲು ಶುರುವಿಟ್ಟಿತು.

೩. ಚೀನಾದೊಂದಿಗೆ ಹಿಂದಿ-ಚೀನೀ ಭಾಯಿ ಭಾಯಿ ಎಂಬ ಎಡಬಿಡಂಗಿ ಸಿದ್ದಾಂತದಲ್ಲಿ ಹೆಣಗಿ ಸಾರಿರಾರು ಚದರ ಮೈಲಿ ಭೂಮಿಯನ್ನೂ, ಸಾವಿರಾರು ಧೀರ ಯೋಧರನೂ ಚೀನಾಗೆ ಬಲಿಕೊಟ್ಟ ನೆಹರು ನಂತರದಲ್ಲೂ ತಮ್ಮ ಅನುಭವಗಳಿಂದ ಪಾಠಕಲಿಯಲಿಲ್ಲ. ನಂತರದಲ್ಲಿ ಜನತೆ ಎಚ್ಚೆತ್ತು ಅಯ್ಯಯ್ಯೋ ಏನೇನೂ ಸರಿಯಿಲ್ಲ.. ನೆಹರು ಅಂಥಾ ಹೇಳಿಕೊಳ್ಳುವಂತ ನಂಬಿಕಸ್ತನಲ್ಲ ಎಂದು ತಿಳಿವ ಹೊತ್ತಿಗೆ ಊರು ಹಾಳಾಗಿತ್ತು. ನಂತರ ನಾವು ಹಾಕಿದ ಕೋಟೆ ಬಾಗಿಲಿಗೂ ಚಿಲಕ ಹಾಕಲು ನಾವು ಮರೆತೆವು. ದೇಶದ ಪಕ್ಕೆಯಲ್ಲಿ ರಕ್ತ ಒಸರಲು ಶುರುವಾಯ್ತು. ಭಾರತವೆಂಬ ಹುಚ್ಚಿಯ ಮದುವೆಯಲ್ಲಿ ಉಣ್ಣಲು ಖದೀಮರ ಸಾಲೆ ಕೂತಿತ್ತು.

೪. ಒಡೆದು ಆಳುವ ನೀತಿ ಬಹುಷಃ ಬ್ರಿಟೀಷ್ರಿಗಿಂತ ನಮ್ಮ ನೆಹರೂರಲ್ಲೇ ತುಂಬಾ ಕಲೆಯಾಗಿ ಕೂತಿತ್ತು. ತಮ್ಮ ಕಾಲದಲ್ಲಿ ತಮ್ಮ ಎತ್ತರಕ್ಕೆ ಬೆಳೆಯುವ ಎಲ್ಲಾ ಅರ್ಹತೆ ಇದ್ದ ವಲ್ಲಭ ಭಾಯಿ ಪಟೇಲ್ ರನ್ನು ಗಾಂಧಿ ಜೊತೆಗೂಡಿ ಮೂಲೆ ಗುಂಪು ಮಾಡಿ, ಗಾಂಧೀ ಮರಣಾನಂತರ ನೇಪಥ್ಯಕ್ಕೆ ಸೇರುವಂತೆ ಮಾಡಿದರು. ನಂತರ "After Nehru:Who?" ಅನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿ ಜನತೆ ಉತ್ತರಿಸುವ ಮೊದಲೇ "Ofcourse, it is Indira!" ಎಂದು ಹೇಳಿ ಅಮೋಘ ಮುತ್ಸದಿ ಶಾಸ್ತ್ರಿಯವರನ್ನು ರಾಜಕೀಯವಾಗಿ ಮುಗಿಸಿದರು. ಗಾಂಧಿಯನ್ನು ಕೊಂದ ಗೋಡ್ಸೆಯ ಪರವಾಗಿ ವಾದಮಾಡಲು ಸಿದ್ದರಿದ್ದ ಅಂಬೇಡ್ಕರರನ್ನು ದಲಿತ, ಹಿಂದುಳಿದ ವರ್ಗಗಳ ನಾಯಕನಿಂದ ಮೇಲೇರುವ ಒಂದು ಅವಕಾಶವನ್ನು ನೆಹರು ಕೊಡಮಾಡಲಿಲ್ಲ. ಸ್ವಾತಂತ್ರ್ಯಗಳಿಸಲು ಮಡಿದ ಲಕ್ಷಾಂತರ ಜನರ ಪ್ರತಿನಿಧಿ ತಾನೆಂಬುದನ್ನು ಮರೆತು ಇಡೀ ದೇಶವನ್ನೇ ತಮ್ಮ ಮನೆಯ ಚಕ್ಕ-ಬಾರಾ ಆಡುವ ಆಟದ ಮನೆ ಎಂಬಂತೆ ನೋಡಿದರು.

ನಂತರದಲ್ಲಿ ಶುರುವಾದದ್ದೇ ನೆಹರೂರ ಕ್ಷಮಿಸಲಾಗದ ತಪ್ಪುಗಳಿಗೆ ತೇಪೆ ಹಚ್ಚುವ ಕೆಲಸ. ಇಂದಿರಾ ಆಳಿದ ಅಷ್ಟೂ ವರ್ಷಗಳ ಕಾಲ ಅವರಪ್ಪ ಮಾಡಿದ ತಪ್ಪುಗಳಿಗೆ ಬೆಲೆ ತೆತ್ತುತ್ತಲೇ ಹೋದರು.. ಬೆಲೆ ತೆರುವ ಭರದಲ್ಲಿ ಅಪ್ಪನ ಉತ್ತರಾಧಿಕಾರಿಯಾಗಿ ಅವರೂ emergency, ಸಂಜಯನ ಪುಂಡಾಟದೊಂದಿಗೆ ಭಾರತಕ್ಕೆ ಲಂಚಾವತಾರದ ಬೃಹತ್ ದರ್ಶನ ಮಾಡಿಸಿದರು. ಇಂದಿರೆಯ ಅಂಕ ಮೀರಿ ಬೆಳೆದ ಸಂಜಯ ಇಂದಿರೆಯ ಹೆಸರು ಮಾಸುವಷ್ಟು ಪ್ರಖ್ಯಾತನಾದ.ಉತ್ತಮ ಚಿಂತನೆಗಳಿದ್ದಾಗ್ಯೂ ಉತ್ತಮ ಮಾರ್ಗದರ್ಶನದ ಕೊರತೆಯಿಂದಾಗಿ ತನ್ನ, ತನ್ನಮ್ಮನ ಭವಿಷ್ಯಕ್ಕೆ ಎರವಾಗಿ ಎಲ್ಲ ಸರಿಯಾಯಿತೆನುವಾಗ ಕಾಣದ ಲೋಕಕ್ಕೆ ಹೊರಟೆ ಹೋದ. ನಂತರದ್ದು ಇಂದಿರಮ್ಮನ operation Blustar. ನಮ್ಮ ನೆಲದಲ್ಲಿ ಮತ್ತೊಂದು ಪಾಕಿಸ್ತಾನ ಹುಟ್ಟುವುದನ್ನು ತಡೆದ ಇಂದಿರಾ ನಂತರದಲ್ಲಿ ಸಿಕ್ಖರ ಗುಂಡಿಗೆ ಬಲಿಯಾಗಿಹೋದರು.
ಇಂಥಾ ದಾರುಣ ಭಾರತದ ಪಾಪದ ಕೊಡಕ್ಕೆ ತಮ್ಮ ಅಮೂಲ್ಯ ಸೇವೆಯನ್ನು ನೀಡಲು ನಂತರದಲ್ಲಿ ಬಂದಿದ್ದು ರಾಜೀವ್. ತೆಳ್ಳಗೆ ಬೆಳ್ಳಗೆ ಇಟಾಲಿಯನ್ ಹೆಂಡತಿ,ಮಕ್ಕಳೊಂದಿಗೆ ಹೊರಬಂದಾಗ ಭಾರತದ ಜನಕ್ಕೆ ಆತ ಇಂದಿರಾ ಮಗನಾಗಷ್ಟೇ ಕಂಡ. ವಂಶ ಬುದ್ದಿ ಹೋಗುವುದೆಲ್ಲಿಗೆ... ಸಂಪರ್ಕ ಕ್ರಾಂತಿ, ಮುಕ್ತ ಆರ್ಥಿಕತೆಯಂಥಾ ಉಪಯೊಂಗಗಳೊಂದಿಗೆ ಭಾರತಕ್ಕೆ ಬೋಫೋರ್ಸ್, ಹವಾಲ ಮುಂತಾದ ಹಗರಣಗಳ ಸರಮಾಲೆಯೂ ಗಂಟು ಬಿತ್ತು. ಜೊತೆ ಜೊತೆಗೆ ಸಂಜಯನ ಕಾಲದಲ್ಲಿ ಕಾಂಗ್ರೆಸ್ ಸೇರಿದ್ದ ಹೀನಾತಿಹೀನ ಸುಳ್ಳರು, ತಲೆ ಹಿಡುಕರು ಅಧಿಕಾರದ ಆಯಕಟ್ಟಿನಲ್ಲಿ ಜಮಾಯಿಸಿದ್ದರು.


ಭಾರತ ಇನ್ನು ಭಗವಂತ ಬಂದರೂ ಉಳಿಯದ ಸ್ಥಿತಿಗೆ ತಲುಪಿತ್ತು.

ನಂತರದಲ್ಲಿ ಸೋನಿಯಾ,ಧಮ್ಮಿಲ್ಲದ ಬಿ ಜೆ ಪಿ, ನಂತರದಲ್ಲಿ ಕಳ್ಳ, ಸುಳ್ಳ, ಕೊಲೆಗಡುಕ, ತಲೆ ಹಿಡುಕರಿಂದಲೇ ತುಂಬಿದ ಮೈತ್ರಿ ಕೂಟ, ಅದಕ್ಕೆ ಮತ್ತೆ ನಾಯಕಿ ಸೋನಿಯಾ. ದೇಶವೆಂಬ ರಂಗಸ್ತಳದಲ್ಲಿ ದಿನಕ್ಕೊಂದು ನಾಟಕ, ಹಚ್ಚಿದ ಬಣ್ಣ ಆರುವ ಮೊದಲೇ ಮತ್ತೊಂದು ನಾಟಕಕ್ಕೆ ಸಿದ್ದತೆ, ಮಧ್ಯದಲ್ಲಿ ನನ್ನದೆಲ್ಲಿ ಇಡ್ಲಿ ಅಂತ ಕುಯಿನ್ ಕುಯಿನ್ ಮಾಡುವ ನಮ್ಮ ಹೀನ ಸುಳಿ ದೇವೇಗೌಡ & ಕೋ, ತಾಯಿಗಂಡ ತನದ ಸಿ ಪಿ ಐ, ದಗಾಕೊರ ಕರುಣಾನಿಧಿ &ಕೋ, ಜಯಲಲಿತಾ & ಕೋ, ದಲಿತರ ರಕ್ತಹೀರಿ ಅದರಲ್ಲೇ ತನ್ನ ಬಾಳು ಕಂಡಿರುವ ಮಾನ ಎಂದರೇನು ಎಂದು ಅರಿಯದ ಮಾಯಾವತಿ &ಕೋ , ಕೇಡಿ ಲಾಲು &ಕೋ, ಇವರೆಲ್ಲರಲ್ಲೂ ಆಗಾಗ ಮೈತ್ರಿ ಎಂಬ ಸೋಗಿನಲ್ಲಿ ಸೆರಗು ಹಾಸಿ ಕೂರುವ ಕಾಂಗ್ರೆಸ್ಸ್ ಮತ್ತು ಬಿ ಜೆ ಪಿ ಎಂಬ ಜಾರಿಣಿಯರು ಎಲ್ಲ ತಮ್ಮ ವೈಯುಕ್ತಿಕ ಸುಖದಲ್ಲಿ ದೇಶ ಮರೆತರು. ಹೇಳಿ ಇಂಥಾ ದೇಶದಲ್ಲಿ ಕೊಲೆ, ಸುಲಿಗೆ, ಬಂದ್ ಬೇಡ ಬೇಡಾ ಅಂದರೂ ಹೇಗೆ ತಾನೇ ನಿಲ್ಲುತ್ತವೆ.

ಹೇಳಬಹುದು ದೇಶ ಉದ್ದಾರಕ್ಕೆ ನಮ್ಮ ಸಹಕಾರ ಬೇಕೇ ಬೇಕು ಅಂತ. ಸಹಕಾರ ಬಯಸಿದ ಸಂತೋಷ್ ಹೆಗಡೆಗೆ ಸಾರಿ ಕೇಳಿ ಮನ ಒಲಿಸಲಿಕ್ಕೆ ನಮ್ಮ ಯಡ್ಡಿ ಕೈಲಿ ಆಗದೆ ಗಡ್ಕರಿ ಬರಬೇಕಾಯ್ತು. ಆ ಮನುಷ್ಯನದೇ ಆ ಪಾಡಾದರೆ ಸಾಮಾನ್ಯನ ಗತಿ ಏನು.
ಈ ಕೆಳಕಂಡ Rules & Regulations ಕೂಡ ಮಾಡುವಷ್ಟು ಮಾನ, ಮರ್ಯಾದೆ, ಮನುಷ್ಯತ್ವ, ನಿಯತ್ತು, ಕಾಳಜಿ, Common sense, ದೇಶ ಋಣ, ನೈತಿಕತೆ ಕೂಡ ಇಲ್ಲವ ನಮ್ಮ ಹೊಲಸು ತಿನ್ನುವ ಅಧಿಕಾರಿಗಳಲ್ಲಿ?
೧. ದೇಶದ ತುಂಬೆಲ್ಲ 2ಡೇ ಪಕ್ಷ. ಒಂದು "ರೂಲಿಂಗ್ ಪಾರ್ಟಿ" ಮತ್ತೊಂದು " ವಿರೋಧ ಪಕ್ಷ". [ಬೇಕಿದ್ದವರು ರಾಜಕೀಯದಲ್ಲಿರಲಿ ಇಲ್ಲ ಅಂದ್ರೆ ತಿ-ಬಾ ಮುಚ್ಚಿಕೊಂಡು ಮನೆಯಲ್ಲಿರಲಿ]
೨. ಅಕ್ರಮ ಆಸ್ತಿ ಮಾಡುವ ಯಾರಿಗೇ ಆಗಲೀ ಕೆಳ ಕಂಡ ಶಿಕ್ಷೆ ವಿಧಿಸೋದು
ಅ. ಅವರ ಪಾಸಪೋರ್ಟ್, ಎಲೆಕ್ಷನ್ ಕಾರ್ಡ್, ರೇಶನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ಬ್ಯಾಂಕ್ ಅಕೌಂಟುಗಳನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕಿಕೊಳ್ಳುವುದು.
ಆ. ಮಾಸಿಕ ಸಂಬಳ, ನಿವೃತ್ತಿ ಭತ್ಯೆ[ಪೆನ್ಶನ್] ಎಲ್ಲವನ್ನೂ ನಿಲ್ಲಿಸೋದು. [ಕೇಳಬಹುದು ಹೆಂಡತಿ ಮಕ್ಕಳು ಏನು ಮಾಡಬೇಕು ಅಂತ? ಮನೆ ಯಜಮಾನ ಆ ಕಾರ್ಯ ಮಾಡದಂತೆ ತಡೆವಲ್ಲಿ ಮನೆಯವರ ಪಾಲೂ ಇದೆ. ಯಾಕೆಂದರೆ ಎರಡು ಕೈ ಸೇರಿದರೆ ತಾನೇ ಚಪ್ಪಾಳೆ]
೩. ದೇಶದ್ರೋಹಿ ಕೆಲಸ ಮಾಡುವ ಯಾವ ಹಲ್ಕೆಟವರಿಗೇ [ಕಸಬ್, ಆಫ್ಜ್ಯಲ್, ನಕ್ಷಲ್, ಇವರಿಗೆ ಸಪೋರ್ಟ್ ನೀಡುವ ರಾಜಕಾರಣಿಗಳು, ಸ್ತಳೀಯರು] ಆಗಲಿ ಮುಲಾಜಿಲ್ಲದೆ ವಿಚಾರಣೆ ನಂತರ ಮರಣದಂಡನೆ ವಿಧಿಸುವುದು [ಇವಾಗ ಮಾಡುತ್ತಿರುವಂತೆ ಅಲ್ಲ, ಬಟಾ ಬಯಲಲ್ಲಿ ನೂರಾರು ಜನರನ್ನು ಕೊಂದ ಕಸಬ್ಗೆ ವ್ಯರ್ಥವಾಗಿ ವರ್ಷಪೂರ ವಿಚಾರಣೆ, ಅವನಿಗೆ ಜೈಲಿನಲ್ಲಿ ಬಿರ್ಯಾನಿ, ಎ ಸಿ ಸೇವೆ ಹೀಗಲ್ಲ]. ಬೇಕಿದ್ದರೆ ಇಸ್ರೇಲ್ ಸರ್ಕಾರದಿಂದ ನಮ್ಮ ಜನ ಟ್ರೈನಿಂಗ್ ತೆಗೆದುಕೊಳ್ಳಲಿ.
೪. ವರ್ಷಪೂರ್ತಿ ತರಬೇತಿ ನೀಡುವ commandoಗಳನ್ನ ದೇಶಸೇವೆಗೆ ಬಳಸಿಕೊಳ್ಳೋದು [ಸದ್ಯಕ್ಕೆ ಅವರುಗಳು ನಮ್ಮ ಮಾನಗೆಟ್ಟ ರಾಜಕಾರಣಿಗಳ ಮನೆ ಕಾಯುವ ನಾಯಿಗಳಾಗಿದ್ದಾರೆ Sorry to say this but it is the fact]

ಇಷ್ಟಾದರೆ ದೇಶದ ಅರ್ಧಕ್ಕರ್ದ ಸಮಸ್ಯೆ ತಾನಾಗೆ ಸರಿಹೋಗುತ್ತದೆ. ನಂತರದಲ್ಲೂ ಬಂದ್ ನ ಅವಶ್ಯಕತೆ ಬೇಕಾಗ ಬಹುದು [ಯಾಕಂದರೆ ರಾಮರಾಜ್ಯದಲ್ಲೂ ರಾಗಿ ಬಿಸೋದು ತಪ್ಪೋಲ್ವಂತೆ]. ಆಗ
೫. ಮುಷ್ಕರ ಯಾರ ವಿರುದ್ದವಿರುತ್ತದೋ ಅವರಿಗೆ ಮನ ಮುಟ್ಟುವಂತೆ ಮಾಡುವುದು. ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿತು ಅಂತ ಬಸ್ಸಿಗೆ ಬೆಂಕಿ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ, ರೈಲು ನಿಲ್ಲಿಸಿ ಗಂಟಲು ಹರಿದು ಕೊಂಡರೆ ಯಾರೇನೂ ಹೆಚ್ಚಿಸಿದ ಬೆಲೆ ಕಮ್ಮಿ ಮಾಡುವುದಿಲ್ಲ. ಇದು ನಗ್ನ ಸತ್ಯ ಕೂಡ. ಹಿಂದೆ ಇವೆಲ್ಲ ಆಗಿರುವಂಥದ್ದೆ. ಹಾಗೆ ವಿರೋಧವಿತ್ತು ಎಂದಾದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಪಾರ್ಲಿಮೆಂಟಿಗೆ ಮುತ್ತಿಗೆ ಹಾಕಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಮನೆ ಮುಂದೆ ಅಮರಣ ಉಪವಾಸ ಧರಣಿ ಕೂಡಿ.ಇಲ್ಲ... ಇಂಥದ್ದೆಲ್ಲ ನಮ್ಮ ನಾಯಕರಿಂದ ಆಗೋಲ್ಲ.. ಬಂದ್ಗೆ ಕರೆ ನೀಡಿ ಅವರೆಲ್ಲ ಎ ಸಿ ರೂಮಿನಲ್ಲಿ ಬಿರ್ಯಾನಿ, ಮೂಳೆ ತಿನ್ಕೊಂಡು ಕೂತಿರ್ತಾರೆ. ಇಲ್ಲಿ ಅವರಿಂದ ಪುಡಿಗಾಸು ಪಡೆದ ಬುದ್ದಿಗೇಡಿ ಜನ ಹುಯಿಲೆಬ್ಬಿಸಿ ಸಮಾಜದ ಸ್ವಸ್ತ್ಯ ಹಾಳು ಮಾಡ್ತಾರೆ. ಇಂಥಾ ಎಂಜಲು ನಾಯಿಗಳನ್ನು ಮುಖ ಮೂತಿ ನೋಡದೆ ಬಾರಿಸಿ ಅವರ ದನಿಯಡಗಿಸುವುದು. [ಅದನ್ನ ಬೇಕಾದರೆ ಚೀನಾ ಜನರಿಂದ ಕಲಿಯಲಿ, ಅವರು ಸ್ವಾತಂತ್ರವನ್ನ ದಮನ ಮಾಡ್ತಾರೆ, ನಾವು ಸಮಾಜದ ಕಳೆ ಕೀಳಲು ಅದನ್ನ ಬಳೆಸೋಣ]

ಊಪ್ಸ್, ತುಂಬಾನೆ ಬರೆದೆ ಅನ್ಸುತ್ತೆ.. ನಿಜ, ಏನ್ ಮಾಡೋದು ಅನಂತನ ಮೆಸೇಜ್ ನೋಡಿದಾಗ ಇಷ್ಟೆಲ್ಲಾ ಮನಸ್ಸಿನ್ನಲ್ಲಿ ಹಾಗೆ ಬಂದು ಹಗೆ ಹೋಯ್ತು, ಯಾಕೋ ನಿಮ್ಮೊಡನೆ ಹೇಳಿಕೊಳ್ಬೇಕು ಅನ್ನಿಸ್ತು. ಎಲ್ಲೋ ಒಂದು ಆಸೆ, ನಾನು ಹೇಳಿದ ಆ 4 ಅಂಶಗಳು ಒಂದಲ್ಲಾ ಒಂದು ದಿನ ನಮ್ಮ ದೇಶದಲ್ಲಿ ನಿಜವಾಗುತ್ತಾ ಅಂತ? ತುಂಬಾನೆ ಹೊತ್ತಾಯ್ತು. ಆಫೀಸ್ ಮಿಂಚೆಗಳು ದಂಡಿಯಾಗಿ ಬಿದ್ದಿವೆ. ನನ್ನ ಕೆಲಸ ನಾನು ಶುರು ಮಾಡ್ತೀನಿ. ಎಲ್ಲರೂ ತಮ್ಮ ತಮ್ಮ ಪಾಲಿನ ಕೆಲಸ ಸರಿಯಾಗಿ ಮಾಡಿದ್ರೆ ದೇಶದ ಕೆಲಸ ತಾನಾಗೆ ಶುರು ಆಗುತ್ತೆ ಅಲ್ವಾ?. :-)

ಯಾಕೋ ನಿಸಾರರ ಈ ಕವಿತೆ ಅಂದೂ-ಇಂದೂ ತುಂಬಾನೆ ಪ್ರಸ್ತುತ ಅನ್ಸುತ್ತೆ

ಕುರಿಗಳು ಸಾರ್ ಕುರಿಗಳು; ಸಾಗಿದ್ದೇ ಗುರಿಗಳು.ಮಂದೆಯಲಿ ಒಂದಾಗಿ, ಸ್ವಂತತೆಯೆ ಬಂದಾಗಿ
ಇದರ ಬಾಲ ಅದು ಮತ್ತೆ ಅದರ ಬಾಲ ಇದು ಮೂಸಿ
ದನಿ ಕುಗ್ಗಿಸಿ, ತಲೆ ತಗ್ಗಿಸಿ, ಹುಡುಕಿ ಹುಲ್ಲು ಕಡ್ಡಿ ಮೇವು, ಅಂಡಲೆಯುವ ನಾವು ನೀವು
ಕುರಿಗಳು ಸಾರ್ ಕುರಿಗಳು; ನಮಗೊ ನೂರು ಗುರಿಗಳು.

ನಮ್ಮ ಕಾಯ್ವ ಕುರುಬರು: ಪುಟಗೋಸಿಯ ಮೊನ್ನೆ ತಾನೆ ಕಿತ್ತು ಪಂಚೆಯುಟ್ಟವರು.
ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನು ಒತ್ತುವವರು. ಜಮಾಬಂದಿಗಮಲ್ದಾರ ಬರಲು, ನಮ್ಮೊಳೊಬ್ಬನನ್ನ
ಮೆಚ್ಚಿ, ಮಸೆದ ಮಚ್ಚಹಿರಿದು ಕಚಕ್ಕೆಂದು ಕೊಚ್ಚಿ ಕತ್ತ, ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ
ಕಿಸೆಗೆ ಹಸಿರುನೋಟು ತುರುಕಿ, ನುಡಿಗೆ ಬೆಣ್ಣೆ ಹಚ್ಚುವವರು. ಬಿಸಿಲಲ್ಲಿ ನಮ್ಮದೂಡಿ, ಮರದಡಿಯಲಿ ತಾವು ಕೂತು
ಮಾತು, ಮಾತು, ಮಾತು, ಮಾತು: ಮಾತಿನ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು.
ನಮ್ಮ ಮೈಯ ತುಪ್ಪಟವ ರವಷ್ಟು ಬಿಡದ ಹಾಗೆ ಸವರಿ ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು.
ಮಾರಮ್ಮನ ಮುಡಿಗೆ ಕೆಂಪು ದಾಸವಾಳ ಆಯುವವರು ಬೆಟ್ಟಾ ದಾಟಿ ಕಿರುಬ ನುಗ್ಗು, ನಮ್ಮೊಳಿಬ್ಬರನ್ನ ಮುಗಿಸಿ,
ನಾವು 'ಬ್ಯಾ, ಬ್ಯಾ' ಎಂದು ಬಾಯಿ ಬಾಯಿ ಬಡಿದುಕೊಂಡು ಬೊಬ್ಬೆ ಹಾಕುತಿದ್ದರೂ
ಚಕ್ಕಭಾರ ಆಟದಲ್ಲೆ ಮಗ್ನರು ಇವರೆಲ್ಲರು- ನಮ್ಮ ಕಾಯ್ವ ಗೊಲ್ಲರು.ಕುರಿಗಳು ಸಾರ್ ಕುರಿಗಳು


Source: http://vivekabharata.net/

4 comments:

ಬಸವರಾಜ said...

ಸರ್ ನೀವ ಹೇಳಿರೋದು ೧೦೦% ಸತ್ಯ. ನೆಹರು ಮಾಡಿದ ತಪ್ಪುಗಳಿಗೆ ನಾವು ಇನ್ನು ಬೆಲೆ ಕಟ್ಟತಿದ್ದೀವಿ.
ಮತ್ತೆ, ನಮ್ಮ ಜನರೋ ಸುಧೀರ್ಗ ನಿದ್ದೆಯಲ್ಲಿದ್ದಾರೆ. ಭಗವಂತ್ ಬಲ್ಲ, ಇವರ ಯಾವಾಗ ಎಳ್ತಾರೋ

V.R.BHAT said...

Good!

ಮನಮುಕ್ತಾ said...

baraha chennaagide.

Ganga said...

Tumba chennagide....