Friday, October 19, 2012

ಮಥುರಾ ನಗರಪತಿ ಗೋಕುಲದ ಉತ್ಕಟತೆ ಏಕೆ?


ಪ್ರೀತಿ ಹಾಗೂ ವಿರಹದ ಉತ್ಕಟೆಗೆ ಮತ್ತೊಂದು ಹೆಸರೇ ಕೃಷ್ಣ ಮತ್ತು ರಾಧೆ. ಯಮುನಾ ತಟದಲ್ಲಿ ವಿಹಾರಿಸುವಾಗಲೂ, ವಿರಹದಿ ವಿರಮಿಸುವಾಗಲೂ ಒಬ್ಬರು ಮತ್ತೊಬ್ಬರ ನೆನಪಲ್ಲಿ ವಿಲೀನ...ತಮ್ಮ ಇರುವಿಕೆಯನ್ನೇ ಮರೆತ  ತನ್ಮಯತೆ. ಹದ ತಪ್ಪಿದ್ದಾದರೂ ಎಲ್ಲಿ? ಜಗತ್ತನ್ನೇ ಗೆಲ್ಲುವ ಛಲವಿದ್ದ ಕೃಷ್ಣನಿಗೆ ತನ್ನ ರಾಧೆಯನ್ನು ದಕ್ಕಿಸಿಕೊಳ್ಳಲಾಗಲಿಲ್ಲ. ಸಮಾಜದ ಕಟ್ಟುಪಾಡುಗಳನ್ನ ಮೀರಿ ಕೃಷ್ಣನನ್ನು ಗಂಡನಂತೆ ಕಂಡ ರಾಧೆಗೆ ಅದೇ ಸಮಾಜದ ಎದುರಿನಲ್ಲೇ ಛಲದಂಕಮಲ್ಲನೊಡನೆ ಬಾಳುವೆ ಮಾಡಲಾಗಲಿಲ್ಲ....

 ಕಟ್ಟುಪಾಡುಗಳ ಸಂತೆ ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯದಾಚೆಗೂ ಸಂಬಂಧಗಳ ಒಪ್ಪಿಗೆ ಸಮಸ್ತರಿಂದಲೂ ಸಿಕ್ಕಿದ್ದೇ ಇದ್ದಲ್ಲಿ ಅದು ರಾಧಾ ಕೃಷ್ಣರಿಗೆ ಮಾತ್ರ.  ಆಸ್ತಿಕರು ದೈವಕೃಪೆ, ದೇವಲೀಲೆ ಹಾಗೆ ಹೀಗೆ ಏನೇನು ಹೇಳಿದರೂ ಇವರ ಪ್ರೀತಿ ಕೊಂಚ ಮರ್ಯಾದೆಯ ಚೌಕಟ್ಟಿನ ಹೊರಗೇ...   ಸೂಜೆ ಮೊನೆಯಷ್ಟು ಭೂಮಿಗಾಗಿ ಅಣ್ಣ -ತಮ್ಮರೇ ಕೊಲ್ಲಾಡುವಂತಹ ಜನಮಾನಸದಿಂದಲೂ ಇವರೀರ್ವರ  ಪ್ರೀತಿಗೆ ಮನ್ನಣೆ. ಆದರಣೆ.

ತನುಮನದಲ್ಲೂ ರಾಮನವಳಾಗಿದ್ದ ಸೀತೆ, ಛದ್ಮವೇಷಧಾರಿಯೊಡನೆ ಗಂಡನೊಡನಾಡುವ ಸಲುಗೆಯಿಂದಲೇ ಮಿಲನಗೈದ ಅಹಲ್ಯೆ, ಮಂಡೋದರಿ, ಜಗವಾಳುವ ಪಂಚವೀರ್ಯವಂತರಿಂದ ಮಕ್ಕಳು ಪಡೆದರೂ ಜೀವನಪೂರ್ತಿ ವೈಧವ್ಯದಲ್ಲೇ ಕಾಲಕಳೆದ ಕುಂತಿಯರಿಗೆ ಕಾಡಿದ ಧರ್ಮದ ಕಟ್ಟಳೆ ರಾಧೆಗೆ ಅಂಕುಶವಾಗಲಿಲ್ಲ.... ರಾಧೆಗೆ ಸಿಕ್ಕ ಈ ಬೌದ್ಧಿಕ ಸ್ವಾತಂತ್ರ್ಯ ಪಂಚ ಪತಿವ್ರತೆಯರಾರಿಗೂ ದೊರಕದಿರುವುದು ನಿಜಕ್ಕೂ ವಿಪರ್ಯಾಸ.  ಈ ಸ್ವಾತಂತ್ರ್ಯದಲ್ಲೇ ಕಾಯುತ್ತಾ ನಿಂತ ರಾಧೆ... ಮೇಘರಾಜನ ವರ್ಷಧಾರೆಗೆ ನಿಲುಕಿಸುತ್ತಿರುವ ಧರಣಿಯಂತೆ.


" ಏರುನದಿಗೆ ಇದಿರಾಗಿ ಈಜಿ ದಡಸೇರಬಹುದೇ ಜೀವ ದಾಟಿ ಈ ಪ್ರವಾಹ"... ಪ್ರೀತಿಯೂ ಅಂತೆ ಕಂತೆ. ಸರ್ವವೂ ಪ್ರೀತಿಯಲ್ಲಿ ಸಹ್ಯ.
       
" ನಿನ್ನನಗಲಿದ ಕ್ಷಣದ ನಿನ್ನವಳ ಕಣ್ಣಂಚಿನ ಹನಿ ಒಣಗಿ ಕಾಲ ಸರಿದಾಗಿದೆ
ನಿನ್ನ ಪ್ರೀತಿ ಈಗ ತುಂಬು ಗೃಹಿಣಿ
ಈಗಲೂ  ಏಕೆ ಗೋಕುಲಕ್ಕೆ ಹೋಗುವ ತವಕ ಓ ಮಥುರಾನಗರಪತಿ"

ಮಲಗಿದ್ದವ ಬೆಚ್ಚಿ ಎದ್ದೆ. ಕಣ್ಣಗಲಿಸಿ ಹುಡುಕಾಡಿದೆ.... ಯಾಕೋ ಕೃಷ್ಣನ ಭಾರದ ಹೆಜ್ಜೆಗಳು ಸನಿಹದಲ್ಲೇ ಓಡಿದಂತಾಯಿತು.

ಹೆಚ್ ಎಸ್ ವಿಯವರ ಪ್ರೀತಿಯುಟ್ಕತೆಯ "ತೂಗುಮಂಚದಲ್ಲಿ ಕೂತು",ರೈನ್ ಕೋಟ್ ಚಿತ್ರದ " ಮಥುರಾ ನಗರಪತಿ" ಹಾಡುಗಳು ನನ್ನನ್ನು ಸಮಯದ ದಿವಾಳಿತನದಂಚಿಗೆ ನಿಲ್ಲಿಸಿವೆ. ಅದಕ್ಕೆ ಖುಷಿಯಿದೆ.....ಅಂತಹ ಪ್ರೀತಿಯ ಪಾಲು ನನಗಿಲ್ಲ; ಅಷ್ಟೇ ದುಖ್ಖವೂ ಇದೆ.

ನಿಮ್ಮ
ಅವಿ

No comments: