ನನ್ನ ಪ್ರೀತಿಯ ವಿನು,
ಮತ್ತೆ ಅದೇ ಹೊಸತಿಲಲ್ಲಿ... ಅದೇ ಕೊಟೇಷನ್ ಜೊತೆ, " ಕೆಟ್ಟ ಮೇಲೂ ಬುದ್ದಿ ಕಲಿಯದವರನ್ನು ಆವೀನ್ ಅನ್ನಬಹುದು.
"ಮನಸಿಲ್ಲದ
ಮನಸಿನಿಂದ ಮನಸುಮಾಡಿ ಮಧುರಮನಸಿಗೇ
ಮನಸುಕೊಟ್ಟು
ಮನಸನ್ನೆ ಮರೆತು ಬಿಟ್ಟೆಯಾ, ಮನಸುಕೊಟ್ಟು ಮನಸೊಳಗೆ ಕುಳಿತು ಬಿಟ್ಟೆಯಾ"
ಒಪ್ಪುತ್ತೀನಿ..
ನಿನ್ನ ಮನಸ್ಸೂ ನನ್ನದರಂತೆ ಗೊಂದಲದ ಗೂಡಾಗಿದೆ. ಬಹುಮತವಿಲ್ಲದ ಅತಂತ್ರ ಸರ್ಕಾರದ ಸ್ಥಿತಿ
ನನ್ನದು. ಸಾಕೆನಿಸುತ್ತದೆ, ಹತ್ತು ಪದಗಳ ಬದಲು
ಒಂದು ಚಿತ್ರ. ನಿಜಕ್ಕೂ ನಾನು ನಾನಾಗಿ ಉಳಿಯದ ಈ
ಹೊತ್ತಿನಲ್ಲಿ ನನ್ನಲ್ಲಿ ಭಾವನೆಗಳ ತುಮುಲ. ಆತ್ಮಾವಹಳನೇಕೆ? ಅದರಿಂದ ನಿನಗೂ ಸುಖವಿಲ್ಲ... ನನ್ನ ಸುಖವಂತೂ ಮರೀಚಿಕೆ.
ಇರುವುದನ್ನ ಇದೆಯೋ-ಇಲ್ಲವೋ ಎಂದು ಉತ್ತರಿಸಲು ನಾನು ಕೇಳಿದ್ದು ಭರ್ತಿ 1 ದಿನ. ಹೆಡ್ಡ! ಅನುಮಾನವೇ ಇಲ್ಲ. ಒಪ್ಪಿದೆ.. ನೀನು!!!

"ಪೂಜೆಗೆ ಹೂಗಳನು
ಕಟ್ಟೋ ಕೈಗಳಿಗೆ ಗಂಧ ಸೋಕಿದರೆ ಜರಿವುದೆಂತೋ?" ನಿನ್ನದು ಎಂದಿನಂತೇ ಅರ್ಥಗರ್ಭಿತ ಪ್ರಶ್ನೆ. ನನ್ನದು
ಅದೇ ಎಳಸು ಬಡಬಡಿಕೆಯಾದಲ್ಲಿ ನನ್ನಲ್ಲಿ ನಿನ್ನಿರುವು ಕನಸೆ. ಇಂದಾದರೂ ಎಚ್ಚೆರಿಕೆಯ ಹಾದಿಯಲ್ಲಿ
ನನ್ನ ಅನಾವರಣವಾಗಲೇ ಬೇಕು. ನ್ಯಾಯದೇವತೆಯ ಸನ್ನಿಧಾನದ ಅರಿಕೆಯಲ್ಲೇ ನನ್ನ ಹರಕೆಯೂ ನಡೆಯಲಿ...
"ನಾನು
ಹೇಳುವುದೆಲ್ಲವೂ ಸತ್ಯ, ಸತ್ಯವನ್ನಲ್ಲದೆ
ಬೇರೇನನ್ನೂ ಹೇಳುವುದಿಲ್ಲ".
ತಿಂದ ಒಂದೆರಡು
ಹುಳಿಹಣ್ಣುಗಳ ದೆಸೆಯಿಂದ ಮಾರುಕಟ್ಟೆಯೇ ಹುಳಿಯೆಂದು ಹೊರವುಳಿದವನಿಗೆ ಅಪವಾದವೆಂಬಂತೆ ಕಂಡವಳು ನೀನು. ಬೀಳುವ ಪ್ರತಿ ಪೆಟ್ಟು ವಿಗ್ರಹವಾಗುವ ಬದಲು
ನನ್ನನ್ನೇ ಮುರಿದುಹಾಕಿದ ಸಂದರ್ಭದ ಹಳಹಳಿ ಈಗ ಕಳೆದ ಸಂಗತಿ. ಕಳೆದ ಸಂಗತಿಗಳ ಹಪಹಪಿ ಬೇಡ...
ಅಂತೆಯೇ ಭೂತದ ಹೊಣೆ ಹೊರದೆ ವರ್ತಮಾನದಲ್ಲಿ ನಾನು ನಿನ್ನಷ್ಟು ಪಾರದರ್ಶಕವಾಗಿ ಸಂಬಂಧಗಳ
ವ್ಯಾಖ್ಯಾನಿಸಲಾರೆ. ನನ್ನ ಅಂತರ್ಮುಖತೆ,ಹಟ,ನನ್ನಲ್ಲಿ ನನಗೇ ಇರದ ನಂಬಿಕೆಯಿಂದ ಮೂಡಹೊರಟಿದ್ದು
ನನ್ನ-ನಿನ್ನ ಸಂಬಂಧಗಳ ಮಹಾಪ್ರಸ್ಥಾನ. ಪ್ರತೀ ಬಾರಿ ನೀನು ಸೋತು ಗೆದ್ದೆ-ನಾನು ಗೆದ್ದು ಸೋತೆ.
ಗೆದ್ದ ಸಂತೋಷ, ಸೋತ ದುಖ್ಹ ಎರಡೂ
ನನ್ನಲ್ಲಿ ಉಳಿದಿಲ್ಲ.... ಕೇವಲ ನಾನು ನಾನಾಗಿದ್ದೇನೆ...ಇನ್ನಾದರೂ ಬದುಕುವ
ಕಲೆ ಕಲಿಯುವ ಹಂಬಲವಿದೆ. ಮನಸ್ತಾಪ ಮನುಷ್ಯರಿಗೆ ಬರದೇ ಮರಕ್ಕಾ ಬರುತ್ತೆ. ನನಗೆ ವಿನಯ ಬೇಕು...
ವಿನಯವಿಲ್ಲದೆ ಜಗವಿಲ್ಲ ಅಂದಮೇಲೆ ಆವೀನನೆಲ್ಲಿ?
ನನ್ನ ತೊಳಲಾಟ ಬಯಲಲ್ಲಿ ಇಟ್ಟ ಹಣತೆ. ಆರುವುದು ಶತಸ್ಸಿದ್ದ..
ಹಿಡಿಯಬಹುದು ಕೊಂಚ ಕಾಲ. ನಾವು ನಾವಾಗಿರೋಣ
ವಿನು... ಇಷ್ಟ-ಕಷ್ಟಗಳ ಗಿಜ್ಞಾಸೆ ಇಷ್ಟೆಲ್ಲಾ ಕುರುಕ್ಷೇತ್ರಕ್ಕೆ ಕಾರಣ. “ಫಾರ್ಮ್ಯಾಲಿಟಿ”
ನಮ್ಮ ನಡುವೆ ಬಯಸದೆ ಸುಳಿದ ಮುಂದೆಂದೂ ಸುಳಿಯಬಾರದ ಪದ. ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ಅವಿರತ. ಮತ್ತೊಮ್ಮೆ
ಕೇಳುತ್ತಿದ್ದೇನೆ ವಿನು.... ನೀನು
ನನ್ನವಳಾಗಿರುತ್ತೀಯ? ನನ್ನ ಅರ್ಥವಿಲ್ಲದ ಹತಾಶೆ/ಜಿಗುಟುತನವನ್ನ ಮೀರಿ
ನಿನ್ನವನಾಗಿರುವ ಹೊಣೆ ನನ್ನದು. ನನ್ನ ಹೊಣೆಗಾರಿಕೆಯ ಶಿಲುಬೆಯನ್ನ ನಾನು ಹೊರುತ್ತೇನೆ.
ನನ್ನ ದಾರಿಯ ನಾನೇ ನೋಡಿ ಹಿಡಿದೆನು ಇನ್ನು
ಕೈ ಹಿಡಿದು ನಡೆಸು ನೀನು
ಮಿರುಗು ಬಣ್ಣಕೆ ಬೆರೆತು ಭಯಮರೆತು ಕೊಬ್ಬಿದೆನು
ಮೆರೆದಾಯ್ತು ನೆನೆಯದಿರು ಹಿಂದಿನದೆಲ್ಲ.
ಕೈ ಹಿಡಿದು ನಡೆಸು ನೀನು
ಮಿರುಗು ಬಣ್ಣಕೆ ಬೆರೆತು ಭಯಮರೆತು ಕೊಬ್ಬಿದೆನು
ಮೆರೆದಾಯ್ತು ನೆನೆಯದಿರು ಹಿಂದಿನದೆಲ್ಲ.
ಇಷ್ಟುದಿನ ಸಲಹಿರುವೆ ಮೂರ್ಖನನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ.....
ಕೈ ಹಿಡಿದು ನಡೆಸದಿಹೆಯಾ.....
ನಿನ್ನ
ಅವಿ.
4 comments:
‘ನನ್ನ ಹೊಣೆಗಾರಿಕೆಯ ಶಿಲುಬೆಯನ್ನು ನಾನೇ ಹೊರುತ್ತೇನ.’--Beautiful!
super....
tumbaa ishTavaagi eraDeraDU saari Odide.....
ishTa aaytu...
Thanks Sunath and Dinakar for your comments!!
ನಿಮ್ಮ ಬುದ್ಧಿವಂತಿಕೆಯ ಹಾಗು ಮೂರ್ಖತನದ ಅನಾವರ್ಣ ತುಂಬ ಚೆನ್ನಾಗಿ ಮೂಡಿ ಬಂದಿದೆ.
"ಇಷ್ಟುದಿನ ಸಲಹಿರುವೆ ಮೂರ್ಖನನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ"
ಈ ಸಂದೇಶ ನಿಮ್ಮವರಿಗೆ ತಲುಪಲಿ ಎಂದು ಆಶಿಸುತ್ತೇನೆ...
Post a Comment