Saturday, October 15, 2011

ಸತ್ಯ, ಅದು ಹಿಡಿಬೂದಿಯೇ ಇರಲಿ, ವಸ್ತುನಿಷ್ಠವಾಗುತ್ತದೆ.


ಬಹಳ ದಿನಗಳ ನಂತರ ಓದಲೇ ಬೇಕೆಂದು ಓದಿದ್ದು ಕಾರಂತರ "ಆಳಿದ ಮೇಲೆ".ಕಾರಂತರೇ ಪಾತ್ರಧಾರಿಯಾಗಿ ಹುಡುಕ ಹೊರಟಿರುವುದು ಅಳಿದ ಮೇಲೆ ಉಳಿದುದನ್ನು. ‘ಅಳಿದ ಮೇಲೆ’ ಯಲ್ಲಿಯ ಜೀವನದ ಅನ್ವೇಷಣೆ ಮಾತ್ರ ನೈತಿಕ ಹೊಣೆಗಾರಿಕೆಯಿಂದ ಪ್ರೇರಿತವಾದದ್ದು.ಇದರಲ್ಲಿನ ಪಾತ್ರಗಳಲ್ಲಿ ಎದ್ದು ಕಾಣುವ ಅಂಶ ಜೀವನಾಸಕ್ತಿ ಅಥವಾ ಬದುಕಿನಲ್ಲಿ ಶ್ರದ್ಧೆ, ಬದುಕಿನಲ್ಲಿ ಪ್ರಾಮಾಣಿಕತೆ. ’ಅಳಿದ ಮೇಲೆ’ ಕಾದಂಬರಿಯಲ್ಲಿ ಪುಟ ತಿರುಗಿಸಿಕೊಂಡು ಹೋಗಲು ಸಾಧ್ಯವಿಲ್ಲ. ಇದರಲ್ಲಿನ ಪ್ರತಿ ಘಟನೆ ವಿವರಣೆ, ಸಂಭಾಷಣೆಯನ್ನು ಗಮನಿಸಬೇಕು. ಅಲ್ಲಿರುವ ಅನುಭವದ ಪಕ್ವತೆ ನಮ್ಮ ಓಟವನ್ನು ತಡೆದು ನಿಲ್ಲಿಸಿ ಬದುಕಿನ ಸಂಕೀರ್ಣತೆ, ವಿಸ್ತಾರತೆಯತ್ತ ಬೆಟ್ಟು ಮಾಡುತ್ತದೆ.

ನನ್ನನ್ನು ಬಹಳ ಚಿಂತನೆಗೆ ಹಚ್ಚಿದ ಹಲವು ಸಾಲುಗಳಲ್ಲಿ ಕೆಳಗಿನವು ಪ್ರಮುಖವು.
  • ನಾನಿರುವುದು ಈಗ: ಸತ್ತ ಮೇಲಲ್ಲ. ಹುಟ್ಟುವ ಮೊದಲಿದ್ದಿರಲಿಲ್ಲ.ಸತ್ತ ಮೇಲೆಉಳಿಯುವುದು ನನ್ನ ನಡವಳಿಕೆಯ ನೆನಪು; ನಾನಲ್ಲ. ಇಲ್ಲದ ಆ ನನಗಾಗಿ ನಡೆಸುವ ಶ್ರಾದ್ದಾದಿ ಕ್ರಮಗಳುನನಗೆ ಸಮ್ಮತವಲ್ಲ.ನನಗೆ ಸಲ್ಲಿಸುವ ಶ್ರದ್ದೆ, ನನ್ನಲ್ಲಿ ಕಂಡ ಯಾವುದಾದರೂಒಳಿತು ಗುಣವಿದ್ದರೆ, ಅದನ್ನು ತಮ್ಮ ಬಾಳಲ್ಲಿ ತರುವುದು.ಅಂಥಾ ಶ್ರಾದ್ದವನ್ನುಯಾರು ಯಾರಿಗೆ ಬೇಕಾದರೂ ಮಾಡಬಹುದು. ಅದು ಮಾನವತೆಗೆ ಮಾಡುವ ಶ್ರಾದ್ದ;ವ್ಯಕ್ತಿಗಲ್ಲ.ಮಾನವಕುಲ ಚಿರಂತನ, ನಾವು ನಾಲ್ಕು ದಿನಗಳ ಒಂದು ದೃಶ್ಯ.

  • ಒಂದು ಸಮಾಜ, ಒಂದು ಕಾಲ, ಆ ಕಾಲದ ನಂಬಿಕೆ, ಆ ಸಮಾಜದ ವಿವಿಧ ಸನ್ನಿವೇಶಗಳು; ಆ ಸನ್ನಿವೇಶಗಳಲ್ಲಿ ಭಾಗಿಗಳಾದ, ಘಟನೆಗಳಲ್ಲಿ ಪಾತ್ರಗಳಾದ ವಿವಿಧ ಶೀಲ ಜನಗಳಿಂದಾಗಿ ಯಾವುದೋ ಮಾತು ಹೇಳಬೇಕೆನಿಸಿ ಹೊರಬೀಳುತ್ತದೆ. ಆ ಕಾಲ ಸರಿದ ಮೇಲೆ, ಹಿನ್ನಲೆಯಲ್ಲಿ ತಿಳಿದ ವ್ಯಕ್ತಿ ತೀರಿಕೊಂಡ ಮೇಲೆ, ನಮಗೆ ಉಳಿಯುವುದು ಜಡವಾಕ್ಯಗಳು; ಹತ್ತಾರು ಅರ್ಥಗಳನ್ನು ಕೊಡಮಾಡಬಲ್ಲ ಒಂದೊಂದು ಶಬ್ಧಗಳನ್ನೂ ಪೋಣಿಸಿ ಮಾಡಿದಂಥಾ ವಾಕ್ಯ ಸರಣಿಗಳು. ಅವುಗಳ ಮೇಲಿಂದಲೇ-ಬುದ್ದ ಹೀಗೆ ಹೇಳಿದ, ವಾಲ್ಮೀಕಿ ರಾಮನಿಂದ ಹೀಗೆಯೇ ಹೇಳಿಸಿದ , ಕೃಷ್ಣ ಹೇಳಿದ್ದೇ ಇದು- ಎಂಬ ದಿಟ್ಟತನವೇಕೋ? ಹಾಗೆ ಹೇಳಿದವರ ಕಾಲ ಸರಿದು ಸಾವಿರ. ಎರಡು ಸಾವಿರ ವರ್ಷ ಸಂದಿವೆ. ಆ ಕಾಲದ ಪ್ರವಾಹದಲ್ಲಿ ಹಿನ್ನಲೆಯೆಂಬುದು ಕೊಚ್ಚಿ ಹೋಗಿದೆ; ಬಳಸಿದ ಒಂದೊಂದು ಅರ್ಥವೂ ಮೂಲ ವ್ಯಾಪ್ತಿಯನ್ನು ಕಳೆದುಕೊಂಡಿರಬೇಕು. ಹೊಸ ಅರ್ಥ ಛಾಯೆಯನ್ನು ಪಡೆದಿರಬೇಕು. ಈಗಿನ ಭಾಷೆಯನ್ನು ಬಲ್ಲ ಮಾತ್ರಕ್ಕೆ, ಮೂಲ ಅರ್ಥ ಇದ್ದಕ್ಕಿದ್ದಂತೆಯೇ ಹೊಳೆದೀತೇ?

  • ನಿಜವಾದ ಸೂರ್ಯ ಮುಳುಗಿದ; ನಾಳೆ ಆತ ಬಂದಾನೆಂಬುದು ನಮ್ಮ ಅನುಭವ. ಆದ್ದರಿಂದಲೇ, ಮನುಷ್ಯ ಒಂದು ದಿನ ಸತ್ತರೂ, ನಾಳೆಯ ದಿನಇನ್ನೊಂದು ದೇಹವನ್ನುತಾಳಿ ಬರುತ್ತಾನೆ-ಎಂಬ ಭಾವನೆ ಮೊಳಗಿರಬೇಕು ಮನುಷ್ಯನ ಹೃದಯದಲ್ಲಿ. ಸಾಯುವುದಕ್ಕೆ ಇಷ್ಟವಿಲ್ಲದ ಮನುಸ್ಸುಅಂಥಾ ಕಲ್ಪನೆಗಳನ್ನು ತಾನೇ ಹೆಣೆಯಬೇಕು? ಈ ಸೂರ್ಯನಾದರೆ ತನಗಿರುವ ಕಾಯದೊಂದಿಗೆ ನಾಳೆಯೂ ಬರುತ್ತಾನೆ; ನಾಡಿದ್ದೂ ಬರುತ್ತಾನೆ;ದಿನ ದಿನವೂ ಬರುತ್ತಿರುತ್ತಾನೆ. ನಾವು! ಶರೀರವನ್ನು ಕಳಚಿ ಬಿಟ್ಟುಹೋಗುವ ಮಾನವ ಜೀವಿಗಳು; ಪುನರ್ಜನ್ಮದಲ್ಲಿ ಮತ್ತೊಂದು ಕಾಯಕವನ್ನು ಧರಿಸಿ ಬರುತ್ತೇವಂತೆ! ಈ “ಸೂರ್ಯ” ತಿರುಗಿ ಬಂದರೆ“ನಿನ್ನೆ ಬಂದು ಹೋದ ಸೂರ್ಯ ಇವನೇ”ಎಂಬುದನ್ನ ನಾವು ಗುರುತಿಸುತ್ತೇವೆ, ಮಾನವಪುನರ್ದೇಹಿಯಾಗಿ ಬಂದರೆ ಅವರನ್ನು ಗುರುತಿಸಬಲ್ಲೆವೇ? ಎಂದೂ ಇಲ್ಲ, ಗುರುತಿಸಿದವರಿಲ್ಲ. ಆದರೂ ಅಂಥಾ ಒಂದು ಹಂಬಲ ನಂಬಿಕೆಯಾಗಿ ನಮ್ಮ ಭಾವನೆಗಳಲ್ಲಿ ಬೇರೂರಿದೆ!ನಾವು ಹಿಂದೆ ಯಾವ ಅವತಾರ ತಾಳಿದ್ದೋ, ನಾಳೆ ಯಾವ ಜನ್ಮ ತಾಳಬಹುದು ಎಂದು ತಿಳಿಯಲಾರೆವಾದರೂ, ನಮ್ಮ ದೇವರ ಜನ್ಮಗಳನ್ನೆಲ್ಲಾ ನಾವು ಗುರುತಿಸಿದ್ದೇವೆ.ತಾನು ಸಹ ಚಿರಂತನವಾಗಿ ಬದುಕಬೇಕೆಂಬ ಆಸೆಯಿಂದ ಅವನು ಹೀಗೆ ಮಾಡುತ್ತಿರಬೇಕಲ್ಲವೇ?

  • ಹಾಲು ಹಾಲು ಬೆರೆತರೆ , ಅದು ಹಾಲು ಅಥವಾ ತುಂಬು ಹಾಲು . ಹಾಲು ನೀರು ಬೆರೆತರೆ ಬಣ್ಣ ಮಾತ್ರ ಹಾಲು , ಅದರ ರುಚಿ ಹಾಲಿನದಲ್ಲ . ಹಾಲು ಮಜ್ಜಿಗೆ ಬೆರೆತರೆ ಹಾಲಿನ ಸ್ವರೂಪವೇ ಉಳಿಯಲಾರದು . ಜೊತೆಗೆ ಅದು ತಾಮ್ರದಪಾತ್ರೆಯನ್ನು ಸೇರಿದರೆ ಕಿಲುಬದೆ ಉಳಿದೀತು ಹೇಗೆ?

  • ಮನುಷ್ಯ ಹುಟ್ಟುತ್ತಾನೆ , ಬಾಳುತ್ತಾನೆ , ಸಾಯುತ್ತಾನೆ . ಅವನ ಹುಟ್ಟಿನೊಂದಿಗೇ ಹುಟ್ಟಿಕೊಳ್ಳುವ ಬಾಂಧವ್ಯಗಳು , ಅವನನ್ನು ಬಂಧನದ ಬಳ್ಳಿಯಂತೆ ಸುತ್ತಿಕೊಳ್ಳುತ್ತವೆ . ಅಲ್ಲಿ ಸ್ವಾರ್ಥವೂ ಇರುತ್ತದೆ , ನಿಸ್ವಾರ್ಥವೂ ಇರುತ್ತದೆ . ನಂತರ ಬರುವ ಮಿತ್ರ ವರ್ಗದಲ್ಲಿ ವಂಚನೆಯೂ ಇರುತ್ತದೆ, ಉಪಕಾರವೂ ಇರುತ್ತದೆ . ಇವೆಲ್ಲ ಬಂಧನಗಳಿಗಿಂತ ಬಿಗಿಯಾದ , ಎಡೆಬಿಡದ ಬಂಧನವಾದ ದಾಂಪತ್ಯದಲ್ಲಿ ವಂಚನೆಗಳಿದ್ದರೆ ಅದು ಪ್ರತ್ಯಕ್ಷ ನರಕ . ಇಂತಹ ಗೋಜಲುಗಳಿಂದ ಕೂಡಿದ ಸಂಕೀರ್ಣ ಜೀವನದಲ್ಲಿಯೂ , ಒಬ್ಬ ವ್ಯಕ್ತಿ ಎಷ್ಟು ಸಮಾಜ ಮುಖಿಯಾಗಿ ಬದುಕಿದ ? ಅವನ ಹುಟ್ಟು ಮನುಷ್ಯ ಕುಲಕ್ಕೆ ಹೊರೆಯೇ ?ಸಹಕಾರಿಯೇ ? ಅವನು ನುಂಗಿದ ದುಃಖಗಳಿಗಿಂತಾ ಹಂಚಿದ ಸುಖ ಹೆಚ್ಚೇ ? ಕಡಿಮೆಯೇ ? ಅವನ ಒಟ್ಟೂ ಬದುಕೆಂಬುದು ಅನ್ಯರ ವಿಷಯದಲ್ಲಿ ಎಷ್ಟು ಸಹ್ಯವಾಗಿತ್ತು?
ಬದುಕಿನ ಒಂದು ಮೂಲಭೂತ ಅಂಶವಾದ ಕಾಮವನ್ನು ಕಾರಂತರು ಆರಾಧಿಸುವುದೂ ಇಲ್ಲ, ಧಿಕ್ಕರಿಸುವುದೂ ಇಲ್ಲ, ಒಪ್ಪಿಕೊಳ್ಳುತ್ತಾರೆ. ಕಾರಂತರ ನಿಲುವಿನಂತೆ ಬಾಳ್ವೆಯ ಪ್ರಶ್ನೆಯು ಒಬ್ಬರು ಬಾಳಿ, ಇನ್ನೊಬ್ಬರು ಉತ್ತರಿಸಿ, ಮೂರನೆಯವರು ಒಪ್ಪಿ ಸಾಗುವಂತಹ ಪ್ರಶ್ನೆ ಎಂದೂ ಆಗಿರಲಾರದು. ಅನಿವಾರ್‍ಯವಾಗಿರುವ ಬಾಳಿನ ರೀತಿಯನ್ನು ಕಂಡರೆ, ಅದು ಅವರವರು ಬಾಳಿ ಬದುಕಿ, ಅನುಭವಿಸಿ, ಹೋರಾಡಿ, ಪರಿಸ್ಥಿತಿಗಳಿಗೆ ಹೊಂದಿಕೊಂಡು ಪರಿಣಾಮಗೊಳ್ಳಬೇಕಾದ ಸಮಸ್ಯೆ.

ಓದಿದ ದಿನ ಪೂರ್ತಿ ನಾನು ನಾನಾಗಿರಲಿಲ್ಲ....

3 comments:

Dr.D.T.Krishna Murthy. said...

ಕಾರಂತರನ್ನು ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು.ನಮಸ್ಕಾರ.

sunaath said...

‘ಅಳಿದ ಮೇಲೆ’ ಕಾರಂತರ ಅದ್ಭುತ ಕಾದಂಬರಿಗಳಲ್ಲೊಂದು. ಆ ಕಾದಂಬರಿಯ ಉತ್ತಮ ಸಂದೇಶಗಳನ್ನು ಹೆಕ್ಕಿ ಕೊಟ್ಟಿರುವಿರಿ. ಧನ್ಯವಾದಗಳು.

L. PREMASHEKHARA said...

Meaningful thoughts. Thank you. I read "alida mele" more than two decades ago and liked it immensely.