Saturday, October 6, 2012

ಕಾವೇರಿ.. T20, ಕೂಲಿಂಗ್ ಗ್ಲಾಸ್ ಹಾಗೂ 90

ನಮ್ಮ ಜನಗಳ ಕಳಕಳಿ ಒಪ್ಪುವಂತಹುದೇ... ರಾಲಿ ಕೂಗಿ, ಕೂಲಿಂಗ್ ಗ್ಲಾಸ್ ಕಣ್ಣಲ್ಲಿ ಕಿಡಿಕಾರಿ, ಧಿಕ್ಕಾರ ಕೂಗಿ, 2 ಹೊತ್ತು ಉಪವಾಸ ಕೂತು ಸಂಜೆ ಮನೆಗೆ ಹಿಂತುರಿಗಿ ಟಿ20 ಮ್ಯಾಚ್ ನೋಡುವ ಪ್ರತಿಭಟನೆಗಳು ಯಾರ ಮೇಲೆ ಒತ್ತಡ ತರುತ್ತವೆ ನಿಜಕ್ಕೂ ತಿಳಿಯುತ್ತಿಲ್ಲ....

ದಿನದಿಂದ ದಿನಕ್ಕೆ ಪ್ರತಿಭಟನೆ ತೀವ್ರಗೊಳ್ಳುತ್ತಲೇ ಇದೆ... ರಸ್ತೆ ಬದಿಗಳಲ್ಲಿ, ಪ್ರಮುಖ ಸರ್ಕಲ್ ಗಳಲ್ಲಿ...

ಜನಸಾಮಾನ್ಯ ಓಡಾಡುವ ಸಾರ್ವಜನಿಕ ವಾಹನಗಳ ಹೆದ್ದಾರಿಗಳನ್ನು ಬಂಧ್ ಮಾಡಿ, ಪರೀಕ್ಷೆ ಸಮಯದಲ್ಲಿ ಶಾಲಾ ಕಾಲೇಜುಗಳ ವೇಳಾಪಟ್ಟಿ ಹಿಂದೂ-ಮುಂದುಮಾಡಿ ಸರ್ಕಾರಕ್ಕೆ ಒತ್ತಡ ತರುತ್ತೇವೆ ಅನ್ನುವ ಭ್ರಮೆ ಅರಿಯದ ದಾರಿ ತಿಳಿಯದ ಅನ್ನದಾತನಿಗಿರಬಹುದು..... ತಿಳಿದ ಬುದ್ದಿಜೀವಿಗಳಿಗೆಕಿಲ್ಲ?

ಕೆ‌ ಆರ್ ಎಸ್ ನಿಂದ ನಿನ್ನೆ ರಾತ್ರೋ  ರಾತ್ರಿ ಮತ್ತೆ 4 ಹೊಸ ಕ್ರಿಸ್ಟ್ ಗೇಟ್ ಓಪೆನ್ ಮಾಡಿದ್ದಾರೆ... ನೀರು ಧಾರಾಕಾರ ಹರಿದು ಹೋಗುತ್ತಿದೆ....ತಡೆಯಬೇಕಾದ ನಮ್ಮ ಜನ ಆಳುವವರ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಸರ್ಕಲ್ ,ಹಾದಿ ಬೀದಿಗಳಲ್ಲಿ ಬ್ಯುಸಿಯೋ ಬ್ಯುಸಿ.

ಏಕೆ ಹೀಗೆ? ನಿಜಕ್ಕೂ ಅಷ್ಟು ಕಳಕಳಿ ಇರುವವರು ವಿಧಾನ ಸೌಧದ ಮುಂದೇಕೆ ಧರಣಿ ಕೂರೊಲ್ಲ? ಮುಖ್ಯಮಂತ್ರಿಗಳ/ಆಳುವ ಬಾಬುಗಳ ಮನೆಗೇಕೆ ಘೇರಾವು ಹಾಕುವುದಿಲ್ಲ? ಪ್ರಾಣ ಕೊಟ್ಟೆವು .. ಹನಿ ನೀರು ಬಿಡೆವು ಎಂದು ಗಂಟಲು ಹರಿಯುವಂತೆ ಕಾಣದ ಟೌನ್ ಹಾಲ್, ಪ್ಯಾಲೇಸ್ ಗ್ರೌಂಡ್ , ಬಸವನಗುಡಿ ಮೈದಾನದಲ್ಲಿ ಕಿರುಚುವ ಬದಲು ಆಳುವವರ ಕಿವಿ ಸನಿಹದಲ್ಲೇಕೆ ನಿಮ್ಮ ದನಿಮೂಡಿಸುವುದಿಲ್ಲ?  ಹಳ್ಳಿಯಲ್ಲಿ ಪಂಚಾಯ್ತಿ ಹಂತದಲ್ಲಿ, ತಾಲೂಕಿನಲ್ಲಿ ತಹಸೀಲ್ದಾರರ ಹಂತದಲ್ಲಿ, ಜಿಲ್ಲಾವಾರಿನಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲೇಕೆ, ಅವರ ಮನೆ, ಆಫೀಸುಗಳ ಮುಂದೇಕೆ ಸರದಿ ಪ್ರಕಾರ 24/7 ಧರಣಿಗಳು ಮೂಡುವುದಿಲ್ಲ?

ಪ್ರತಿಭಟನೆಯ ದನಿಗೆ ಅಡ್ಡ ನಿಲ್ಲುವ ಪೊಲೀಸರೂ ಕೂಡ ಅದೇ ಕಾವೇರಿಯ ಮಕ್ಕಳೇ.... ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಕಾರ್ಯವೈಖರಿಯನ್ನು ವಿಮರ್ಶೆ ಮಾಡಲು ಒಂದು ಕರೆ ಕೊಟ್ಟ ಒಬ್ಬ ಜನ ಪ್ರತಿನಿಧಿಯನ್ನೂ ಕಾಣೆ!!... ಅಮರಣ ಉಪವಾಸ ಮಾಡುವ so called ಜಲಾಭಿಮಾನಿಗಳು ವಿಧಾನ ಸೌಧದ ಮುಂದೆ ಮಾಡಿ.... ಉಚ್ಚಿ ಮಾಡಿದ್ದಕ್ಕೆ, ಹೊಡೆದಿದ್ದಕ್ಕೆ, ಬೈದಿದ್ದಕ್ಕೆ ಅಳುತ್ತಾ ಹೈಕಮಾಂಡ್ ಎದುರು ಕಿರುಲಾಡುವ ರಾಜ್ಯ ಕಾಂಗ್ರೆಸ್ಸ್ ನಾಯಕರು ಅವರದೇ ಹೈಕಮಾಂಡ್ ಮಾಡಿರುವ ಈ ಇಬ್ಬಂದಿತನಕ್ಕೆ ತಿರುಗಿ ಗಂಟುಬೀಳುವಂತೆ ಅವರ ದೈನಂದಿನ ಜೀವನವನ್ನು ಹಾಳವುಗೆಡವಿ!! ಆಳುವ ಚುವಾಯಿತ ಪ್ರತಿನಿಧಿಗಳ ದೈನಂದಿನ ಜೀವನ ನರಕ ಮಾಡಿ...

ಅದು ಒಪ್ಪುವ ಮಾತು... ಜನ ಸಾಮಾನ್ಯನದಲ್ಲ

ಕಾನೂನು ಸಮರದಲ್ಲಿ ಪ್ರತೀ ಬಾರಿಯೂ ಕನ್ನಡಿಗರ ಹದ ತಪ್ಪುತ್ತಿದೆ ಎಂದಾದಲ್ಲಿ ಒಂದೋ ನಮ್ಮ ಬೇಡಿಕೆಯಲ್ಲೇ ತಪ್ಪಿದೆ.. ಇಲ್ಲವಾದಲ್ಲಿ ನಮ್ಮ ವಿಚಾರಮಂಡನೆ ಸರಿಯಿಲ್ಲ ಎಂದರ್ಥ... ಮೊದಲನೆಯದು "ಖಡಾಖಂಡಿತ ಆಗದ ಮಾತು" ಅನ್ನುವುದೇ ನಮ್ಮ-ನಿಮ್ಮಲ್ಲರ ಒಕ್ಕೊರಳಿನ ಮಾತು. ಅಂತಾದಲ್ಲಿ ನಮ್ಮ ವಾದದಲ್ಲಿ ಹುರುಳಿಲ್ಲ. ದಶಕಗಳಿಂದಲೂ ನ್ಯಾಯಾಲಯಕ್ಕೆ ನಮ್ಮ ಬೇಡಿಕೆ ಮನವರಿಕೆ ಮಾಡಲು ನಾವು ಸೋಲುತ್ತಿದ್ದೇವೆ ಎಂದಾದಲ್ಲಿ ಸೈದ್ದಾಂತಿಕ ನಿಲುವಿನ ಪ್ರತಿಪಾದನೆಗಾಗಿ ಅರ್ಹ ವಕೀಲರನ್ನ ನೇಮಿಸುವ, ನಮ್ಮ ವಾದ ಪುಷ್ಟೀಕರಿಸಲು ಬೇಕಾದ ಹತ್ತು ಹಲವು ಸಾಕ್ಷ್ಯ-ಸಂದರ್ಭಗಳನ್ನ ಒದಗಿಸುವ ಗುರುತರ ಜವಾಬ್ದಾರಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಬದಲು ನವೆಂಬರ್ ಕನ್ನಡಾಭಿಮಾನದಂತೆ, ಚಳಿಗಾಲದ ಕಾವೇರಿ ಚಳುವಳಿ ಪ್ರತೀ ವರ್ಷ ಪುನರಪಿ ಜನನಂ: ಪುನರಪಿ ಮರಣಂ  ತರಹ ಜೀವಂತವಿಡುವಲ್ಲಿ  ಏಕೆ ಇಷ್ಟು ಕಾತರರಾಗಿದ್ದೇವೆ?

ಕೇಂದ್ರ ಸರ್ಕಾರ 1 ಕಲ್ಲಿಗೆ ಎರಡು ಹಕ್ಕಿ ಹೊಡೆದಿದೆ.  ತಮಿಳುನಾಡಿಗೆ ಬಂಪರ್, ಕರ್ನಾಟಕ ಬಿ ಜೆ ಪಿಗೆ ಷಾಕ್. ನಾವು ಬಿ ಜೆ ಪಿ ದೂರುತ್ತಿದ್ದೇವೆ... ಅವರು ಕುರ್ಚಿ ರೇಸಿನಲ್ಲಿ ಬ್ಯುಸಿ....  ಇನ್ನೂ ಕಾಂಗ್ರೆಸ್, ದಳಕ್ಕೆ  ಸಿಕ್ಕಿದ್ದೇ  ಛಾನ್ಸ್ ಎಂದು ನಮ್ಮ ಬೀದಿ ಬವಣೆಗೆ ಐಷಾರಾಮಿ ಕಾರಿನಲ್ಲಿ ಬಂದು ಸಾಥ್/ಪೊಸು ಕೊಡುತ್ತಿದ್ದಾರೆ.

ಉರಿಯುತ್ತಿರುವ ಮನೆಯಲ್ಲಿ ಸಿಗರೇಟು ಹಚ್ಚಿಕೊಳ್ಳುವ ಮನೋಭಾವದವರು ನಮ್ಮ ಹೀನಲಾಡಿ ರಾಜಕಾರಣಿಗಳು. ಹರಿಯುವ ನೀರು ಹರಿದಷ್ಟೂ ಹೋಗಲಿ... ಜನ ಕಚ ಪೀಚ ಕಿರುಲಾಡಿ ಒಂದು ಹಂತಕ್ಕೆ ಬರುವಷ್ಟರಲ್ಲಿ ನೀರು ಹೋಗಿರುತ್ತದೆ... ಆಗ, "ನೋಡ್ರಪ್ಪ ನೀವು ಹೇಳಿದಂತೆ ನೀರನ್ನು ಬಿಡುತ್ತಿಲ್ಲ.. ಸಮಾಧಾನ ತಾನೇ?" ಅನ್ನುವ ಧಾಟಿಯಲ್ಲಿ ಆಳುವ ವರ್ಗ ವ್ಯಂಗ್ಯನಗೆ ಬೀರುತ್ತದೆ... ಖುಷಿಯಲ್ಲಿ ಟಿ20, 90 ಹೊಡೆದು ಮಲಗಿ ಮುಂದಿನ ಕಾವೇರಿ ಗಲಭೆಯಲ್ಲಿ ಎಚ್ಚೆತ್ತು ಮತ್ತೆ ಹೀಗೇ ಆಲಾಪನೆ ಶುರುಮಾಡುವ ಬದಲು ಇಂದೇ ಎಚ್ಕೆಟ್ಟುಕೊಳ್ಳೋಣ....ನಿಮಗೆ ಅಷ್ಟು ಕಿಚ್ಚೇ ಇದ್ದಲ್ಲಿ Paralyze the Administrative system ....!!  ಕಬ್ಬಿಣ ಕಾಯುವ ಮೊದಲೇ ತಟ್ಟುವ ಹುಚ್ಚು ಸಾಹಸದಲ್ಲಿ ನಮ್ಮ ಕೈಯೇ ನೋಯುವುದು..ಇನ್ನಾದರೂ ಪ್ರತಿಭಟನೆಯ ಸ್ಥಳ, ಕಾರ್ಯವೈಖರಿ ವೈಜ್ಞಾನಿಕತೆಯಿಂದ ಕೂಡಿರಲಿ.... ಅಷ್ಟರಲ್ಲಿ ನಮ್ಮ ಕಾವೇರಿಯ ನೀರು ನಿಮ್ಮಿಂದ ಬಿಟ್ಟು ಹೋಗದಿರುತ್ತದೆ ಎಂಬ ಭರವಸೆಯಲ್ಲಿ

No comments: